ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿರುವ ೪೫೦ಕ್ಕೂ ಹೆಚ್ಚು ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿಸಲು ತಹಶೀಲ್ದಾರರು ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ತಾಂಡಾಗಳಿಗೆ ತೆರಳಿ ಸರ್ವೇ ಕಾರ್ಯ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ತಹಶೀಲ್ದಾರರು, ಭೂ ದಾಖಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಬೇಕಾಗಿದ್ದು, ಇದಕ್ಕಾಗಿ ಪೂರಕ ಮಾಹಿತಿಗಳನ್ನು ಸಂಗ್ರಹಿಸಿ ಸಲ್ಲಿಸುವಂತೆ ತಿಳಿಸಿದರು.
ತಹಶೀಲ್ದಾರ ಮತ್ತು ಎಡಿಎಲ್‌ಆರ್ ಅಧಿಕಾರಿಗಳು ಸಂಬಂಧಪಟ್ಟ ತಾಂಡಾಗಳಲ್ಲಿ ಜಂಟಿ ಸಭೆ ನಡೆಸಿ, ತಾಂಡಗಳು ಯಾರಿಗೆ ಸೇರಿದ್ದು ಎಂದು ಮೊದಲು ತಿಳಿದುಕೊಳ್ಳಬೇಕು. ಇದರಲ್ಲಿ ಅರಣ್ಯ ಭೂಮಿ, ಕಂದಾಯ ಭೂಮಿ ಅಥವಾ ಖಾಸಗಿ ಭೂಮಿ ಯಾವುವು ಎಂದು ಅರಿತುಕೊಳ್ಳಬೇಕು. ತಾಂಡಾಗಳು ಅರಣ್ಯ ಪ್ರದೇಶಕ್ಕೆ ಒಳಪಟ್ಟಿದಲ್ಲಿ ಅರಣ್ಯ ಸಮಿತಿಯ ಒಪ್ಪಿಗೆ ಪಡೆದು ಘೋಷಣೆ ಮಾಡಬೇಕಾಗಿರುತ್ತದೆ. ಇದಕ್ಕೆ ಪರ್ಯಾಯವಾಗಿ ಎರಡು ಪಟ್ಟು ಸರ್ಕಾರಿ ಜಮೀನು ಅರಣ್ಯಕ್ಕೆ ಬಿಟ್ಟು ಕೊಡಬೇಕಾಗುತ್ತದೆ. ನಗರ-ಪಟ್ಟಣಕ್ಕೆ ಹೊಂದಿಕೊಂಡಂತೆ ೧ ಕಿ.ಮಿ. ದೂರದಲ್ಲಿ ಕನಿಷ್ಠ ೧೦ ಮನೆಗಳಿಂದ ಸುಮಾರು ೫೦ ಜನರು ವಾಸಿಸುವ ಜನವಸತಿ ಪ್ರದೇಶಗಳಿದ್ದರೆ ಅದನ್ನು ಉಪ ಗ್ರಾಮ ಎಂದು ಪರಿಗಣಿಸಬಹುದಾಗಿದೆ ಎಂದರು.
ಕ್ಷೇತ್ರ ಸರ್ವೆ ಸಂದರ್ಭದಲ್ಲಿ ಕೆಲವೊಂದು ತಾಂಡಗಳಿಗೆ ಹೆಸರೆ ಇಲ್ಲದೆ ಎಲ್‌ಡಿ-೧, ಎಲ್‌ಡಿ-೨ ಎಂದು ಕರೆಯುತ್ತಾರೆ. ಇಂತಹ ತಾಂಡಾಗಳಿಗೆ ಹೆಸರಿಡಲು ಸಹ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಕ್ಷೇತ್ರ ಪರಿವೀಕ್ಷಣೆ ಮಾಡುವಾಗ ಗ್ರಾಮದ ನಕ್ಷೆ, ಹಕ್ಕುಪತ್ರವಿಲ್ಲದ ಫಲಾನುಭವಿಗಳು ವಾಸಿಸುತ್ತಿರುವ ಸ್ಥಳದ ಸುತ್ತಳತೆ, ಕೃಷಿ ಚಟುವಟಿಕೆಗೆ ಬಳಸುತ್ತಿರುವ ಜಮೀನು ಹೀಗೆ ಸಂಪೂರ್ಣ ವಿವರಗಳು ಪಡೆದು ನಿಯಮಾನುಸಾರ ಹಕ್ಕು ಪತ್ರಗಳು ವಿತರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ತಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರಪ್ಪ ವಣಿಕ್ಯಾಳ, ಸಹಾಯಕ ಆಯುಕ್ತರಾದ ರಾಮಚಂದ್ರ ಗಡಾದೆ, ರಮೇಶ ಕೋಲಾರ, ಡಿಡಿಎಲ್‌ಆರ್ ಉಪನಿರ್ದೇಶಕ ಶಂಕರ, ಶಿಷ್ಠಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್ ಸೇರಿದಂತೆ ತಾಲೂಕಿನ ತಹಶೀಲ್ದಾರರು ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.