ಕಲಬುರಗಿ: ಸಾಹಿತ್ಯ, ಸಂಗೀತ ಮತ್ತಿತರ ಲಲಿತ ಕಲೆಗಳ ಮೂಲಕ ಕಲಾವಿದ ಸಮಾಜಮುಖಿ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಕಲೆಯ ಮೂಲಕ ಮಾನವೀಯ ಮೌಲ್ಯಗಳ ಪ್ರತಿಪಾದನೆ ಆಗಬೇಕು ಎಂದು ಹಿರಿಯ ಕಲಾವಿದ ಕಿಶೋರ್ ಕುಮಾರ ನಾಗುರೆ ಒತ್ತಾಯಿಸಿದರು.
ನಗರದ ಇಂಡಿಯನ್ ರಾಯಲ್ ಅಕಾಡೆಮಿ ಆರ್ಟ ಮತ್ತು ಕಲ್ಚರ್ ಸಂಸ್ಥೆ ಭಾನುವಾರ ಅಂಜುಮನ್ ತರಕ್ಕಿ ಎ ಉರ್ದು ಹಿಂದ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ೧೩ ನೇ ವಾರ್ಷಿಕ ಇಂಡಿಯನ್ ರಾಯಲ್ ಅಕಾಡೆಮಿಯ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆವಹಿಸಿದ್ದ ಸಾಹಿತಿ ಮಂಡಲಗಿರಿ ಪ್ರಸನ್ನ ಮಾತನಾಡಿ ಕಲೆ ಅತ್ಯಂತ ಸಂಕಿರ್ಣವಾದ ವಿಷಯ. ಸಾಹಿತ್ಯದಂತೆ ಕಲೆಯೂ ಮನುಷ್ಯನೊಳಗಿನ ಸತ್ಯವನ್ನು ಹೊರಗೆಡವಂತಹ ಕೆಲಸ ಮಾಡಬೇಕು. ಕಲೆ, ಸಾಹಿತಿ, ಸಂಗೀತದಂತಹ ಲಲಿತ ಕಲೆಗಳು ಸಮಾಜದ ಮೂಲ ಬೇರು. ಈ ಕಲೆಗಳು ಉಳಿದು ಅರ್ಥಪೂರ್ಣವಾಗಿ ಬೆಳೆದಾಗ ಮಾತ್ರ ಆರೋಗ್ಯವಂತೆ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಸಂಘಟಕ ವಿಜಯಕುಮಾರ್ ತೇಗಲತಿಪ್ಪಿ ಮಾತನಾಡಿ, ಮಾನವೀಯ ಮೌಲ್ಯಗಳು, ಮನುಷ್ಯತ್ವದ ಗುಣಗಳು ಅರ್ತಹೀನವಾಗುತ್ತಿರುವ ಇಂದಿನ ಸಮಾಜದಲ್ಲಿ ಉತ್ತಮ ಸಮಾಜ ಕಟ್ಟುವ ಕೆಲಸವನ್ನು ಸಾಹಿತಿ, ಕಲಾವಿದ ಮಾಡುತ್ತಾನೆ. ಇಂತಹ ಕ್ಷೇತ್ರಗಳನ್ನು ಬೆಳೆಸುವ ಅಗತ್ಯವಿದೆ ಎಂದು ನುಡಿದರು. ರಾಷ್ಟ್ರೀಯ ಯುವ ಸಾಹಿತ್ಯ ಪುರಸ್ಕಾರ ಪಡೆದ ಉರ್ದು ಸಾಹಿತಿ ಡಾ. ಘಜನ್‌ಫರ್ ಇಕ್ಬಾಲ್, ಇಂಡಿಯನ್ ರಾಯಲ್ ಅಕಾಡೆಮಿ ಅಧ್ಯಕ್ಷ ಡಾ.ರೆಹಮಾನ್ ಪಟೇಲ್ ಮಾತನಾಡಿದರು.
ಸಮಾರಂಭದಲ್ಲಿ ೫ ಜನ ಕಲಾವಿದರು ಹತ್ತು ಸಾವಿರ ನಗದು ಪುರಸ್ಕಾರ, ೨೦ ಜನ ಕಲಾವಿದರು ಬಂಗಾರದ ಪದಕ, ೨೦ ಜನ ಕಲಾವಿದರು ಮೆರಿಟ್ ಅವಾರ್ಡ ಮತ್ತು ವಿವಿಧ ಶಾಲೆಯ ಮಕ್ಕಳು ಹಾಗೂ ಕೆಲ ಉತ್ತಮ ಕಲಾ ಶಿಕ್ಷಕರು ಪ್ರಶಸ್ತಿ ಪಡೆದರು.
ಹಿರಿಯ ಕಲಾವಿದರಾದ ಅಯಾಜುದ್ದೀನ್ ಪಟೇಲ್, ಹಾಜಿ ಮಲಂಗ್, ಎಂ.ಸಂಜೀವ್, ರೇವಣಸಿದ್ದಪ್ಪ ಹೊಟ್ಟಿ, ಕಿರಣ ಪಾಟೀಲ, ಖಾಜಾ ಪಟೇಲ್, ರವಿ ದಾಚಂಪಲ್ಲಿ, ಲಕ್ಷ್ಮೀಕಾಂತ ಮನುಕರ್, ಹಣುಮಂತರಾಯ ಅಟ್ಟೂರ್ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯದ ಕಲಾವಿದರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.