ಕಲಬುರಗಿ: ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತರಾಗಬೇಡಿ. ಪಠ್ಯದ ಜೊತೆಗೆ ಜೀವನಕ್ಕೆ ಅವಶ್ಯಕವಾದ ಸ್ವಾವಲಂಬನೆ, ದೇಶಪ್ರೇಮ, ಸಮಾಜ ಸೇವಾ ಪ್ರವೃತ್ತಿ, ವಿಭಿನ್ನ ಆಲೋಚನೆಯಂತಹ ಸೃಜನಶೀಲ ಗುಣಗಳ್ಳನ್ನು ವಿದ್ಯಾರ್ಥಿ ದೆಶೆಯಿಂದಲೇ ಅಳವಡಿಸಿಕೊಂಡು, ಅವುಗಳನ್ನು ಸಮಾಜದ ಒಳಿತಿಗೆ ಬಳಸಬೇಕೆಂದು ಮಹಮ್ಮದಿ ಬಿ.ಬಿಡ್ ಕಾಲೇಜಿನ ಪ್ರಾಂಶುಪಾಲ ಡಾ. ಮಹಮ್ಮದ ಪಾಟೀಲಿಕರ್ ಹೇಳಿದರು.
ಅವರು ನಗರದ ಸಮೀಪದ ಹುಮನಾಬಾದ ರಸ್ತೆಯಲ್ಲಿರುವ ಅವರಾದ ಶ್ರೀ ಸ್ವಾಮಿ ಸಮರ್ಥ ದೇವಸ್ಥಾನದಲ್ಲಿ ಶ್ರೀಮಾನ ಧರ್ಮಸಿಂಗ ಬಿ.ಎಡ್ ಕಾಲೇಜಿನ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ’ಒಂದು ದಿನದ ಸಿಟಿಸಿ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿದ್ದ ಮಹಾಗಾಂವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಡಾ.ಚಂದ್ರಕಾಂತ ಸಿಂಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ನೀವೂ ಭಾವಿ ಶಿಕ್ಷಕರಾಗಿರುವದರಿಂದ ಮೌಲ್ಯಗಳು, ಪರಿಸರ ಪ್ರಜ್ಞೆ ಸೇರಿದಂತೆ ಪ್ರತಿಯೊಂದು ಅಂಶಗಳನ್ನು ಅರಿತು, ಅವುಗಳನ್ನು ಕಾರ್ಯರೂಪದಲ್ಲಿ ಜಾರಿಗೆ ತರಲು ನಿರಂತರವಾಗಿ ಶ್ರಮಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜ ವಾಡಿ ಮಾತನಾಡುತ್ತಾ, ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಶಿಕ್ಷಣ, ಸ್ವಚ್ಚತೆ, ಆರೋಗ್ಯ, ಸರ್ಕಾರದ ಸವಲತ್ತುಗಳು, ಕೃಷಿ ಸೇರಿದಂತೆ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಿ, ಆ ಪ್ರದೇಶ, ಜನರ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಅಂಶಗಳ ಬಗ್ಗೆ ವ್ಯಾಪಕವಾದ ಜಾಗೃತಿ ಮೂಡಿಸುವುದು ಈ ಶಿಬಿರದ ಉದ್ದೇಶವಾಗಿದೆಯೆಂದು ತಿಳಿಸಿದರು.
ಒಂದು ದಿನ ಜರುಗಿದ ಶಿಬಿರದಲ್ಲಿ ದೇವಸ್ಥಾನದ ಆವರಣದಲ್ಲಿ ಶ್ರಮಾದಾನ, ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಸಂಜೀವಕುಮಾರ ಅಷ್ಟಗಿ, ಶಿವಕುಮಾರ ಪಾಟೀಲ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಪ್ರಶಿಕ್ಷಣಾರ್ಥಿಗಳಾದ ಮಹಾಲಕ್ಷ್ಮೀ ಪ್ರಾರ್ಥಿಸಿದರು. ವಿಜಯಕುಮಾರ ಸ್ವಾಗತಿಸಿದರು. ರಾಜು ಹೀರಾಲಾಲ್ ನಿರೂಪಿಸಿದರು. ನಾಗರತ್ನ ವಂದಿಸಿದರು.