ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಮಿದುಳು ನಿಷ್ಕ್ರೀಯ ವ್ಯಕ್ತಿ ಮೂತ್ರಪಿಂಡ ಯಶಸ್ವಿ ಕಸಿ: ಸಂದಪ್ಪನಿಂದ ಇಬ್ಬರಿಗೆ ಪುನರ್ಜನ್ಮ

0
82

ಕಲಬುರಗಿ: ನಗರದ ಚಿರಾಯು ಆಸ್ಪತ್ರೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಮಿದುಳು ನಿಷ್ಕ್ರೀಯಗೊಂಡ ವ್ಯಕ್ತಿಯ ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮಂಜುನಾಥ್ ದೋಶೆಟ್ಟಿ ಅವರು ಇಲ್ಲಿ ಹೇಳಿದರು.

ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಇಂತಹ ಎರಡು ಯಶಸ್ವಿ ಕಸಿ ಕೈಗೊಳ್ಳಲಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿಯೇ ಇದೇ ಮೊದಲ ಬಾರಿಗೆ ಯಶಸ್ವಿ ಕಸಿ ಮಾಡಲಾಗಿದೆ ಎಂದರು. ಜಿಲ್ಲೆಯ ಸೇಡಂ ತಾಲ್ಲೂಕಿನ ವಾಸವದತ್ತಾ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ೫೦ ವರ್ಷ ವಯಸ್ಸಿನ ಸಂದಪ್ಪ ಅಪಘಾತದಲ್ಲಿ ಮಿದುಳು ನಿಷ್ಕ್ರೀಯಗೊಂಡಿದ್ದರಿಂದ ಆತನ ಪರಿವಾರದವರು ದೇಹದಾನ ಮಾಡಲು ನಿರ್ಧರಿಸಿದರು. ಚಿರಾಯು ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಮಾಡಲಾಗುತ್ತಿದ್ದು, ಹೀಗಾಗಿ ಸಂದಪ್ಪನ ಎರಡು ಮೂತ್ರಪಿಂಡಗಳನ್ನು ತೆಗೆದುಕೊಂಡು ಇಬ್ಬರಿಗೆ ಮೂತ್ರಪಿಂಡಗಳನ್ನು ಯಶಸ್ವಿಯಾಗಿ ಅಳವಡಿಸುವ ಕಾರ್ಯ ಆಗಿದೆ ಎಂದರು.

Contact Your\'s Advertisement; 9902492681

ಸಂದಪ್ಪನ ಎರಡು ಮೂತ್ರಪಿಂಡಗಳನ್ನು ನೆರೆಯ ಬೀದರ್ ಜಿಲ್ಲೆಯ ಬಸವಕಲ್ಯಾಣ್ ಹಾಗೂ ಭಾಲ್ಕಿ ವ್ಯಕ್ತಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ. ಇದರಿಂದ ಇಬ್ಬರ ಪ್ರಾಣವನ್ನು ಸಂದಪ್ಪ ಹಾಗೂ ಆತನ ಪರಿವಾರದವರು ಉಳಿಸಿದ್ದಾರೆ ಎಂದು ಅವರು ಹೇಳಿದರು. ಸಂದೇಪ್ಪನು ಕಳೆದ ಅಕ್ಟೋಬರ್ ೭ರಂದು ರಾತ್ರಿ ೮-೩೦ಕ್ಕೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ. ಆತನಿಗೆ ತಕ್ಷಣವೇ ಕಾಮರೆಡ್ಡಿ ಆಸ್ಪತ್ರೆಯ ತುರ್ತು ನಿಘಾ ಘಟಕಕ್ಕೆ ಸೇರಿಸಲಾಯಿತು. ಡಾ. ಪ್ರತಿಮಾ ಕಾಮರೆಡ್ಡಿ ಅವರ ನೇತೃತ್ವದ ವೈದ್ಯರ ತಂಡವು ತಪಾಸಣೆಗೆ ಒಳಪಡಿಸಿದಾಗ ಆತನ ಮಿದುಳು ನಿಷ್ಕ್ರೀಯಗೊಂಡಿದ್ದು ದೃಢಪಟ್ಟಿತು. ಮಿದುಳಿನ ಸಾವಿನಿಂದ ತಪ್ಪಿಸಿಕೊಳ್ಳಲು ಆತನ ಕುಟುಂಬದವರು ಬಹಳಷ್ಟು ಯತ್ನಿಸಿದರು. ನಂತರ ಇಎಸ್‌ಐ ಆಸ್ಪತ್ರೆಗೂ ಸಹ ತಪಾಸಣೆಗೆ ಒಳಪಡಿಸಿದಾಗಲೂ ಅದೇ ರೀತಿಯ ಫಲಿತಾಂಶ ಬಂದಿತು. ಆಗ ಆತನ ಅಂಗಗಳ ದಾನದಿಂದ ಬೇರೆಯವರ ಜೀವ ಉಳಿಸುವ ಜೀವ ಸಾರ್ಥಕತೆ ಕುರಿತು ಸಂದಪ್ಪ ಅವರ ಪತ್ನಿ ಹಾಗೂ ಪರಿವಾರಕ್ಕೆ ವೈದ್ಯರು ವಿವರಿಸಿದಾಗ ಅಂಗ ದಾನ ಮಾಡಲು ಒಪ್ಪಿದರು ಎಂದು ಅವರು ವಿವರಿಸಿದರು.

ಕಳೆದ ಮೂರು ವಾರಗಳ ಹಿಂದೆ ಸಂದಪ್ಪ ಅಂಗದಾನದ ಕುರಿತು ಚಿರಾಯು ಆಸ್ಪತ್ರೆಗೆ ಖಚಿತ ಮಾಹಿತಿ ಬಂದಿದ್ದರಿಂದ ಆತನ ಇನ್ನಿತರ ಅಂಗಗಳಾದ ಲಿವರ್ ಹಾಗೂ ಹೃದಯವನ್ನು ಪಡೆಯಲು ಬೆಂಗಳೂರಿನಿಂದ ಪ್ರಯತ್ನ ನಡೆಸಲಾಯಿತು. ಹೃದಯವನ್ನು ಸ್ಥಳಾಂತರಿಸಲು ವಿಮಾನ ಸೌಲಭ್ಯ ಸೇರಿ ಎಲ್ಲ ರೀತಿಯ ಅಗತ್ಯ ಹಾಗೂ ತುರ್ತು ಕ್ರಮಗಳು ಸಾಧ್ಯವಾಗದೇ ಇದ್ದುದರಿಂದ ಸಂದಪ್ಪನ ಎರಡು ಮೂತ್ರಪಿಂಡಗಳನ್ನು ಚಿರಾಯು ಆಸ್ಪತ್ರೆ ಪಡೆದು ಆ ಮೂತ್ರಪಿಂಡಗಳನ್ನು ಬೀದರ್ ಜಿಲ್ಲೆಯ ಇಬ್ಬರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಅವರಿಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ಅವರು ಹೇಳಿದರು. ಸಂದಪ್ಪನ ಪತ್ನಿ ಹಾಗೂ ಪರಿವಾರದವರು ಅಂಗಾಂಗ ದಾನಗಳನ್ನು ಮಾಡುವಾಗ ಯಾವುದೇ ಶರತ್ತುಗಳನ್ನು ವಿಧಿಸಲಿಲ್ಲ. ಯಾವುದೇ ಬೇಡಿಕೆಯನ್ನು ಸಹ ಇಡಲಿಲ್ಲ. ಅತ್ಯಂತ ಸಂಯಮ ಹಾಗೂ ಶಾಂತ ಹಾಗೂ ಸಮಾಧಾನ ಚಿತ್ತದಿಂದ ಸಹಕರಿಸಿದರು. ಅಂಗಾಂಗಗಳನ್ನು ಪಡೆದ ನಂತರ ದೇಹವನ್ನು ಮಾತ್ರ ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ತಕ್ಷಣ ತಮಗೆ ಹಸ್ತಾಂತರಿಸಬೇಕೆಂದು ಪರಿವಾರದವರು ಹೇಳಿದ್ದರು. ಅದರಂತೆ ನಾವು ಮೂತ್ರಪಿಂಡಗಳನ್ನು ಪಡೆದ ನಂತರ ತಕ್ಷಣವೇ ಸಂದೆಪ್ಪನ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದರು.

ಮೂತ್ರಪಿಂಡಗಳನ್ನು ಮನಸ್ಸಿಗೆ ಬಂದವರಿಗೆ ಕಸಿ ಮಾಡುವಂತಿಲ್ಲ. ಮೂತ್ರಪಿಂಡಗಳ ಬೇಡಿಕೆ ಇರುವವರು ಮೊದಲೇ ನೊಂದಣಿ ಮಾಡಿಕೊಂಡಿರುತ್ತಾರೆ. ಯಾರು ಮೊದಲು ನೊಂದಣಿ ಮಾಡಿಕೊಂಡಿರುತ್ತಾರೋ ಅಂಥವರಿಗೆ ಮರು ಕಸಿ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ೧೫ ಹಾಗೂ ಇಡೀ ರಾಜ್ಯದಲ್ಲಿ ೩೦೦೦ ಜನರು ಮೂತ್ರಪಿಂಡಗಳ ಕಸಿಗಾಗಿ ಕಾಯುವ ಪಟ್ಟಿಯಲ್ಲಿದ್ದಾರೆ ಎಂದು ಅವರು ಹೇಳಿದರು. ಅಂಗಾಂಗಳನ್ನು ದಾನ ಮಾಡಿದವರಿಗೆ ಪರಿಹಾರ ಸೇರಿದಂತೆ ಯಾವುದೇ ರೀತಿಯ ನೆರವು ನೀಡುವಂತಹುದಕ್ಕೆ ಅವಕಾಶ ಇಲ್ಲ ಎಂದು ಹೇಳಿದ ಅವರು, ಸಂದೆಪ್ಪ ಪರಿವಾರದವರು ಅಂಗಾಂಗಗಳನ್ನು ದಾನ ಮಾಡಿದ ಸಂದರ್ಭದಲ್ಲಿ ನಡೆದುಕೊಂಡ ರೀತಿ ಅತ್ಯಂತ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೂತ್ರಪಿಂಡಗಳನ್ನು ಮರು ಕಸಿ ಮಾಡಲು ಸುಮಾರು ನಾಲ್ಕರಿಂದ ಐದು ಲಕ್ಷ ರೂ.ಗಳು ವೆಚ್ಚವಾಗುತ್ತದೆ ಎಂದು ಹೇಳಿದ ಅವರು, ಮೂತ್ರಪಿಂಡಗಳನ್ನು ದಾನ ಮಾಡಿ ಎರಡು ಜೀವಗಳನ್ನು ಉಳಿಸಿದ್ದಕ್ಕಾಗಿ ಸಂದಪ್ಪನ ಕುಟುಂಬಕ್ಕೆ ಶೀಘ್ರ ಸನ್ಮಾನಿಸಲಾಗುವುದು ಎಂದರು.

ಮೂತ್ರಪಿಂಡಗಳ ಯಶಸ್ವಿ ಕಸಿಯನ್ನು ಆಸ್ಪತ್ರೆಯ ವೈದ್ಯರಾದ ಡಾ. ಶ್ರೀ ಹರ್ಷ, ಡಾ. ತನ್ವೀರ್, ಡಾ. ರಮೇಶ್, ಡಾ. ದೀಪಕ್ ಅವರನ್ನು ಒಳಗೊಂಡ ತಂಡವು ಡಾ. ಮೋಹನ್ ಕೇಶವಮೂರ್ತಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿಸಿತು. ೧೦ ಜನ ವೈದ್ಯರು ಹಾಗೂ ೧೦ ಜನ ಅರೆ ವೈದ್ಯಕೀಯ ಸಿಬ್ಬಂದಿಗಳು ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜೀವ ಸಾರ್ಥಕತೆಯ ನೋಡಲ್ ಅಧಿಕಾರಿ ಡಾ. ಶಿವಾನಂದ್ ಶುರುಗಾಳಿ, ಬೆಂಗಳೂರಿನ ಡಾ. ಕಿಶೋರ್ ಫಡಕೆ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here