ಕಲಬುರಗಿ: ಇಂದು ಅಪಮೌಲ್ಯಗಳೇ ಮೌಲ್ಯಗಳಾಗಿ ಮಾರ್ಪಾಡಾಗಿ ಎಲ್ಲ ವ್ಯವಸ್ಥೆಗಳಲ್ಲಿ ವಿಜೃಂಭಿಸುತ್ತಿವೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ ಕಳವಳ ವ್ಯಕ್ತಪಡಿಸಿದರು.
ನಗರದ ಹೊರ ವಲಯ ಉಪಳಾಂವ ಗ್ರಾಮದ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯಲ್ಲಿ ಮೂರು ಕೋಣೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶೀಲ ಇಲ್ಲದ ಶಿಕ್ಷಣ, ನೀತಿ ಇಲ್ಲದ ರಾಜಕಾರಣ, ಆಡಳಿತ ವರ್ಗವಲ್ಲದೇ ಇತರ ಎಲ್ಲ ಕ್ಷೇತ್ರಗಳಲ್ಲಿ ಭೃಷ್ಟಾಚಾರ ಪಡೆದಲ್ಲಿ ಗೌರವ ಎನ್ನುವ ಧೋರಣೆಗಳೇ ವಿಜೃಂಭಿಸುತ್ತಿವೆ. ಅಂದರೆ ಶಿಕ್ಷಕರಿಗೆ ಪಾಠ ಮಾಡದೇ ಸಂಬಳ ಪಡೆಯುವ, ವ್ಯಾಪಾರೀಗಳಿಗೆ ಮೋಸ ಮಾಡಿ ಹಣ ಗಳಿಸುವ, ರಾಜಕಾರಣಿಗಳಿಗೆ ಯಾವುದೇ ವಾಮಮಾರ್ಗ ಹಿಡಿದಾದರೂ ಅಧಿಕಾರ ಬರುವುದೇ ಹಾಗೂ ಬಂದ ಆಧಿಕಾರ ಉಳಿಸಿಕೊಳ್ಳುವ ಅಪಮೌಲ್ಯಗಳೇ ಕಾರ್ಯಾನುಷ್ಠಾನಕ್ಕೆ ಬಂದು ವಿಜೃಂಭಿಸುತ್ತಿವೆ. ಅಪಮೌಲ್ಯಗಳನ್ನು ನಿರ್ನಾಮಗೊಳಿಸುವ ಶಕ್ತಿ ಇಂದಿನ ವಿದ್ಯಾರ್ಥಿ ಹಾಗೂ ಯುವಕರ ಕೈಯಲ್ಲಿದೆ. ಹೀಗಾಗಿ ನಾಳೀನ ಪ್ರಜೆಗಳಾಗುವರು ನೈತಿಕ ಮೌಲ್ಯಗಳತ್ತ ಗಮನಹರಿಸುವುದು ಬಹು ಮುಖ್ಯವಾಗಿದೆ ಎಂದು ವಿವರಣೆ ನೀಡಿದರು.
ಭೃಷ್ಟಾಚಾರಕ್ಕೆ ಯಾರು ಕಾರಣರು ಎಂದು ಇಂದಿನ ಮಕ್ಕಳನ್ನು ಕೇಳಿದರೆ ಸೈನಿಕರು ಹಾಗೂ ವಿಜ್ಞಾನಿಗಳಿಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ಕಾರಣರಾಗಿದ್ದಾರೆ.ಇದರಲ್ಲಿ ಮಠಾಧೀಶರು ಸೇರಿದ್ದಾರೆ ಎನ್ನುತ್ತಾರೆ.ಹೀಗಾಗಿ ನೀನು ಗಳಿಸಿದ ಜ್ಞಾನವನ್ನು ದೇಶದ ಒಳಿತಿಗಾಗಿ ಬಳಸದಿದ್ದಲ್ಲಿ ನೀನೆ ಪ್ರಥಮ ದೇಶದ್ರೋಹಿ ಎಂಬ ಸ್ವಾಮಿ ವಿವೇಕಾನಂದ ವಾಣಿಯನ್ನು ಆಗಾಗ್ಗೆ ನೆಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ತಮ್ಮ ಆಸ್ತಿ ಶಾಲೆಗೆ ಮೀಸಲಿಟ್ಟು ಮೌಲ್ಯಯುತ ಶಿಕ್ಷಣ ನೀಡುತ್ತಿರುವ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಗೌಡೇಶ ಎಚ್.ಬಿರಾದಾರ ಅವರ ಶೈಕ್ಷಣಿಕ ಸೇವೆ ಸಮಾಜಕ್ಕೆ ಮಾದರಿಯಾಗಿದೆ.ಇದೇ ಕಾರಣಕ್ಕೆ ತಾವು ತಮ್ಮ ತಂದೆ-ತಾಯಿ ಹಾಗೂ ತಾತನ ಹೆಸರಲ್ಲಿ ಕೋಣೆಯೊಂದು ನಿರ್ಮಾಣಕ್ಕೆ ಸಹಾಯ ಮಾಡಿರುವುದಾಗಿ ನ್ಯಾಯಮೂರ್ತಿಗಳವರು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ, ಹಿರಿಯ ಪತ್ರಕರ್ತ ಹಣಮಂತರಾವ ಭೈರಾಮಡಗಿ ಮಾತನಾಡಿ, ದಶಕದ ಹಿಂದೆ ದಾಲ್‌ಮಿಲ್‌ನಲ್ಲಿ ಕೆಲಸ ಮಾಡುವ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಗೌಡೇಶ ಅವರು ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯೊಂದು ತೆರೆದಿರುವುದು ಹಾಗೂ ಮಕ್ಕಳ ಬುದ್ದಿವಂತಿಕ್ಕೆ ದೇಶ ಗುರುತಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಹೆಮ್ಮೆಯಾಗಿದೆ ಎಂದು ಹೇಳಿದರು.
ಮಕ್ತಂಪೂರ ಗುರುಬಸವ ಮಠದ ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ, ಯಾರಿಂದಲೂ ಕಸಿದುಕೊಳ್ಳದಿರುವಂತಹ ವಿದ್ಯೆಯೇ ದೊಡ್ಡ ಶ್ರೀಮಂತಿಕೆಯಾಗಿದೆ.ಮಕ್ಕಳು ಬಿಳಿ ಹಾಳೆ ಇದ್ದ ಹಾಗೆ.ಏನನ್ನು ಮೂಡಿಸುತ್ತೇವೆಯೋ ಅದು ಮೂಡುತ್ತದೆ.ಆದ್ದರಿಂದ ಇಲ್ಲೇ ಮೌಲ್ಯಯುತ ಶಿಕ್ಷಣ ಅದರಲ್ಲೂ ಸಂಸ್ಕಾರಗಳನ್ನು ಕಲಿಸಿಕೊಡುವುದು ಬಹು ಮುಖ್ಯವಾಗಿದೆ ಎಂದು ವಿವರಣೆ ನೀಡಿದರು.
ಯುವ ಮುಖಂಡ ಗೋರಖನಾಥ್ ಶಾಖಾಪುರ, ಖ್ಯಾತ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್, ಉದ್ಯಮಿ ಬಸವರಾಜ ಮಾಲಿಪಾಟೀಲ್, ದಂತ ವೈದ್ಯರಾದ ಸುಧಾ ಹಾಲಕಾಯಿ, ತಾಲೂಕಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಕುಮಾರ ಬಿರಾದಾರ, ಶಾಲೆಯ ಅಧ್ಯಕ್ಷ ಗೌಡೇಶ ಬಿರಾದಾರ, ರಾಜು ಹೆಬ್ಬಾಳ, ನೀಲಾಂಬಿಕಾ, ಪಾಲಕರು, ಶಿಕ್ಷಕ ವರ್ಗದವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಲಿಂಗಪ್ಪ ಹೋತಪೆಟೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಉದ್ದಿಮೆದಾರ ಗೋಪಾಲ ಪಾಲಾದಿ ಪ್ರಾಸ್ತಾವಿಕ ಮಾತನಾಡಿದರು.ಶಾಲೆಯ ಮುಖ್ಯ ಶಿಕ್ಷಕಿ ಶ್ರೀದೇವಿ ಸ್ವಾಗತಿಸಿದರು.ಶಿಕ್ಷಕಿ ಮಧುರಾಣಿ ನಿರೂಪಿಸಿದರು.ನ್ಯಾಯವಾದಿ ಹಣಮಂತರಾಯ ಅಟ್ಟೂರ ತತ್ವಪದ ಹಾಡಿ ವಂದಿಸಿದರು.ಇದಕ್ಕೂ ಮುಂಚೆ ಶಾಲಾ ಕೋಣೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.