ಸುರಪುರ: ತಾಲೂಕಿನಲ್ಲಿ ಕಳೆದ ೫-೬ ತಿಂಗಳುಗಳಿಂದ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ಹಾಗೂ ಅಂಗವಿಕಲ ವೇತನಗಳು ಬಾರದೇ ಬಡ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದು ಶೀಘ್ರವೇ ಸಂಬಂಧಪಟ್ಟ ಫಲಾನುಭವಿಗಳಿಗೆ ವೇತನವನ್ನು ಜಮಾ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣಶೆಟ್ಟಿ ಬಣ) ತಿಮ್ಮಾಪುರ ಘಟಕ ಕಾರ್ಯಕರ್ತರು ಆಗ್ರಹಿಸಿದರು.
ಸರಕಾರ ಅಶಕ್ತರಿಗೆ ಸಾಮಾಜಿಕ ಭದ್ರತೆ ನೀಡುವ ಸಲುವಾಗಿ ಸಂಧ್ಯಾಸುರಕ್ಷಾ, ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ವೇತನವನ್ನು ನೀಡುತ್ತಿದ್ದು ಆದರೆ ತಾಲೂಕಿನಲ್ಲಿ ಕಳೆದ ೫-೬ ತಿಂಗಳುಗಳಿಂದ ವೇತನ ಬಾರದೇ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ, ಸರಕಾರ ನೀಡುವ ಮಾಶಾಸನವನ್ನು ಅವಲಂಬಿಸಿ ನಿರ್ಗತಿಕ ಹಾಗೂ ಬಡ ಫಲಾನುಭವಿಗಳು ಜೀವನ ನಡೆಸುತ್ತಿದ್ದು ಸರಕಾರದ ಈ ಮಹತ್ವಾಕಾಂಕ್ಷೆಯ ಸೌಲಭ್ಯ ಫಲಾನುಭವಿಗಳಿಗೆ ಸಿಗದೇ ತೊಂದರೆ ಪಡುವಂತಾಗಿದೆ. ವೇತನ ಬಿಡುಗಡೆಗೊಳಿಸುವಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿ ಶೀಘ್ರವೇ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಮಾಡುವಂತೆ ಸಂಘಟನೆಯ ಮುಖಂಡರು ಒತ್ತಾಯಿಸಿದರು.
ಸಂಘಟನೆಯ ತಿಮ್ಮಾಪುರ ಘಟಕದ ಪ್ರಧಾನ ಕಾರ್ಯದರ್ಶಿ ಮಹ್ಮದ ಹುಸೇನ, ಸಂಚಾಲಕ ಎಂ.ಡಿ.ಸರ್ವರ್ ಮತ್ತಿತರರು ಉಪ ಖಜಾನಾಧಿಕಾರಿ ಡಾ.ಎಂ.ಎಸ್.ಶಿರವಾಳ ಅವರಿಗೆ ಮನವಿ ಸಲ್ಲಿಸಿದರು.