ಬೆಂಗಳೂರು: ಚುನಾವಣೆ ನಂತರ ನಗರಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಚುನಾವಣ ನೀತಿ ಸಂಹಿತೆ ಮುಕ್ತಾಯಗೊಳ್ಳುತ್ತಿದ್ದಂತೆ ಇಲಾಖೆಯ ಕಾರ್ಯಕ್ರಮಗಳಿಗೆ ಪುನರ್ ಚಾಲನೆ ನೀಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿವಿಧ ಕಾರ್ಯಕ್ರಮಗಳಡಿ ಕಳೆದ ಆರ್ಥಿಕ ಸಾಲಿನಲ್ಲಿ ಸೌಲಭ್ಯಗಳ ಮಂಜೂರಾತಿ ಪಡೆದಿರುವ ಫಲಾನುಭವಿಗಳಿಗೆ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಸೌಲಭ್ಯಗಳನ್ನು ವಿತರಿಸಲು ಸಿದ್ಧರಾಗುವಂತೆ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವರು ನಿರ್ದೇಶಿಸಿದರು. 2019-20ನೆ ಸಾಲಿನ ಯೋಜನೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಟೆಂಡರುಗಳನ್ನು ಈ ತಿಂಗಳ ಅಂತ್ಯದೊಳಗೆ ಕರೆಯಲು ಸಜ್ಜಾಗುವಂತೆ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಿದರು.
ಕ್ರೈಸ್ ಸಂಸ್ಥೆಯ ಮೂಲಕ ನಡೆಸಲಾಗುತ್ತಿರುವ ವಸತಿ ಶಾಲೆಗಳ ಮಕ್ಕಳಿಗೆ ಶಾಲೆಯ ಆರಂಭದ ದಿನವೇ ಸಮವಸ್ತ್ರ, ಬ್ಯಾಗ್, ಶೂ, ಸಾಕ್ಸ್, ನೋಟ್ ಪುಸ್ತಕ ಮುಂತಾದ ಲೇಖನ ಸಾಮಾಗ್ರಿಗಳನ್ನು ವಿತರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕ್ರೈಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸಚಿವರು ಆದೇಶಿಸಿದರು. ಐರಾವತ, ಸಮೃದ್ಧಿ, ಉನ್ನತಿ, ಪ್ರಬುದ್ಧ ಕಾರ್ಯಕ್ರಮಗಳನ್ನು ಈ ವರ್ಷ ಸಮರ್ಪಕ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಆದ್ಯತೆ ನೀಡಲು ಅವರು ಅಧಿಕಾರಿಗಳಿಗೆ ಒತ್ತಿ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಕುಮಾರ್ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರರಾದ ಶ್ರೀ ಇ.ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಶ್ರೀ ಅನ್ಬುಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ತಾಪಕ ನಿರ್ದೇಶಕ ಶ್ರೀ ರಘುನಂದನಮೂರ್ತಿ ಇನ್ನಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.