ಸುರಪುರ: ತಾಲ್ಲುಕಿನ ದೇವಾಪುರ ಗ್ರಾಮ ಪಂಚಾಯತಿ ಮುಂದೆ ಸಾರ್ವಜನಿಕರು ಖಾಲಿ ಕೊಡಗಳ ಹಿಡಿದು ಉಗ್ರ ಪ್ರತಿಭಟನೆ ನಡೆಸಿದರು. ಗುರುವಾರ ಬೆಳಿಗ್ಗೆ ಹತ್ತು ಗಂಟೆಯಿಂದ ನೂರಾರು ಸಂಖ್ಯೆಯಲ್ಲಿ ಸೇರಿದ ಮಹಿಳೆಯರು ಮಕ್ಕಳು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಖಾಲಿ ಕೊಡಗಳನ್ನು ಪಂಚಾಯತಿ ಬಾಗಿಲಿಗೆ ನೇತು ಹಾಕಿ ಅಧಿಕಾರಿಗಳ ವಿರುಧ್ದ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಅನೇಕ ಮಹಿಳೆಯರು ಮಾತನಾಡಿ, ಸುಮಾರು ಮೂರು ತಿಂಗಳಿಂದ ಗ್ರಾಮದಲ್ಲಿ ಕುಡಿಯಲು ನೀರಿಲ್ಲ, ಇಡೀ ಗ್ರಾಮದ ಜನರು ಹೊರಗಡೆಯಿಂದ ನೀರು ತಂದು ಕುಡಿಯಬೇಕಿದೆ, ಇದನ್ನ ಕುರಿತು ಪಂಚಾಯತಿ ಅಭೀವೃಧ್ದಿ ಅಧಿಕಾರಿಗಳಿಗೆ ಮತ್ತು ಅಧ್ಯಕ್ಷರಿಗೆ ತಿಳಿಸಿದರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಕೃಷ್ಣಾ ನದಿಯಿಂದ ನೀರು ತರಲು ಪೈಪಲೈನ್ ಮಾಡಿಸಿದ್ದಾರೆ, ಆದರೆ ಕಾಮಗಾರಿ ಪೂರ್ಣ ಮುಗಿಸದೆ ಅರ್ಧಕ್ಕೆ ನಿಲ್ಲಿಸಿದ್ದಾರೆ. ಅಲ್ಲದೆ ಗ್ರಾಮದ ಕೆಲವು ಓಣಿಗಳಿಗೆ ಮಾತ್ರ ನೀರು ಬಿಡುವ ಮೂಲಕ ಪಂಪ್ ಆಪರೇಟರ್ ತಾರತಮ್ಯ ಮಾಡುತ್ತಿದ್ದಾರೆ. ಇಂದುಕೂಡ ಅಧಿಕಾರಿಗಳು ಬಂದು ನೋಡಿದರೆ ಪಂಪ್ ಆಪರೇಟರ್ ಮನೆಯಲ್ಲಿ ನೀರು ಹರಿಯುತ್ತಿದೆ ಆದರೆ ಊರಲ್ಲಿ ನೀರಿಲ್ಲ ಇಂತಹ ತಾರತಮ್ಯ ಮಾಡುವ ಮೂಲಕ ಜನರಿಗೆ ತೊಂದರೆ ಮಾಡಲಾಗುತ್ತಿದೆ. ಅಲ್ಲದೆ ಪಂಚಾಯತಿ ಅಧ್ಯಕ್ಷರು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಅಭೀವೃಧ್ಧಿಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಧರಣಿ ಸ್ಥಳಕ್ಕೆ ಪಂಚಾಯತಿ ಅಭೀವೃಧ್ದಿ ಅಧಿಕಾರಿ ಹಾಗು ತಾಲ್ಲೂಕು ಪಂಚಾಯತಿ ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರ ಸಮಾಧಾನಿಸುವ ಪ್ರಯತ್ನ ನಡೆಸಿದರಾದರು ಅವರ ಮಾತಿಗೆ ನಿರ್ಲಕ್ಷ್ಯ ತೋರಿದ್ದರಿಂದ ಅಧಿಕಾರಿಗಳು ಮರಳಿ ಹೋಗಬೇಕಾಯಿತು. ನಂತರ ಸಂಜೆಯ ವೇಳೆಗೆ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಜಗದೇವಪ್ಪ ಆಗಮಿಸಿ ನೀರು ಕೊಡುವ ಭರವಸೆ ನೀಡಿದ ನಂತರ ಮನವಿ ಸಲ್ಲಿಸಿ ಧರಣಿ ನಿಲ್ಲಿಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಮತ್ತು ಮಕ್ಕಳು ಹಾಗು ಗ್ರಾಮಸ್ಥರು ಪಂಚಾಯತಿ ವಿರುಧ್ದ ಆಕ್ರೋಶ ವ್ಯಕ್ತಪಡಿಸುತ್ತ, ಕುಡಿಯುವ ನೀರಿಗೆ ಶಾಸ್ವತ ಪರಿಹಾರ ಕಲ್ಪಿಸುವ ಭರವಸೆ ನೀಡುವ ವರೆಗೆ ಧರಣಿ ನಿಲ್ಲಿಸುವುದಿಲ್ಲವೆಂದು ಪಂಚಾಯತಿ ಕಚೇರಿ ಮುಂದೆರೆ ಧರಣಿ ನಡೆಸಿ ಅಲ್ಲಿಯೆ ಅಡುಗೆ ತಯ್ಯಾರಿಸಿ ಊಟ ಮಾಡುತ್ತ ಧರಣಿ ನಡೆಸಿದರು.
ಧರಣಿಯಲ್ಲಿ ಮಹಿಳೆಯರಾದ ಗಂಗಮ್ಮ, ಬಸ್ಸಮ್ಮ, ನಾಗಮ್ಮ, ಮಹಾದೇವಿ, ಶಂಕ್ರೆಮ್ಮ, ರವಿ, ವೆಂಕಟೇಶ, ಮುದೆಪ್ಪ, ನಾನಪ್ಪ, ಭಿಮಬಾಯಿ, ಭಾಗ್ಯಮ್ಮ, ನಾಗಮ್ಮ ಮಲ್ಲು ಅಂಬಿಗೇರ, ಮದ್ಯಪ್ಪ ಶಿಕಾರಿ, ಬಾಲಯ್ಯ ದೊರೆ, ವೀರೇಶ ಮುಷ್ಠಳ್ಳಿ, ನಾಗರಾಜ ಕಲಕೇರಿ, ಶರಣಯ್ಯಸ್ವಾಮಿ ಹಿರೇಮಠ, ಮಲ್ಲು ಕುರುಬರ, ಶಾಂತು ದೇವಾಪುರ, ಶಂಕರ ಪೂಜಾರಿ, ಉದಯ ಬಾಗಲಿ ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಮತ್ತಿತರೆ ಸಂಘಟನೆಗಳ ಕಾರ್ಯಕರ್ತರಿದ್ದರು.