ಗಗನದ ಗುಂಪ ಚಂದ್ರಮ ಬಲ್ಲುದಲ್ಲದೆ
ಕಡೆಯಲಿದ್ದಾಡುವ ಹದ್ದು ಬಲ್ಲುದೆ ಅಯ್ಯ
ನದಿಯ ಗುಂಪ ತಾವರೆ ಬಲ್ಲುದಲ್ಲದೆ
ಕಡೆಯಲ್ಲಿದ್ದ ಹೊನ್ನಾವರಿಕೆ ಬಲ್ಲುದೆ ಅಯ್ಯ
ಪುಷ್ಪದ ಪರಿಮಳವ ತುಂಬಿ ಬಲ್ಲುದಲ್ಲದೆ
ಕಡೆಯಲಿದ್ದಾಡುವ ನೊರಜು ಬಲ್ಲುದೆ ಅಯ್ಯ
ಚೆನ್ನಮಲ್ಲಿಕಾರ್ಜುನಯ್ಯ
ನಿಮ್ಮ ಶರಣರ ನಿಲವ ನೀವೆ ಬಲ್ಲಿರಲ್ಲದೆ
ಈ ಕೋಣನ ಮೈಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯ
—–
ಕಲ್ಯಾಣದ ಜಂಗಮರ ಆಗಮನದಿಂದ ಅರಮನೆ ಗುರುಮನೆಯಾಗಿದೆ. ಮಹಾದೇವಿ ಹಂಬಲದುಂಬಿದ ಮನದಿಂದ, ಕಕ್ಕುಲಾತಿಯಿಂದ ಮಂತ್ರಪುರುಷ ಬಸವಣ್ಣನನ್ನು “ನಿನ್ನ ಬೆಳಕಿಲ್ಲದೆ ಲಿಂಗವ ನೋಡಿದರೆ ಫಲವಿಲ್ಲ” ಎಂದು ಬಸವಶಕ್ತಿಯನ್ನು ಕೂಗಿ, ಕೂಗಿ ಕರೆದಳು. ಎಲ್ಲೋ ಇರುವ ಕಂದನ ಧ್ವನಿ, ಎಲ್ಲೋ ಇರುವ ತಾಯಿ ಕೇಳಿಸಿಕೊಳ್ಳುವ ಹಾಗೆ ಉಡುತಡಿಯ ಸುತ್ತಮುತ್ತ ಕಲ್ಯಾಣದ ಶರಣರು ಓಡಾಡುತ್ತಿದ್ದರು. ಕಲ್ಯಾಣದ ಜಂಗಮರು ಹೇಳಿದ ವರ್ಣನೆ ಕೇಳುತ್ತ ವಿಲಾಸಿನಿಯರು ರಾಜವೈಭೋಗ, ಸುರಪಾನವಿಲ್ಲದೆ ಶ್ವೇತಧಾರಿಯಾಗಿ ಕುಳಿತಿದ್ದರು.
ಶೂನ್ಯಪೀಠದ ಅಧ್ಯಕ್ಷ ಅಲ್ಲಮನ ನೇತೃತ್ವದ ಅನುಭವ ಮಂಟಪದಲ್ಲಿ ಮೂರು ಹೊತ್ತು ನಡೆಯವ ಗೋಷ್ಠಿಯಲ್ಲಿ ಮಡಿವಾಳ ಮಾಚಿದೇವ, ಢೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ನೀಲಾಂಬಿಕೆ, ಆಯ್ದಕ್ಕಿ ಮಾರಯ್ಯ ದಂಪತಿ ಸೇರಿದಂತೆ ೭೭೦ ಜನರು ಕೂಡಿಕೊಂಡು ವಾಸ್ತವಿಕ ಅಂಶಗಳ ಬಗ್ಗೆ ಚರ್ಚೆ ಮಾಡುತ್ತಿದ್ದರೆ ತರು ಮರದಲ್ಲಿ ತಪ್ಪಸ್ಸು ಮಾಡುವುದಕ್ಕಿಂತ ಒಂದು ದಿನದ ಇಂತಹ ಅನುಭಾವ ಗೋಷ್ಠಿಯಲ್ಲಿ ಭಾಗವಹಿಸಿದರೆ ಸಾಕು ಅನಂತಕಾಲ ಅನಂತವಾಗಿರಬಹದು ಎಂದೆನಿಸುತ್ತದೆ. ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ, ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ, ಎತ್ತೆತ್ತ ನೋಡಿದಡತ್ತ ನೀನೆ ಬಸವ, ಕಾಲಿಲ್ಲದವನಿಗೆ ಕಾಲು ಕೊಟ್ಟೆ ಬಸವ ಎಂದು ಹಾಡುವುದು, ಬರೆಯುವುದನ್ನು ಕಂಡರೆ ಅದು ಸಾಕ್ಷಾತ್ ಭೂ ಕೈಲಾಸ ಎಂದು ಜಂಗಮರು ಅನುಭವ ಮಂಟಪದ ಬಗ್ಗೆ ಸಾಹೋದಾರಣವಾಗಿ ವಿವರಿಸುತ್ತಿದ್ದರು.
ಜಲದಲ್ಲಿ ಉದ್ಭವಿಸಿದ ಮುತ್ತು ಜಲ ತಾನಲ್ಲ ಎನ್ನುವಂತೆ ಸಂಸಾರದಲ್ಲಿ ಹುಟ್ಟಿದರೂ ಅಪ್ಪಟ ಮುತ್ತಿನ ಗುಣಸ್ವಭಾವ ಹೋಲುವ ಬಸವಣ್ಣನವರ ದೃಷ್ಟಿ, ಅದು ಪರುಷ ದೃಷ್ಟಿಯಾಗಿತ್ತು. ಬಸವನೇ ಶಿವ, ಶಿವನೇ ಬಸವ. ಗುರು ಬಸವಣ್ಣ, ಲಿಂಗ ಬಸವಣ್ಣ, ಜಂಗಮ ಬಸವಣ್ಣನಾಗಿದ್ದಾರೆ. ಅವರೆಲ್ಲರೂ “ಆನೆಯನೇರಿಕೊಂಡು ಹೋದಿರೆ ನೀವು, ಕುದುರೆಯನೇರಿಕೊಂಡು ಹೋದಿರೆ ನೀವು, ಸತ್ಯದ ನಿಲವನರಿಯದೆ ಎಂದು ಹೇಳಿ ಸನ್ಮಾರ್ಗ ತೋರಿಸುತ್ತಿದ್ದಾರೆ ಎಂದು ಜಂಗಮರು ಕಲ್ಯಾಣವನ್ನು ಕಣ್ಮುಂದೆ ತಂದು ನಿಲ್ಲಿಸಿದರು.
ಕಲ್ಯಾಣದ ಶರಣರು ಆಡುವ ಅಕ್ಕ-ತಂಗಿ, ತಂದೆ-ತಾಯಿ, ಅಣ್ಣ-ತಮ್ಮ ಮುಂತಾದ ಪದಗಳನ್ನು ಜಂಗಮರಿಂದ ತಿಳಿದ ಮಹಾದೇವಿಗೆ ಮನಸ್ಸಿನಲ್ಲಿ ಕಸಿವಿಸಿಯಾಗುತ್ತದೆ. ಹೀಗೆ ಅರಮನೆಯಲ್ಲಿ ವಚನ ಸಂಗೀತ, ವಚನ ವಿಚಾರಗಳ ಕುರಿತು ಚರ್ಚೆ ನಡೆಯುತ್ತಿರುತ್ತದೆ. ಮಹಾದೇವಿ ಕೌಶಿಕನ ಪ್ರಶಾಂತ ಭವನದಲ್ಲಿ ಪ್ರವಚನ ಕೇಳುತ್ತ ಕುಳಿತಿರುತ್ತಾಳೆ. ಆಕೆಯ ಭಾವ ಆನಂದದ ಉತ್ತುಂಗದ ಸ್ಥಿತಿಯಲ್ಲಿ ತೇಲಾಡುತ್ತಿತ್ತು. ತಾನು ಕಲ್ಯಾಣಕ್ಕೆ ಹೋಗುವ ಕಾಲ ಸನ್ನಿಹಿತವಾಗಿದೆ ಅನಿಸಿತು.
ಜಂಗಮರ ಈ ವಾಣಿಯನ್ನು ಕೇಳಿ ತಾಳ್ಮೆಯಿಂದಿದ್ದ ಕೌಶಿಕನಿಗೆ ಕೋಪ ನೆತ್ತಿಗೇರಿತು. ನಿಮ್ಮ ಉಪದೇಶ ನನಗೆ ಬೇಕಿಲ್ಲ ಬಿಕಾರಿಗಳೆ! ಎಂದು ಕೂಗಿ ಅಲ್ಲಿಯೇ ಇದ್ಧ ಭಟರಿಗೆ ಅವರನ್ನು ಕತ್ತು ಹಿಡಿದು ಹೊರ ಹಾಕಲು ಆದೇಶ ಮಾಡುತ್ತಾನೆ. ಮಹಾದೇವಿಯನ್ನು ಬಂಧಿಸಿದ್ದು ತಪ್ಪು ಎಂದು ಜಂಗಮರು ಹೇಳುತ್ತಾರೆ. ಜಂಗಮರಿಗೆ ಅವಮಾನ ಮಾಡಿದ ತಕ್ಷಣವೇ ಸಿಂಹಿಣಿಯಂತಾದ ನಮ್ಮ ಶರಣರನ್ನು ನಿಂದಿಸಿರುವುದರಿಂದ ಇಲ್ಲಿ ನಾನು ಕ್ಷಣ ಮಾತ್ರವೂ ಇರಲಾರೆ ಎಂದು ಘರ್ಜಿಸುತ್ತಾಳೆ. ತಾನುಟ್ಟ ಸೀರೆಯನ್ನು ತಾನೆ ತುಳಿದು ಹೊರಗೆ ಬರುತ್ತಾಳೆ.
ಇಲ್ಲಿಂದ ನನ್ನನ್ನು ಕರೆದೊಯ್ಯಿರಿ ಎಂದು ಜಂಗಮರನ್ನು ಹಿಂಬಾಲಿಸುತ್ತಾಳೆ. ಆಗ ಕೌಶಿಕ ಮಾಹಾದೇವಿಯ ಸೆರಗು ಹಿಡಿದು ಜಗ್ಗಿದ. ಅಗ್ನಿಜ್ವಾಲೆಯಂತಾದ ಅಕ್ಕ, “ಅವಿವೇಕಿ, ದುರಹಂಕಾರಿ, ಕಾಮದ ಪಿಶಾಚಿಯಾದ ನೀನು ನನ್ನ ದೇಹ ಮುಟ್ಟಬಹುದು. ಆದರೆ ನನ್ನೊಳಗಿನ ವೈರಾಗ್ಯ ಮುಟ್ಟಲಾದೀತೆ?” ನಾನು ಚನ್ನಮಲ್ಲಿಕಾರ್ಜುನನ ಬೆಳಗನುಟ್ಟವಳು. ನೀನ್ಯಾಕೋ ನಿನ್ನ ಹಂಗ್ಯಾಕೋ! ಇಲ್ಲಿಗೆ ನನ್ನ-ನಿನ್ನ ನಡುವಿನ ಒಪ್ಪಂದ ಮುಗಿಯಿತು ಎಂದು ತಾನುಟ್ಟ ಸೀರೆಯನ್ನು ಕೌಶಿಕನ ಮುಖದ ಮೇಲೆ ಎಸೆದಳು.
ಯಾವುದಕ್ಕೆ ನೀನು ಹಂಬಲಿಸಿದ್ದೆಯೋ ಅದನ್ನು ನೋಡು “ಈ ದೇಹ ಅಮೇದ್ಯದ ಮಡಿಕೆ. ಮೂತ್ರದ ಕುಡಿಕೆ, ಚನ್ನಮಲ್ಲಿಕಾರ್ಜುನನ ಅರಿ ಮರುಳೆ” ಎಂದು ಜಲಪಾತವೊಂದು ಭೋರ್ಗರೆಯುವಂತೆ ಸಿಡಿದೆದ್ದು ಹೊರ ನಡೆಯುತ್ತಿರುತ್ತಾಳೆ. ಹೀಗೆ ಹೋಗಬೇಡ ಮಹಾದೇವಿ ಎಂದು ಕೌಶಿಕ ಅಂಗಲಾಚುತ್ತಾನೆ. ನಾನು ಬೆತ್ತಲಾಗಿರುವುದು ನಿನ್ನ ಸಂಶಯಕ್ಕಾಗಿ ಅಲ್ಲ. ನಿನ್ನ ಕಾಮದ ಭಾವನೆ ಕಳೆಯುವುದರ ಜೊತೆಗೆ ಇಡೀ ಪುರುಷಲೋಕದ ಕಣ್ಣು ತೆರೆಸಲು ಎಂದು ಹೇಳಿ ಸತ್ಯದ ದರ್ಶನ ಮಾಡಿಸುತ್ತಾಳೆ.