ಯಾದಗಿರಿ: ನಗರದಿಂದ ಪ್ರಕಟಗೊಳ್ಳುವ ಪತ್ರಿಕೆಯ ವರದಿಗಾರರಾದ ಬೀರಲಿಂಗಪ್ಪ ಕಿಲ್ಲನಕೇರಾ ಅವರಿಗೆ ಜೀವ ಬೆದರಿಕೆ ಹಾಕಿರುವುದಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಖಂಡಿಸಿದ್ದು ಕ್ರಮಕ್ಕೆ ಒತ್ತಾಯಿಸಿದೆ.
ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿದ ಪತ್ರಕರ್ತರ ಸಂಘದ ನಿಯೋಗ ಜಿಲ್ಲಾಧ್ಯಕ್ಷ ಬಿ.ಎಂ. ಜಗದೀಶ ನೇತೃತ್ವದಲ್ಲಿ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ, ಅವರು, ದಿನಾಂಕ ೩೦-೧೦-೨೦೧೯ ರಂದು ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಬಂದಂತಹ ವರದಿಗೆ ತಮ್ಮ ಪ್ರತಿಕ್ರಿಯೆ ನೀಡದೆ, ತಮ್ಮ ಅಭಿಪ್ರಾಯ ವ್ಯಕ್ತಪಡಿಸದೇ, ಜೀವ ಬೆದರಿಕೆ ಹಾಕಿರುವ ಕಿಲ್ಲನಕೇರಾ ಗ್ರಾಮದ ಕೆಲವು ವಿಕ್ಷಿಪ್ತ ಮನಸ್ಥಿತಿಯವರು ಯಾದಗಿರಿ ಟೈಮ್ಸ್ ವರದಿಗಾರ / ಅಂಕಣ ಬರಹಗಾರ ಬೀರಲಿಂಗಪ್ಪ ಕಿಲ್ಲನಕೇರಾ ಇವರಿಗೆ ದೂರವಾಣಿ ಕರೆ ಮಾಡಿ ಬೆದರಿಸಿರುವುದು ಖಂಡನೀಯವಾಗಿದೆ.
ಪತ್ರಕರ್ತರು ನಿರ್ಭಯದಿಂದ ವರದಿ ಮಾಡುವುದನ್ನು ನಿಯಂತ್ರಿಸಲು ಇಂತಹ ಬೆದರಿಕೆಗಳು ನಿರಂತರವಾಗಿ ನಡೆಯುತ್ತಿದ್ದು ಪತ್ರಕರ್ತರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದೇ ಕರೆಯಲಾಗುವ ಪತ್ರಿಕಾ ರಂಗದಲ್ಲಿ ಕೆಲಸ ಮಾಡುವ ಪತ್ರಕರ್ತರು ಜೀವ ಬೆದರಿಕೆ, ಹಲ್ಲೆಯಂತಹ ಘಟನೆಗಳ ಭಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ. ಈ ಬಗ್ಗೆ ತಾವು ಗಂಭೀರವಾಗಿ ಪರಿಶೀಲಿಸಿ ಪತ್ರಕರ್ತರಿಗೆ ರಕ್ಷಣೆ ನೀಡುವ ಕ್ರಮ ಕೈಗೊಳ್ಳುವ ಜೊತೆಗೆ ಬೀರಲಿಂಗಪ್ಪ ಅವರಿಗೆ ರಕ್ಷಣೆ ನೀಡಬೇಕು. ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ತಮಗೆ ದೂರು ನೀಡಲಾಗಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪತ್ರಕರ್ತರ ಮೇಲೆ ಮುಂದೆ ಇಂತಹ ಘಟನೆ ಮರುಕಳಿಸದಂತೆ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹಿಸುತ್ತದೆ ಎಂದು ತಿಳಿಸಿದರು.
ಕಾರ್ಯನಿತರ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರವಿಂದ್ರ ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯ ಅನಿಲ್ ದೇಶಪಾಂಡೆ, ವೈಜನಾಥ ಹಿರೇಮಠ ಸೇರಿದಂತೆ ಇನ್ನಿತರ ಪತ್ರಕರ್ತರು ಇದ್ದರು. ಮನವಿ ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ ಭಗವಾನ ಸೋನವಣೆ ಸೂಕ್ತ ಕ್ರಮ ಕೈಗೊಳ್ಳುತ್ತೆನೆ. ಪತ್ರಕರ್ತರಿಗೆ ಜಿಲ್ಲೆಯಲ್ಲಿ ಯಾವ ಭಯ ಆತಂಕ ಬೇಡ ಎಂದು ಭರವಸೆ ನೀಡಿದರು.