ಸೇಡಂ : ಕನ್ನಡದಲ್ಲಿ ಕಾನೂನು ಸಾಹಿತ್ಯ ಹೆಚ್ಚಾಗಬೇಕಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಾಗರ ಗುರುಗೌಡ ಪಾಟೀಲ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಗುರುವಾರ ವಕೀಲರ ಸಂಘ ಮತ್ತು ಸಂಸ್ಕೃತಿ ಪ್ರಕಾಶನ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಕೀಲ ರವೀಂದ್ರ ಇಂಜಳ್ಳಿಕರ್ ರಚಿಸಿದ ‘ಭಾರತೀಯ ಕಾನೂನು ಕೈಪಿಡಿ’ ಪುಸ್ತಕ ಲೋಕಾರ್ಪಣೆ ಮಾತನಾಡಿದ ಅವರು, ಕನ್ನಡಭಾಷೆ ಅತ್ಯಂತ ಶ್ರೀಮಂತವಾಗಿದೆ. ಪ್ರತಿಯೊಂದು ಕ್ಷೇತ್ರಗಳಲ್ಲಿ ಕನ್ನಡಭಾಷೆಯು ವ್ಯಾಪಿಸಬೇಕು. ಹಾಗಂತ ಅನ್ಯಭಾಷೆಗಳ ಕುರಿತು ಅಸಡ್ಡೆ ಮಾಡಬಾರದು. ಎಲ್ಲ ಭಾಷೆಗಳನ್ನು ಗೌರವಿಸಬೇಕು. ಹೆಚ್ಚು ಹೆಚ್ಚು ಬೇರೆ ಭಾಷೆಗಳನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಬಾಲು ಜಾಧವ ಮಾತನಾಡಿ, ಸ್ಥಳೀಯ ಭಾಷೆಯಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಲು ಈ ಪುಸ್ತಕ ಸಹಾಯ ಮಾಡುತ್ತದೆ. ಇದರಿಂದ ಕಾನೂನು ಕುರಿತು ತಿಳುವಳಿಕೆ ಮೂಡಿಸುತ್ತದೆ ಎಂದರು.
ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಪುಸ್ತಕ ಪರಿಚಯಿಸಿದರು.
ಸಂಸ್ಕೃತಿ ಪ್ರಕಾಶನ ಪ್ರಕಾಶಕ ಪ್ರಭಾಕರ ಜೋಶಿ ಪ್ರಾಸ್ತಾವಿಕ ಮಾತನಾಡಿದರು.
ವಕೀಲರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಚಕ್ರಪಾಣಿ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ರಾಮರೆಡ್ಡಿ ಪಾಟೀಲ, ಲೇಖಕ ರವೀಂದ್ರ ಇಂಜಳ್ಳಿಕರ್ ಇದ್ದರು. ಮಂಜುಳಾ ಚವ್ಹಾಣ ಪ್ರಾರ್ಥಿಸಿದರು. ನಾಗೇಶ ಮಿಟ್ಟಿ ಸ್ವಾಗತಿಸಿದರು. ಜಗನ್ನಾಥ ತರನಳ್ಳಿ ನಿರೂಪಿಸಿದರು.