ಯಾದಗಿರಿ: ವಿದ್ಯಾರ್ಥಿಗಳು ವ್ಯಾಸಂಗದ ಸಮಯದಲ್ಲಿ ಬಹಳ ಕಷ್ಟಪಟ್ಟು ಅಧ್ಯಯನ ಮಾಡಬೇಕು, ನಿರಂತರ ಪರಿಶ್ರಮವಹಿಸುವುದರಿಂದ ನಿಶ್ಚಿತ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ವಡಗೇರಾ ತಹಸೀಲ್ದಾರ ಸಂತೋಷಿ ರಾಣಿ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರದಂದು ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಮತ್ತು ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಗುರಿಯನ್ನು ಸಾಧಿಸಬೇಕಾದರೆ ನಿರಂತರವಾದ ಅಧ್ಯಯನ ಮಾಡುವುದರಿಂದ ಅದು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜೀವನದಲ್ಲಿ ಉನ್ನತವಾದ ಗುರಿಯನ್ನು ಇಟ್ಟುಕೊಳ್ಳಬೇಕು. ಆ ಗುರಿಗೆ ತಕ್ಕಂತೆ ಪ್ರಯತ್ನವನ್ನು ಮುಂದುವರೆಸಬೇಕು. ಮೋಹಕ ಬದುಕಿಗೆ ಒಳಗಾಗದೆ ವ್ಯಾಸಂಗ ಒಂದೆ ತಮ್ಮ ಜೀವನದ ಮೂಲ ಉದ್ದೇಶವೆಂದು ಭಾವಿಸಿಕೊಂಡು ಪ್ರಯತ್ನಶೀಲರಾದರೆ ಖಂಡಿತವಾಗಿಯೂ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಹಿಳೆಯರು ಸಾಮಾಜಿಕ ಬದುಕಿನಲ್ಲಿ ತಮ್ಮ ಸ್ಥಾನಮಾನವನ್ನು ಗಳಿಸಿಕೊಳ್ಳಬೇಕಾದರೆ ಕೌಟುಂಬಿಕ ಬೆಂಬಲದೊಂದಿಗೆ ಮತ್ತು ಸುತ್ತಮುತ್ತಲಿನ ಪರಿಸರದ ಸಹಕಾರದೊಂದಿಗೆ ಮುಂದುವರೆದಾಗ ಸಾಮಾಜಿಕವಾಗಿ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಜನ ವೀರ ವನಿತೆಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ್ದಾರೆ. ಅಂತಹ ಕೆಚ್ಚೆದೆಯ ಧೀರ ಮಹಿಳೆಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಒಬ್ಬ ಪರಾಕ್ರಮಶಾಲಿಯಾಗಿ ಬ್ರೀಟಿಷರ ವಿರುದ್ಧ ಸೆಣಸಾಡುವುದರ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಾಗುವಂತೆ ಮಾಡಿದ ಧೀರೋದಾತ್ತ ಮಹಿಳೆ ಎಂದು ಕೊಂಡಾಡಿದರು.
ಈ ಸಂದರ್ಭದಲ್ಲಿ ಕಾ.ಅ.ಸ.ಸದಸ್ಯ ಸ್ನೇಹಾ ರಸಾಳಕರ್, ಈರಮ್ಮ ಭಾವಿಕಟ್ಟಿ, ಸಂತೋಷಿ ದಿಬ್ಬಾ, ವಿಶಾಲಾಕ್ಷಮ್ಮ, ಶಾಂತಲಾ ಸಂಕೀನ್, ಡಾ.ಶಿವಲೀಲಾ, ಜ್ಯೋತಿ ಮಾಲಿ ಪಾಟೀಲ, ಡಾ.ಕಮಲಮ್ಮ ಸಿನ್ನೂರ, ಸೌಮ್ಯಾ ಕಂದಕೂರ, ನಾಗವೇಣಿ, ಡಾ.ಬುದ್ದಪ್ಪ ಸಿಂಘೆ, ಶರಣಬಸ್ಸಪ್ಪ ರಾಯಕೋಟಿ, ಖಲೀಲ ಅಹ್ಮದ್ ಸೇರಿದಂತೆ ಇತರರಿದ್ದರು.
ಪ್ರಾರಂಭದಲ್ಲಿ ಸವಿತಾ ಪೂಜಾರಿ, ಗಾಯತ್ರಿ ಪ್ರಾರ್ಥಿಸಿದರು. ರಾಜೇಶ್ವರಿ ನಾಡಗೀತೆ ಹಾಡಿದರು. ವಿದ್ಯಾರ್ಥಿನಿ ಕಲ್ಯಾಣಾಧಿಕಾರಿ ಶಹನಾಜ್ ಬೇಗಂ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ಜ್ಯೊತಿ ವಂದಿಸಿದರು. ಡಾ.ಜ್ಯೋತಿಲತಾ ತಡಿಬಿಡಿ ನಿರೂಪಿಸಿದರು.