ಕಲಬುರಗಿ ಸ್ಮಾರ್ಟ್ ಸಿಟಿ ಕ್ಲಬ್ ಅಸ್ತಿತ್ವಕ್ಕೆ: ಮೂಲಭೂತ ಸೌಲಭ್ಯ, ಸೌಂದರ‍್ಯೀಕರಣಕ್ಕೆ ಸಂಕಲ್ಪ

0
84

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದ ಹಿಂದುಗಡೆ ಪ್ರದೇಶದಲ್ಲಿನ ಸುಮಾರು ಐದು ಕಾಲೋನಿಯ ಹಿರಿಯ ನಾಗರಿಕರು ಸೇರಿ ಕಲಬುರ್ಗಿ ಸ್ಮಾರ್ಟ್ ಸಿಟಿ ಕ್ಲಬ್ ಅಸ್ತಿತ್ವಕ್ಕೆ ತರಲು ವಿದ್ಯುಕ್ತವಾಗಿ ಶನಿವಾರ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ನಗರದ ಶಕ್ತಿನಗರದಲ್ಲಿನ ಆಟೋ ನಿಲ್ದಾಣದ ಬಳಿ ಇರುವ ಉದ್ಯಮಿ ಪ್ರಭುಲಿಂಗ್ ಎಸ್. ಮಹಾಗಾಂವಕರ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಬೆಳಿಗ್ಗೆ ದುಂಡು ಮೇಜಿನ ಸಭೆ ಸೇರಿದ ಗಣ್ಯರು ಕ್ಲಬ್ ರಚನೆ ಕುರಿತು ಸುದೀರ್ಘ ಚರ್ಚೆಯನ್ನು ಕೈಗೊಂಡು ಪದಾಧಿಕಾರಿಗಳನ್ನೂ ಸಹ ಆಯ್ಕೆಗೊಳಿಸಿದರು.

Contact Your\'s Advertisement; 9902492681

ಕ್ಲಬ್‌ನ ಅಧ್ಯಕ್ಷರನ್ನಾಗಿ ಪಿ.ಎಸ್. ಮಹಾಗಾಂವಕರ್, ಕಾರ್ಯದರ್ಶಿಗಳಾಗಿ ನ್ಯಾಯವಾದಿ ರಾಜಶೇಖರ್ ಬಿ.ಆರ್. ಡೊಂಗರಗಾಂವ್, ಜಂಟಿ ಕಾರ್ಯದರ್ಶಿಗಳಾಗಿ ಶ್ರೀಮತಿ ಅನಿತಾರೆಡ್ಡಿ, ಖಜಾಂಚಿಗಳಾಗಿ ಎಂ.ಎಲ್. ಅಲಂಕಾರ್, ಸದಸ್ಯರಾಗಿ ಶಿವಶರಣಪ್ಪ ಚಿಗೋಣಿ, ಶ್ರೀಮತಿ ನಳಿನಿ ಮಹಾಗಾಂವಕರ್, ಯಶವಂತ್ ಸಿಂಧೆ, ಡಿ. ಶಿವಪ್ಪ, ಕೆ.ಬಿ. ಭಂಕೂರ್, ಸಿದ್ಧರಾಮಪ್ಪ ನೀಲೂರ್ ಅವರನ್ನು ಆಯ್ಕೆ ಮಾಡಲಾಯಿತು. ಮುಂದಿನ ಸಭೆಯಲ್ಲಿ ಕ್ಲಬ್‌ನ ಸಂಪೂರ್ಣ ಪದಾಧಿಕಾರಿಗಳನ್ನು ನೇಮಕ ಮಾಡಲು ಸಭೆ ತೀರ್ಮಾನಿಸಿತು.  ನಗರದ ಈಗಿನ ರೈಲು ನಿಲ್ದಾಣವು ಬಹಳ ಇಕ್ಕಟ್ಟಾಗಿದ್ದು, ಗೂಡ್ಸ್ ರೈಲುಗಳ ನಿಲುಗಡೆ ಸೇರಿದಂತೆ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗಲಿದೆ. ಆದ್ದರಿಂದ ರೈಲು ನಿಲ್ದಾಣವನ್ನು ನಗರದ ಹೊರಗಡೆ ಪ್ರದೇಶಕ್ಕೆ ಸ್ಥಳಾಂತರಿಸಿ ನೂತನ ರೈಲು ನಿಲ್ದಾಣ ನಿರ್ಮಿಸುವ ಕುರಿತು ರೈಲ್ವೆ ಇಲಾಖೆಗೆ ಬೇಡಿಕೆ ಮಂಡಿಸಲು ಸಭೆಯು ನಿರ್ಧರಿಸಿತು.

ನಗರದ ಕೇಂದ್ರ ಬಸ್ ನಿಲ್ದಾಣದ ಎಂ.ಆರ್. ತಂಗಾ ಬಡಾವಣೆಯ ದ್ವಾರದ ಮೂಲಕ ಸಿಬಿಐ ಕಾಲೋನಿ, ಶಕ್ತಿನಗರದಿಂದ ದತ್ತನಗರ್, ಮಾಕಾಲೇಔಟ್ ರೈಲು ಹಳಿ ಕೆಳಗಡೆಯಿಂದ ರಸ್ತೆ ಸಂಪರ್ಕ ಕಲ್ಪಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಹ ಸಭೆ ತೀರ್ಮಾನಿಸಿತು. ಕೇಂದ್ರ ಬಸ್ ನಿಲ್ದಾಣದ ಅಶೋಕ್ ನಗರ ಪೋಲಿಸ್ ಠಾಣೆಯ ಎದುರು ಇರುವ ಎಂ.ಆರ್. ತಂಗಾ ಬಡಾವಣೆಯ ದ್ವಾರದ ಮಾರ್ಗಗಳಲ್ಲಿ ಬೀದಿ ದೀಪಗಳನ್ನು ಸಮರ್ಪಕವಾಗಿ ಅಳವಡಿಸುವುದು, ಪೋಲಿಸ್ ಠಾಣೆಯ ಕುರಿತು ರಸ್ತೆ ಪಕ್ಕದಲ್ಲಿನ ಸೂಕ್ತ ಸ್ಥಳದಲ್ಲಿ ಫಲಕ ಅಳವಡಿಸುವುದು, ಕಳ್ಳತನ, ಸುಲಿಗೆ ತಡೆಯಲು ಸೂಕ್ತ ಪೋಲಿಸ್ ಬಂದೋಬಸ್ತ್ ಕಲ್ಪಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಸಭೆ ನಿರ್ಧರಿಸಿತು.

ಗೋದುತಾಯಿ ನಗರ, ಶಕ್ತಿನಗರ, ಕೋತಂಬ್ರಿ ಲೇಔಟ್, ಕಾಂತಾ ಕಾಲೋನಿ, ಸಿಐಬಿ ಕಾಲೋನಿ, ಘಾಟಗೆ ಲೇಔಟ್‌ಗಳಿಗೆ ಈ ಹಿಂದೆ ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗ ಆ ಮಾರ್ಗವನ್ನು ಸ್ಥಗಿತಗೊಳಿಸಿದ್ದು, ಕಾಲೋನಿಯ ನಿವಾಸಿಗಳಿಗೆ ತೀವ್ರ ತೊಂದರೆ ಆಗಿದೆ. ಆದ್ದರಿಂದ ಈ ಎಲ್ಲ ಕಾಲೋನಿಗಳಿಗೆ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಕಣ್ಣಿ ಮಾರ್ಕೆಟ್‌ನಲ್ಲಿ ಬೆಳಿಗ್ಗೆ ತರಕಾರಿ ವ್ಯಾಪಾರಿಗಳು ರಸ್ತೆಯಲ್ಲಿಯೇ ವ್ಯಾಪಾರದಲ್ಲಿ ತೊಡಗುವುದರಿಂದ ಸುಗಮ ಸಂಚಾರಕ್ಕೆ ತೀವ್ರ ತೊಂದರೆ ಆಗಲಿದೆ. ಅಲ್ಲದೇ ರಸ್ತೆಯಲ್ಲಿಯೇ ಅದು ಕಲುಷಿತ ಪ್ರದೇಶದಲ್ಲಿಯೇ ತರಕಾರಿಗಳನ್ನು ಇಡುವುದರಿಂದ ಆ ತರಕಾರಿಗಳ ಗುಣಮಟ್ಟವೂ ಸಹ ಹಾಳಾಗಲಿದೆ. ಆದ್ದರಿಂದ ಸೂಕ್ತ ಸ್ಥಳದಲ್ಲಿ ತ್ವರಿತವಾಗಿ ಕಣ್ಣಿ ಮಾರುಕಟ್ಟೆಯ ಯೋಗ್ಯ ಸ್ಥಳದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು ಹಾಗೂ ದಲ್ಲಾಳಿಗಳ ಹಾವಳಿಯನ್ನು ತಡೆಯಲು ಹಾಪ್‌ಕಾಮ್ಸ್ ಮಳಿಗೆಯನ್ನು ಸಹ ಸ್ಥಾಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕೋರಲು ಸಭೆ ನಿರ್ಧರಿಸಿತು.

ಇನ್ನುಳಿದಂತೆ ಕಾಲೋನಿಗಳಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸುವುದು ಹಾಗೂ ಖುಲ್ಲಾ ಸ್ಥಳದಲ್ಲಿ ಕಸ ಹಾಕುವುದನ್ನು ತಡೆಯಲು ಕಟ್ಟುನಿಟ್ಟಿನ ನಿಗಾ ವಹಿಸುವುದು ಮತ್ತು ಈ ಹಿಂದೆ ೫೦೦ ಗಿಡಗಳನ್ನು ನೆಡಲಾಗಿದ್ದು, ಆ ಗಿಡಗಳಿಗೆ ಸಕಾಲಕ್ಕೆ ನೀರು ಹಾಕುವ ಕುರಿತು ಮಹಾನಗರ ಪಾಲಿಕೆ ಮತ್ತು ಜಲಮಂಡಳಿಯನ್ನು ಸಂಪರ್ಕಿಸಿ ಮನವಿ ಸಲ್ಲಿಸುವ ಕುರಿತು ವಿವರ ಚರ್ಚೆಯನ್ನು ಸಭೆಯಲ್ಲಿ ಮಾಡಲಾಯಿತು.

ಶೀಘ್ರವೇ ಇನ್ನೊಂದು ಸಭೆಯನ್ನು ಕರೆದು ಕ್ಲಬ್ ಪರಿಪೂರ್ಣ ಪದಾಧಿಕಾರಿಗಳನ್ನು ನೇಮಕ ಮಾಡಿ ಉದ್ಘಾಟನೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕ್ಲಬ್ ಅಧ್ಯಕ್ಷ ಪಿ.ಎಸ್. ಮಹಾಗಾಂವಕರ್ ಅವರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here