ಕಲಬುರಗಿ: ಹೋಟೆಲ್ನಲ್ಲಿ ನೀರು ಕೇಳಿದ್ದಕ್ಕೆ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರು ಗ್ರಾಮದಲ್ಲಿ ಸವರ್ಣೀಯರಿಂದ ದಲಿತರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಝಳಕಿ ಗ್ರಾಮಕ್ಕೆ ಸೇರಿದ ಗುಂಡಪ್ಪ, ಹವಳಪ್ಪ ಹಾಗೂ ಭೀಮಾಶಂಕರ್ ಹಲ್ಲೆಗೊಳಗಾದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಗೋಳಾ ಲಕ್ಕಮ್ಮ ಜಾತ್ರೆಗೆ ಹೋಗಿದ್ದ ವೇಳೆ ದಲಿತರು ಮತ್ತು ಸವರ್ಣೀಯರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿಯಾಗಿದೆ ಎನ್ನಲಾಗಿದೆ. ಜಾತ್ರೆಯಿಂದ ವಾಪಸ್ಸಾಗುವ ವೇಳೆ ಭೂಸನೂರು ಗ್ರಾಮದಲ್ಲಿ ನೀರು ಕೇಳಿದಾಗ ಗ್ರಾಮದ ಕೆಲವರು ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 30 ಜನರಿದ್ದ ಗುಂಪಿನಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಇನ್ನು ಹಲ್ಲೆಗೊಳಗಾದವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ದಲಿತ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯನ್ನು ಖಂಡಿಸಿದ್ದಾರೆ. ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.