ಯಾದಗಿರಿ, ಸುರಪುರ: ಶಾಸಕ ನರಸಿಂಹನಾಯಕ ರಾಜುಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ಶುಭಾಶಯ ಕೋರಿ ಅವರ ಕಾರ್ಯಕರ್ತರು ಎಲ್ಲೆಡೆ ಹಾಕುತ್ತಿದ್ದ ಬ್ಯಾನರ್ ಹರಿದು ಕಿಡಿಗೇಡಿಗಳು ದಾಂಧಲೆ ನಡೆಸಿದ ಘಟನೆ ತಡರಾತ್ರಿ ನಡೆದಿದೆ.
ನಗರದ ದರ್ಬಾರ್ ರಸ್ತೆಯಲ್ಲಿ ಬ್ಯಾನರ್ ಗಳನ್ನು ಹಾಕಿಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ವಾಹನದ ಗಾಜನ್ನು ಪುಡಿಗೊಳಿಸಿದ್ದಾರೆ ಹಾಗೂ ರಾಜುಗೌಡ ಮತ್ತು ಅವರ ಸಹೋದರ ಹನುಮಂತ ನಾಯಕ (ಬಬ್ಲುಗೌಡ)ರ ಭಾವಚಿತ್ರವಿರುವ ಬ್ಯಾನರ್ ಗಳನ್ನು ಹರಿದು ಹಾಕಿದ್ದಾರೆ.
ಕಳೆದ ನವೆಂಬರ್ 22ರ ರಾತ್ರಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರ ಹುಟ್ಟುಹಬ್ಬದ ಶುಭಾಶಯ ಕೋರಿದ ಬ್ಯಾನರನ್ನು ಅವರ ಕಾರ್ಯಕರ್ತರು ಶಾಸಕರ ಸ್ವಗ್ರಾಮ ಕೊಡೇಕಲ್ ಪಟ್ಟಣದಲ್ಲಿ ಕಟ್ಟುತ್ತಿರುವ ವೇಳೆ ಅವುಗಳನ್ನು ಹರಿದು ಹಾಕಿ ಮೋಟಾರ್ ಬೈಕುಗಳನ್ನು ಸುಟ್ಟು ಎಸೆಯಲಾಗಿತ್ತು ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು ಹಾಗು ಮೊನ್ನೆಯೇ ಹುಣಸಗಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆಕೂಡ ನಡೆಸಲಾಗಿತ್ತು. ಆ ಘಟನೆಯ ದ್ವೇಷದ ಹಿನ್ನೆಲೆಯಲ್ಲಿ ಈಗ ಶಾಸಕ ರಾಜುಗೌಡರ ಹುಟ್ಟು ಹಬ್ಬದ ಬ್ಯಾನರ್ಗಳನ್ನು ಹರಿದು ಹಾಕಿರಬಹುದೆಂದು ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಘಟನೆಯ ಕುರಿತು ಇದುವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿರುವುದಿಲ್ಲ ಎಂದು ಸುರಪುರ ಠಾಣಾಧಿಕಾರಿ ಆನಂದರಾವ ತಿಳಿಸಿದ್ದಾರೆ.