ಸಿಪಿಐ (ಎಂ)ನ 4ನೇ ಸಮ್ಮೇಳನ / ಬಿಜೆಪಿ-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು
ಶಹಾಬಾದ: ಒಂದೇ ನಾಣ್ಯದ ಎರಡು ಮುಖಗಳಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಜನ ಸಾಮನ್ಯ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಆರೋಪಿಸಿದರು.
ಅವರು ಶಹಬಾದ, ಚಿತ್ತಾಪುರ ಕಾಳಗಿ ಮತ್ತು ಸೇಡಂ ಸಮಗ್ರ ಅಭಿವೃದ್ಧಿಗಾಗಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್ ವಾದಿ) ವತಿಯಿಂದ ಶನಿವಾರ ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ 4ನೇ ಸಮ್ಮೇಳನದ ಭಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ರೈತರು ಬೆಳೆ ಬೆಳೆದಿಲ್ಲ. ಕೃಷಿ ಕೂಲಿಕಾರರಿಗೆ ಉದ್ಯೋಗ ದೊರೆಯುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ರೈತರು ಹಾಗೂ ಕೃಷಿ ಕೂಲಿಕಾರರು ಬೇರೆ ರಾಜ್ಯ ಹಾಗೂ ಜಿಲ್ಲೆಗಳೆಡೆಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹೀಗಿದ್ದರೂ ರಾಜ್ಯ ಸರಕಾರವಾಗಲೀ, ಕೇಂದ್ರ ಸರಕಾರವಾಗಲೀ ರಾಜ್ಯದ ರೈತರ, ಕೂಲಿಕಾರರ ಕಡೆಗೆ ಗಮನಹರಿಸಿ ಅವರಿಗೆ ಸಿಗಬೇಕಾದ ಪರಿಹಾರವನ್ನು ನೀಡುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.
ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ದೇಶದ ಶ್ರೀಮಂತರಾದ ಬಂಡವಾಳ ಶಾಹಿಗಳ ಸೇವೆ ಮಾಡುತ್ತಿದ್ದಾರೆ. ಅವರು ಬಡವರ ಪರವಾಗಿ ಇಲ್ಲ. ಕೂಲಿ ಕಾರ್ಮಿಕರಿಗೆ ಸಿಗಬೇಕಾದ ಭತ್ಯೆ, ಪರಿಹಾರವನ್ನು ನೀಡುವ ಜತೆಗೆ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರಿಗೆ ನೀಡುತ್ತಿರುವ ಕೂಲಿ ಹಣವನ್ನು ಹೆಚ್ಚಳ ಮಾಡಬೇಕು. ಹಾಗೂ ಮಾನವ ದಿನಗಳ ಹೆಚ್ಚಳ ಮಾಡಬೇಕು. ಇಲ್ಲದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ನಾವೆಲ್ಲರೂ ಒಂದಾಗಿ ಸತ್ಯದ ಪರವಾಗಿ ಹೋರಾಟ ಕೈಗೊಳ್ಳೋಣ.ಆಗ ಮಾತ್ರ ನಮಗೆ ಸಿಗಬೇಕಾದ ಹಕ್ಕುಗಳು ಸಿಗಲು ಸಾಧ್ಯ ಎಂದು ಹೇಳಿದರು.
ವೇದಿಕೆ ಮೇಲೆ ಎಂ.ಬಿ. ಜಜ್ಜನ್, ರಾಯಪ್ಪ ಹುರಮುಂಜಿ, ಶೇಕಮ್ಮ ಕುರಿ, ಕಾಶಿನಾಥ ಭಂಡೆ, ಅಯ್ಯಪ್ಪ ಸೇಡಂ, ವೀರಯ್ಯ ಸ್ವಾಮಿ, ನಾಗಪ್ಪ ರಾಯಚೂರಕರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಬಣ್ಣ ಗುಡುಬಾ, ರೇವಯ್ಯ ಸ್ವಾಮಿ, ಸಿದ್ದಮ್ಮ ಮುತಗಿ, ಕ್ಷೇಮಲಿಂಗ ಭಂಕೂರ ಸೇರಿದಂತೆ ಕಾರ್ಮಿಕ ಸಂಘಗಳು ಅಂಗನವಾಡಿ, ಆಶಾ, ಬಿಸಿಊಟ ಮತ್ತು ನರೇಗಾ ಕಾರ್ಮಿಕರು ನೂರಾರು ಜನರು ಭಾಗವಹಿಸಿದ್ದರು.