ಸುರಪುರ: ಸಾವಿರಾರು ವರ್ಷಗಳಿಂದ ಸಮಾಜದಲ್ಲಿ ತುಳಿತಕ್ಕೊಳಗಾಗಿರುವ ಪರಿಶಿಷ್ಟ ಜಾತಿಯ ಜನಾಂಗದ ಸವಲಭ್ಯಗಳನ್ನು ಕಸಿಯಲು ಹುನ್ನಾರ ನಡೆಸಿರುವ ವೀರಶೈವ ಲಿಂಗಾಯತ ಸಮುದಾಯದ ಜಂಗಮ ಜಾತಿಯ ಜನರು ಈಗ ಬೇಡ ಜಂಗಮ ಪ್ರಮಾಣ ಪತ್ರವನ್ನು ಪಡೆಯುವ ಮೂಲಕ ಪರಿಶಿಷ್ಟ ಜಾತಿಯವರ ಸೌಲಭ್ಯವನ್ನು ಕಿತ್ತಿಕೊಳ್ಳುವ ಹುನ್ನಾರ ನಡೆದಿದೆ.ಇದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ ಎಂದು ಸಮಿತಯ ತಾಲೂಕು ಸಂಚಾಲಕ ವೀರಭದ್ರ ತಳವಾರಗೇರಾ ಮಾತನಾಡಿದರು.
ಜಾತಿ ಜಂಗಮರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡದಂತೆ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಆಂಧ್ರ ಭಾಗದಿಂದ ಇಲ್ಲಿಗೆ ಬಂದು ಭಿಕ್ಷಾಟನೆ ಮೂಲಕ ಹೊಟ್ಟೆ ನಡೆಸುತ್ತಿದ್ದ ಬೇಡುವ ಜಂಗಮ ಸಮುದಾಯಕ್ಕೆ ಬೇಡ ಜಂಗಮ ಪ್ರಮಾಣ ಪತ್ರ ನೀಡುವಂತೆ ಸರಕಾರ ರಾಜ್ಯದ ಬೇರೆ ಭಾಗಗಳಲ್ಲಿ ಆದೇಶ ನೀಡಿದೆ.ಆದರೆ ಇಲ್ಲಿರುವ ಯಾರೂ ಬೇಡ ಜಂಗಮ ಜಾತಿಯವರಲ್ಲವಾದರೂ ನಮ್ಮ ಪರಿಶಿಷ್ಟ ಜಾತಿಯಲ್ಲಿನ ಒಂದು ನೂರಾ ಒಂದು ಜಾತಿಯ ಜನರ ಸೌಲಭ್ಯಗಳನ್ನು ಕಿತ್ತಿಕೊಳ್ಳಲು ಮುಂದಾಗಿದ್ದಾರೆ.ಆದ್ದರಿಂದ ಇಲ್ಲಿಯ ಯಾರಿಗೂ ಬೇಡ ಜಂಗಮ ಪ್ರಮಾಣ ಪತ್ರ ನೀಡಬಾರದು ಹಾಗೂ ಸುಳ್ಳು ಪ್ರಮಾಣ ಪತ್ರ ಪಡೆಯುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಪ್ರಮಾಣ ಪತ್ರ ನೀಡಿದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಸಿದರು.
ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಯಾದಗಿರಿ ಉಪ ವಿಭಾಗ ಸಂಚಾಲಕ ಹಣಮಂತಪ್ಪ ರೋಜಾ,ಜಿಲ್ಲಾ ಖಜಾಂಚಿ ಅಂಬ್ರೇಶ ದೊಡ್ಮನಿ,ಶೇಖರ ಬಡಿಗೇರ,ಗೌತಮ್ ಬಡಿಗೇರ,ಶಿವಲಿಂಗ ಹಸನಾಪುರ,ಆಕಾಶ ಕಟ್ಟಿಮನಿ,ವೆಂಕಟೇಶ ದೇವಾಪುರ,ಖಾಜಾ ಅಜ್ಮೀರ್,ಅಂಬೇಡ್ಕರ ದೊಡ್ಮನಿ,ರಮೇಶ ಬಡಿಗೇರ,ಎಂ.ಪಟೇಲ್,ಲಾಲಸಾಬ್ ಮಂಗಳೂರು ಸೇರಿದಂತೆ ಅನೇಕರಿದ್ದರು.