ಕೂಲಿ ಕಾರ್ಮಿಕರ ಬೀದಿ ಸಭೆ: ಕಲಬುರ್ಗಿಗೆ ಬರಲಿ ಶ್ರಮಾಧಾರಿತ ಕೈಗಾರಿಕೆಗಳು

0
44

ವಾಡಿ: ದಿನೇದಿನೆ ಕೆಲಸಗಳು ಕಡಿತಗೊಳ್ಳುತ್ತಿದ್ದು, ಕೂಲಿಗೆ ಕತ್ತರಿ ಬೀಳುತ್ತಿದೆ. ದಿನಗೂಲಿ ಕಾರ್ಮಿಕರ ಬದುಕು ಅಭದ್ರತೆಯಿಂದ ತತ್ತರಿಸುತ್ತಿದೆ. ನಿರುದ್ಯೋಗ ಬೆಳೆಯುತ್ತಿರುವ ಕಲಬುರಗಿ ಜಿಲ್ಲೆಗೆ ಶ್ರಮಾಧಾರಿತ ಕೈಗಾರಿಕೆಗಳು ಹೆಚ್ಚೆಚ್ಚು ಬರಬೇಕು ಎಂದು ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ರಾಘವೇಂದ್ರ ಎಂ.ಜಿ ಒತ್ತಾಯಿಸಿದರು.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ವತಿಯಿಂದ ಡಿ.೪ ರಂದು ಸೇಡಂ ಪಟ್ಟಣದಲ್ಲಿ ಸಂಘಟಿಸಲಾಗುತ್ತಿರುವ ಜಿಲ್ಲಾ ಮಟ್ಟದ ಪ್ರಥಮ ಕಾರ್ಮಿಕರ ಸಮ್ಮೇಳನದ ಪೂರ್ವಭಾವಿಯಾಗಿ ವಾಡಿ ಪಟ್ಟಣದ ಚೌಡೇಶ್ವರ ವೃತ್ತದಲ್ಲಿ ಆಯೋಜಿಸಲಾಗಿದ್ದ ಕೂಲಿ ಕಾರ್ಮಿಕರ ಬೀದಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರಲು ಪೈಪೋಟಿಗಿಳಿದಿವೆ. ಸರಕಾರಿ ಕಚೇರಿಗಳಲ್ಲಿ ಮತ್ತು ಖಾಸಗಿ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲದಾಗಿದೆ. ಖಾಯಂ ರೀತಿಯ ಕೆಲಸಗಳಿಗೆ ಇವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು ಮುಲಾಜಿಲ್ಲದೆ ಮನೆಗೆ ಕಳುಹಿಸಲಾಗುತ್ತಿದೆ. ಪ್ರತಿಯೊಬ್ಬ ಪ್ರಜೆಯ ಉದ್ಯೋಗದ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿರುವ ಸರಕಾರವೇ ಇಂದು ವಸತಿನಿಲಯ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಸರಕಾರದ ಈ ಕುತಂತ್ರವನ್ನು ಕಾರ್ಮಿಕರು ಅರಿತುಕೊಳ್ಳಬೇಕಾಗಿದೆ. ಗುತ್ತಿಗೆ ಕಾರ್ಮಿಕರು ಖಾಯಂ ನೌಕರರಿಗಿಂತ ಹೆಚ್ಚು ದುಡಿದರೂ ಅವರಿಗೆ ಸಕಾಲಕ್ಕೆ ನಿಗದಿಯಾಗಿರುವ ಕನಿಷ್ಠ ವೇತನ ಕೂಡಾ ಸಿಗುತ್ತಿಲ್ಲ. ಸರಕಾರವು ಗುತ್ತಿಗೆ ನೌಕರರನ್ನು ಮಲತಾಯಿ ಮಕ್ಕಳಂತೆ ಕಾಣುತ್ತಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ಎಐಯುಟಿಯುಸಿ ಜಿಲ್ಲಾ ಮುಖಂಡ ಮಹೇಶ ನಾಡಗೌಡ ಮಾತನಾಡಿ, ಕೇಂದ್ರ ಸರಕಾರದ ಪ್ರತಿಷ್ಠಿತ ಯೋಜನೆಗಳಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಹಾಗೂ sಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಾಜ್ಯದ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಸೇವಾ ಮನೋಭಾವದಿಂದ ಗ್ರಾಮದ ಮತ್ತು ಇಲಾಖೆಯ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ. ರಾಜ್ಯದಾದ್ಯಂತ ಸಾವಿರಾರು ಕಾರ್ಯಕರ್ತೆಯರು ಸಕಾಲಕ್ಕೆ ರೋಗಿಗಳನ್ನು, ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ದು ಜೀವ ಉಳಿಸುತ್ತಿದ್ದಾರೆ. ಈ ಹಿಂದೆ ಹೆರಿಗೆ ಸಮಯದಲ್ಲಿ ಸಂಭವಿಸುತ್ತಿದ್ದ ಗ್ರಾಮೀಣ ಬಡ ಕುಟುಂಬಗಳ ಲಕ್ಷಾಂತರ ತಾಯಂದಿರ ಮತ್ತು ಶಿಶುಗಳ ಮರಣಗಳು ಕಡಿಮೆಯಾಗಿದೆ. ಆದರೆ ಈ ಸೇವೆಯನ್ನು ನಂಬಿದವರ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ಅಂಗನವಾಡಿ ಕಾರ್ಯರ್ತೆಯರು ಮತ್ತು ವಸತಿ ನಿಲಯಗಳ ದಿನಗೂಲಿಗಳು ಉದ್ಯೋಗ ಅಭದ್ರತೆ ಎದುರಿಸುತ್ತಿದ್ದಾರೆ. ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಸರಕಾರದ ಸೌಲಭ್ಯಗಳು ಗಗನಕುಸುಮದಂತಿವೆ. ಅವರ ಜೀವನಮಟ್ಟ ತೀರಾ ಹೀನಾಯವಾಗಿದೆ ಎಂದು ಕಳವಳ ವ್ಯಕ್ತಪಡಿದರು. ಸಂಘಟಿತ ಹೋರಾಟವೊಂದೇ ನಮ್ಮ ಮುಂದಿರುವ ಏಕೈಕ ದಾರಿಯಾಗಿದ್ದು, ಸೇಡಂ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮೂಲಕ ಹೋರಾಟದ ದನಿ ಎತ್ತಿ ಹಿಡಿಬೇಕು ಎಂದು ಕರೆ ನೀಡಿದರು.

ಮುಖಂಡರಾದ ಗುಂಡಣ್ಣ ಎಂ.ಕೆ, ವಿಠ್ಠಲ ರಾಠೋಡ, ಶರಣು ಹೇರೂರ ಹಾಗೂ ನೂರಾರು ಜನ ಕಟ್ಟಡ ಕಾರ್ಮಿಕರು, ಪೌರಕಾರ್ಮಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಸತಿ ನಿಲಯ ಕಾರ್ಮಿಕರು ಬೀದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here