ಕಲಬುರಗಿ: ವಿಶ್ವಪರಂಪರೆಯ ಸಪ್ತಾಹ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸರಕಾರಿ ವಸ್ತು ಸಂಗ್ರಹಾಲಯ ಕಲಬುರಗಿ ಹಾಗೂ ಇನ್‌ಟ್ಯಾಕ್ ಕಲಬುರಗಿ ಅಧ್ಯಯಗಳ ಸಂಯುಕ್ತ ಆಶ್ರಯದಲ್ಲಿ ’ಫಿರೋಜಾಬಾದ ದರ್ಶನ’ ಕಾರ್ಯಕ್ರಮವನ್ನು ಫಿರೋಜಾಬಾದ ಕೋಟೆಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಇತಿಹಾಸ ಪ್ರಾಧ್ಯಾಪಕರು ಹಾಗೂ ಸಂಶೋಧಕರಾದ ಡಾ.ಶಂಭುಲಿಂಗ ಎಸ್.ವಾಣಿ ಅವರು ಫಿರೋಜಾಬಾದ ಸ್ಮಾರಕಗಳ ಕುರಿತು ಉಪನ್ಯಾಸ ನೀಡುತ್ತಾ ಫಿರೋಜಾಬಾದ ಬಹಮನಿ ಸುಲ್ತಾನರ ಮೂರನೆ ರಾಜ್ಯಧಾನಿ ಪಟ್ಟಣ, ಫಿರೋಜ್ ಶಹಾ ಬಹಮನಿಯು ಕ್ರಿ.ಶ. ೧೪೦೬ರಲ್ಲಿ ವಿಜಯನಗರದ ಮೇಲೆ ದಂಡಯಾತ್ರೆ ಮುಗಿಸಿಕೊಂಡು ಬರುವಾಗ ಅವನ ಸೈನ್ಯ ಹಾಗೂ ಸುಲ್ತಾನನು ಭೀಮಾ ನದಿಯ ದಂಡೆಯ ಮೇಲೆ ಕೆಲಕಾಲ ತಂಗಿತು, ಆಗ ಸುಲ್ತಾನನಿಗೆ ಇದು ಅತ್ಯಂತ ಸೂಕ್ತ ಮತ್ತು ಆಕರ್ಷಿಕ ಸ್ಥಳವಾಗಿ ಕಂಡುಬಂದಿತು.
ಕಲಬುರಗಿ ಕೋಟೆ ವಿಸ್ತಾರಗೊಳಿಸಲು ಸಾಧ್ಯವಿಲ್ಲದಿದ್ದಾಗ ಮತ್ತು ಕುದುರೆಗಳಿಗೆ, ಆನೆಗಳಿಗೆ ವಿಶಾಲ ಸ್ಥಳ ಹಾಗೂ ಕುಡಿಯಲು ನೀರಿನ ಅನುಕೂಲಕ್ಕಾಗಿ ಮತ್ತು ರಾಜ್ಯಕ್ಕೆ ನದಿಯಿಂದ ರಕ್ಷಣೆ ದೊರೆಯುತ್ತಿದೆ ಎನ್ನುವ ಹಲವು ಕಾರಣಗಳಿಗೆ ಹೊಸ ರಾಜಧಾನಿಯ ನಿರ್ಮಾಣಕಾರ್ಯ ಆರಂಭಗೊಂಡು ಮುಂದಿನ ೮-೧೦ ವರ್ಷಗಳಲ್ಲಿ ವಿಶಾಲವಾದ ಕೋಟೆ, ನಾಲ್ಕು ದಿಕ್ಕಿನಲ್ಲಿ ಬೃಹತ್ ಪ್ರಮಾಣದ ಪ್ರವೇಶ ದ್ವಾರಗಳು, ಮೂರು ಅಂತಸ್ತಿನ ಅರಮನೆ, ವಿಶಾಲವಾದ ಜಾಮಿ ಮಸೀದಿ, ಸಭಾ ಭವನ, ಸುಲ್ತಾನರ ವಿಶ್ರಾಂತಿ ಸ್ಥಳಗಳು, ಸೈನಿಕರಿಗೆ, ಆನೆಗಳಿಗೆ ಹಾಗೂ ಕುದುರೆಗಳಿಗೆ ವಿಶೇಷವಾದ ಸ್ಥಳಾವಕಾಶವನ್ನು ಫಿರೋಜ್ ಶಹಾ ಈ ಕೋಟೆಯ ಒಳಭಾಗದಲ್ಲಿ ಕಲ್ಪಿಸಿಕೊಟ್ಟಿರುವುದನ್ನು ಡಾ.ಎಸ್.ಎಸ್.ವಾಣಿಯವರು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು. ನಂತರ ಎಲ್ಲಾ ಸ್ಥಳಗಳಿಗೆ ಬೇಟಿಕೊಟ್ಟು ಅವುಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಫಿರೋಜಾಬಾದ ಕೋಟೆಯ ಪ್ರವೇಶಕ್ಕೆ ಯಾವುದೇ ಸೂಕ್ತ ಪ್ರವೇಶ ದ್ವಾರಗಳು ಅಥವಾ ರಸ್ತೆಗಳು ಇರುವುದಿಲ್ಲ, ಇಡಿ ಕೋಟೆಯ ಆವರಣದ ಭೂಮಿಯನ್ನು ಕೃಷಿಗೆ ಅಳವಡಿಸಿಲಾಗಿದ್ದು, ಇದರ ಕಲ್ಲುಗಳು ಹೊಲಕ್ಕೆ ರಕ್ಷಣೆಗೆ ಬಳಸಿಕೊಂಡಿದ್ದು, ಪ್ರಮುಖ ದ್ವಾರಗಳ ಮುಂಭಾಗದಲ್ಲಿ ತಂತಿಯ ಬೇಲಿ ಹಾಕಿ ಪ್ರವೇಶಕ್ಕೆ ಅಡ್ಡಿ ಮಾಡಲಾಗಿದೆ. ಒಳಭಾಗದ ಕಟ್ಟಡಗಳನ್ನು ನಾಶಗೊಳಿಸುವ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದು ಕಂಡುಬರುತ್ತದೆ. ನಿಧಿಯ ಆಸೆಗಾಗಿ ಕಟ್ಟಡಗಳನ್ನು ನೆಲಸಮಗೊಳಿಸುವ ಚಟುವಟಿಕೆ ನಡೆಯುತ್ತಿದೆ. ಈ ರೀತಿಯ ಚಟುವಟಿಕೆಗಳು ಹಾಗೆ ಮುಂದುವರೆದರೆ ಮುಂದಿನ ಕೆಲವೆ ದಶಕಗಳಲ್ಲಿ ಕೋಟೆ ಸಂಪೂರ್ಣವಾಗಿ ನಾಶಗೊಳ್ಳುತ್ತದೆ.
ಕಾರ್ಯಕ್ರಮದಲ್ಲಿ ವಸ್ತು ಸಂಗ್ರಹಾಲಯ ಇಲಾಖೆಯ ಅನ್ವೇಷಕ ಶಬ್ಬೀರ ಅಹಮ್ಮದ, ಸರಕಾರಿ (ಸ್ವಯತ) ಕಾಲೇಜು ಸ್ನಾತಕೋತ್ತರ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಟಿ.ವಿ.ಅಡಿವೇಶ, ಪ್ರೊ.ಚಂದ್ರಶೇಖರ ಅನಾದಿ, ಸರಕಾರಿ ಮಹಿಳಾ ಕಾಲೇಜು ಸ್ನಾತಕೋತ್ತರ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶಶಿಶೇಖರ ರೆಡ್ಡಿ, ಡಾ.ಭೀಮಣ್ಣಾ ಘನಾತೆ, ಪ್ರೊ.ಶರಣಪ್ಪ ಗುಂಡಗುರ್ತಿ, ಪ್ರೊ.ರವಿಕುಮಾರ, ಸಂಶೋಧನಾ ವಿದ್ಯಾರ್ಥಿಗಳು, ಹಾಗೂ ಎರಡು ಕಾಲೇಜುಗಳ ಸ್ನಾತಕೋತ್ತರ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.