ಸುರಪುರ: ಪೊಲೀಸ್ ಹುತಾತ್ಮ ದಿನಾಚರಣೆ ಅಂಗವಾಗಿ ನಗರದ ಶ್ರೀಪ್ರಭು ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಎಂಬ ವಿಷಯದ ಕುರಿತು ಪ್ರಬಂಧ ಬರೆಯುವ ಸ್ಪರ್ಧಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುರಪುರ ಉಪ ವಿಭಾಗದ ಡಿ.ವಾಯ್.ಎಸ್.ಪಿ ಶಿವನಗೌಡ ಪಾಟೀಲ ಮಾತನಾಡಿ,ಇಂದು ಸಮಾಜದಲ್ಲಿ ನಡೆಯುವ ಅನೇಕ ಚಟುವಟಿಕೆಗಳಿಗೆ ಪೊಲೀಸ್ ಇಲಾಖೆಗೆ ಎಲ್ಲಾ ರೀತಿಯಲ್ಲಿ ಸಹಕಾರಿಯಾಗಿದೆ.ಪೊಲೀಸ್ ಇಲಾಖೆ ಜನರೊಂದಿಗೆ ಉತ್ತಮ ಒಡನಾಟದ ಮೂಲಕ ಜನಸ್ನೇಹಿಯಾಗಿದೆ.ಜನರು ಕೂಡ ಪೊಲೀಸರ ಬಗ್ಗೆ ಯಾವುದೆ ರೀತಿಯ ಭಯವಿಲ್ಲದಂತೆ ನಮ್ಮೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಂಡರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಾಗಲಿದೆ.ಆದ್ದರಿಂದ ಎಲ್ಲರು ಕಾನೂನನ್ನು ಗೌರವಿಸುತ್ತ ನಡೆಯುವುದು ಮುಖ್ಯವಾಗಿದೆ ಎಂದರು.
ಮತ್ತೋರ್ವ ಅತಿಥಗಳಾಗಿದ್ದ ಪೊಲೀಸ್ ಇನ್ಸ್ಪೇಕ್ಟರ್ ಆನಂದರಾವ್ ಮಾತನಾಡಿ, ಪೊಲೀಸ್ ಇಲಾಖೆ ಜನರಲ್ಲಿ ಕಾನೂನು ಪಾಲನೆ ಮತ್ತು ಸಮಾಜದಲ್ಲಿ ಶಾಂತಿ ಸಹಬಾಳ್ವೆಯ ಕುರಿತು ಜನ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತದೆ.ಸಾರ್ವಜನಿಕರು ಯಾವುದೆ ರೀತಿಯ ಕೆಟ್ಟ ಘಟನೆಗಳು ಜರುಗದಂತೆ ನಡೆದುಕೊಂಡಲ್ಲಿ ಪೊಲೀಸ್ ಇಲಾಖೆ ನಿಮ್ಮ ಸ್ನೇಹಿಯಾಗಿರಲಿದೆ.
ಸಮಾಜಶಾಸ್ತ್ರ ಉಪನ್ಯಾಸಕ ಸಾಯಿಬಣ್ಣ ಮುಡಬೂಳ ಮಾತನಾಡಿ,ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಪೊಲೀಸರ ಕಾರ್ಯ ಶ್ಲಾಘನಿಯವಾದುದು.ಹಿಂದೆ ಪೊಲೀಸರೆಂದರೆ ಜನರು ಹೆದರುತ್ತಿದ್ದರು.ಆದರೆ ಇಂದು ಜನರಲ್ಲಿಯೂ ಕಾನೂನಿನ ಬಗ್ಗೆ ಅರಿವು ಮೂಡಿದೆ ಜೊತೆಗೆ ಪೊಲೀಸ್ ಇಲಾಖೆಯು ಕೂಡ ಸಾರ್ವಜನಿಕರ ಸ್ನೇಹಿಯಂತೆ ಇರುವುದರಿಂದ ಜನರು ಇಲಾಖೆಯ ಬಗ್ಗೆ ಗೌರವ ಭಾವನೆ ಹೊಂದಿದ್ದಾರೆ.ಅದರಂತೆ ಸಮಾಜದ ಸ್ವಾಸ್ಥ್ಯಕ್ಕಾಗಿ ಕರ್ತವ್ಯ ನಿರ್ವಹಿಸುವಾಗ ಅನೇಕ ಜನ ಪೊಲೀಸರು ಹುತಾತ್ಮರಾಗುತ್ತಾರೆ.ಅಂತಹ ಪೊಲೀಸರಿಗಾಗಿ ಇಂದು ನಡೆಸುತ್ತಿರುವ ಪ್ರಬಂಧ ಸ್ಪರ್ಧೆ ಮಹತ್ತರವಾದುದಾಗಿದೆ ಎಂದರು.ಇದೇ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಇತಿಹಾಸ ವಿಭಾಗದ ಉಪನ್ಯಾಸಕ ಸುರೇಶ ಮಾಮಿಡಿ ಹಾಗು ಅಧ್ಯಕ್ಷತೆ ವಹಿಸಿದ್ದ ಪಿ.ಯು ವಿಭಾಗದ ಪ್ರಾಂಶುಪಾಲ ವಾರೀಶ್ ಕುಂಡಾಲೆ ಮಾತನಾಡಿದರು.
ನಂತರ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಪವಿತ್ರಾ ಹಾಗು ಗಂಗಾ ಉದಯಕುಮಾರ ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಉಮಾಕಾಂತ ಹೆಚ್.ಸಿ,ನಿಂಗನಗೌಡ,ಜಗದೀಶ,ದಯಾನಂದ ಹಾಗು ಮಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳಾದ ಮಲ್ಲರಾವ್ ಕಲಬುರ್ಗಿ,ಯಲ್ಲಪ್ಪ ಜಹಾಗೀರದಾರ,ಸಂತೋಷ ಹೆಡಗಿನಾಳ ಉಪಸ್ಥಿತರಿದ್ದರು.ನೀಲಾಂಬಿಕಾ ಜೇವರ್ಗಿ ನಿರೂಪಿಸಿದರು,ಡಾ:ಉಪೇಂದ್ರ ನಾಯಕ ಸುಬೇದಾರ ಸ್ವಾಗತಿಸಿದರು,ಹಣಮಂತಿ ಸಿಂಗೆ ವಂದಿಸಿದರು.