ಕಲಬುರಗಿ: ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯು ವಿವಾದವನ್ನು ಹುಟ್ಟುಹಾಕಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಾಲೇಜಿನ ಕನ್ನಡ ವಿರೋಧಿ ನೀತಿಯನ್ನು ಖಂಡಿಸುತ್ತಿದ್ದಾರೆ.
ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆಹರೂ ಯುವ ಕೇಂದ್ರವು ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣ ಕುರಿತ ವಿಚಾರದ ಮೇಲೆ ತಾಲ್ಲೂಕು ಮಟ್ಟದ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಆದಾಗ್ಯೂ, ಭಾಷಣವನ್ನು ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಆಯೋಜಸಿದ್ದು ವಿವಾದಕ್ಕೆ ಕಾರಣವಾಯಿತು.
ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರು, ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕರೂ ಆದ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕ ಭೀಮಣ್ಣ ಅವರ ಬಳಿ ಆಸಕ್ತ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಳ್ಳುವಂತೆ ಕಳೆದ ಅಕ್ಟೋಬರ್ ೨೧ರಂದು ಸೂಚನೆ ಹೊರಡಿಸಲಾಗಿತ್ತು. ಅದಕ್ಕೆ ಕಾಲೇಜಿನ ಪ್ರಿನ್ಸಿಪಾಲರು ಮತ್ತು ಭೀಮಣ್ಣ ಅವರ ಸಹಿ ಇತ್ತು. ಕನ್ನಡವನ್ನು ಕಡೆಗಣಿಸಿ ಕೇವಲ ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಭಾಷಣ ಹಮ್ಮಿಕೊಂಡಿದ್ದು ಕನ್ನಡ ಪ್ರೇಮಿಗಳ ಕೆಂಗೆಣ್ಣಿಗೆ ಗುರಿಯಾಯಿತು. ಈ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಎಲ್ಲರೂ ಉಗಿದ ಮೇಲೆ ಕಾರ್ಯಕ್ರಮ ರದ್ದುಗೊಳಿಸಲಾಯಿತು ಎನ್ನಲಾಗಿದೆ.
ಕನ್ನಡಪರ ಹೋರಾಟಗಾರ ಭೀಮಾಶಂಕರ್ ಪಾಟೀಲ್ ಅವರು ಈ ಕುರಿತು ಹೇಳಿಕೆ ನೀಡಿ, ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ ಸ್ಪರ್ಧಾಳುಗಳು ಕಡ್ಡಾಯವಾಗಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿಯೇ ತಮ್ಮ ಭಾಷಣ ಪ್ರಸ್ತುತಪಡಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದು ನಿಜಕ್ಕೂ ರಾಜ್ಯ ಭಾಷೆಗೆ ಮಾಡಿದ ದ್ರೋಹ ಎಂದು ಖಂಡಿಸಿದ್ದಾರೆ.
ನೆಹರು ಯುವ ಕೇಂಧ್ರದ ವತಿಯಿಂದ ಏರ್ಪಡಿಸಿರುವ ಏಕ್ ಭಾರತ್ ಶ್ರೇಷ್ಠ ಭಾರತ್ ವಿಷಯದ ಕುರಿತು ಭಾಷಣ ಸ್ಪರ್ಧೆಯಲ್ಲಿ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರ ಭಾಷಣ ಮಾಡುವ ಅವಕಾಶ ನೀಡಲಾಗಿದೆ ಏಕೆ? ಎಂದು ಪ್ರಶ್ನಿಸಿರುವ ಅವರು, ದೇಶಭಕ್ತಿಯ ಕುರಿತು ಮಾತನಾಡಲು ಕನ್ನಡ ಭಾಷೆಗೆ ಅರ್ಹತೆ ಇಲ್ಲವೇ, ಕನ್ನಡ ಬೆಳೆಸಬೇಕಾದ ರಾಜ್ಯ ಸರ್ಕಾರವೇ ಕನ್ನಡವನ್ನು ಈ ರೀತಿ ಕಡೆಗಣಿಸಿದರೆ ಹೇಗೆ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.