ಅನ್ನ ಕೊಡುವ ರೈತನೇ ಜಗತ್ತಿನ ಜಗದ್ಗುರು!

0
177

12ನೇ ಶತಮಾನದ ಶರಣರೆಲ್ಲರೂ ಶ್ರಮಿಕರು. ಅವರುಗಳು ಶ್ರಮ ಸಂಸ್ಕೃತಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ತನ್ನ ಬಣ್ಣವನ್ನು ಮಣ್ಣಿಗೆ ಕೊಟ್ಟು, ಮಣ್ಣಿನ ಬಣ್ಣವನ್ನು ತಾವು ಪಡೆದುಕೊಂಡವರು ರೈತರು. ಒಕ್ಕಲುತನ ಈ ದೇಶದ ಸಂಸ್ಕೃತಿ. ರೈತನೇ ಈ ದೇಶದ ಬೆನ್ನೆಲುಬು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅವನು ಬೆಳೆದ ಬೆಳೆಗೆ, ಅವನಿಗೆ ಬೆಲೆ ಇಲ್ಲದಂತಾಗಿದೆ. ಒಂದು ಕಡೆ ಸಾಲ, ಇನ್ನೊಂದು ಕಡೆ ಅತೀವೃಷ್ಟಿ, ಮತ್ತೊಂದು ಕಡೆ ಅನಾವೃಷ್ಟಿ, ಮಗದೊಂದು ಕಡೆ ರಾಜಕೀಯ ಚದುರಂಗದಾಟ. ಹೀಗಾಗಿ ಆಕಾಶಕ್ಕೂ ಏರದೆ, ಭೂಮಿಗೂ ಇಳಿಯದೆ ತ್ರಿಶಂಕು ಸ್ಥಿಯಲ್ಲಿ ಬದುಕು ಸಾಗಿಸುತ್ತ ರೈತ ಇಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಹಾಗೆ ನೋಡಿದರೆ ಕೃಷಿಕರೇ ಈ ಜಗತ್ತಿನ ಜಗದ್ಗುರುಗಳು. ಆದರೆ ಅನ್ನ ಕೊಡುವ ರೈತನಿಗೆ ಬೆನ್ನು ಕೊಡುವವರು ಯಾರು? ಎನ್ನುವಂತಿದೆ ಇಂದಿನ ಸ್ಥಿತಿ.

Contact Your\'s Advertisement; 9902492681

ಮಳೆ ಬಂದರೆ ವಚನದ ಕಟ್ಟುಗಳು ನೆನೆದು ಹಾಳಾಗುತ್ತವೆ ಎಂದು ಬಗೆದು ಹೊಟ್ಟೆಯಲ್ಲಿ ವಚನದ ಕಟ್ಟುಗಳನ್ನಿರಿಸಿಕೊಂಡು ಬೆನ್ನು ಮೇಲೆ ಮಾಡಿ ಮಲಗಿದ ಚಿತ್ತರಗಿ ಶ್ರೀಗಳು, ಭಕ್ತರ ಸಂಕಟ ನಿವಾರಣೆಗೆ ವಚನ ಸಾಹಿತ್ಯದ ಓದುವುದೇ ಮದ್ದು ಎಂದು ಹೇಳುತ್ತಿದ್ದರು. ಕೃಷಿಜ್ಞಾನ ಪ್ರದೀಪಿಕೆಯನ್ನು ಮೊಟ್ಟ ಮೊದಲು ವಿವಿಗೆ ನೀಡಿದ ಮಹಾಸತ್ಪುರುಷರು, ರಸ್ತಾಪುರದ ಭೀಮಕವಿ ವಿರಚಿತ ಬಸವ ಪುರಾಣವನ್ನು ತಲೆಯ ಮೇಲೆ ಹೊತ್ತುಕೊಂಡು ನಾಡೆಲ್ಲ ಸುತ್ತಾಡಿದವರು ಸಂತೆಕೆಲ್ಲೂರಿನ ಘನಮಠದಾರ್ಯರು. ಭಕ್ತರು ಬಂದು ತಮ್ಮ ಸಂಕಟ, ನೋವು ಇವರ ಬಳಿ ಹೇಳಿಕೊಂಡಾಗ ಬಸವ ಪುರಾಣ ಹಚ್ಚಿರಿ ನೋವು, ಸಂಕಟ ಮಾಯವಾಗುತ್ತದೆ ಎಂದು ಹೇಳುತ್ತಿದ್ದರಂತೆ!
ಅಥಣಿಯ ಮುರುಘೇಂದ್ರ ಶ್ರೀಗಳು ಸಹ ಇದೇ ಹಾದಿಯಲ್ಲಿ ನಡೆದು ನುಡಿದವರು. ಈ ಮೂವರು ಮಹಾತ್ಮರನ್ನು ಶರಣ ಪರಂಪರೆಯ ಆರಾಧಕರು ಯಾವೊತ್ತೂ ಮರೆಯಬಾರಾದು. ಇವರನ್ನು ಮರೆತರೆ ಮಾನವ ಜನ್ಮಕ್ಕೆ ಅರಿವಿಲ್ಲ ಎಂದು ತಿಳಿಯಬೇಕಾಗುತ್ತದೆ.

ಈ ಬಸವಾದಿ ಶರಣ ಪರಂಪರೆಯಲ್ಲಿ ರೈತರ ಪ್ರತಿನಿಧಿಯಾಗಿ ಬರುವ ಒಕ್ಕಲಿಗ ಮುದ್ದಣ್ಣನ ಕಾಮಭೀಮ ಜೀವಧನದೊಡೆಯ ಎಂಬ ಅಂಕಿತನಾಮವಿಟ್ಟುಕೊಂಡು ಬರೆದ ೧೨ ವಚನಗಳನ್ನು ದೊರೆತಿವೆ. ಭೂಮಿ ಅಂಗದಲಿ ಲಿಂಗ ಸಸಿ ಬೆಳೆದ ಪರಮ ದಾಸೋಹಿ-ಕಾಯಕಜೀವಿ ಇವರು. ತಮ್ಮ ಕೃಷಿ ಕಾಯಕದಿಂದಲೇ ಹಸಿದ ಹೊಟ್ಟೆಗಳನ್ನು ತುಂಬಿಸುವುದರ ಜೊತೆಗೆ ತಮ್ಮ ಅನುಭಾವಿಕ ನೆಲೆಯಿಂದ ನಮ್ಮೊಳಗಿರುವ ಅರಿವು ಜಾಗೃತಗೊಳಿಸಿದರು. ಬೇಲಿಯಿಲ್ಲದ ತನ್ನ ಹೊಲದಲ್ಲಿ ಫಲಕೊಡುವ ರುಚಿಯಾದ ಮಾವಿನ ಹಣ್ಣಿನ ಜೊತೆಗೆ ಹಸನಾದ, ಹದವಾದ ಅಧ್ಯಾತ್ಮ ಬೆಳೆದ ನಿಜ ನೇಗಿಲಯೋಗಿಗಳು ಇವರು.

ಅಂಗವೇ ಭೂಮಿಯಾಗಿ, ಲಿಂಗವೇ ಬೇಲಿಯಾಗಿ, ವಿಶ್ವಾಸವೆಂಬ ಭತ್ತ ಒಲಿದು ಉಂಡು ಸುಖಿಯಾಗಿರಬೇಕೆಂದ ಒಕ್ಕಲಿಗ ಮುದ್ದಣ್ಣನವರು, ಒಕ್ಕಲುತನದ ಪ್ರಕ್ರಿಯೆ ಹೇಳುತ್ತಲೇ ಸರಳ ಬದುಕಿನ ಸೂತ್ರ ಕಟ್ಟಿಕೊಟ್ಟರು. ದಿನ ದಿನ ಸೊರಗುವ, ಕರಗುವ, ಬೀಳುವ ಮನೆಯಲ್ಲಿ, ಒಳಗಿದ್ದ ಯಜಮಾನ ಇನ್ನೊಂದು ಮನೆಗೆ ಹೋಗದಂತೆ ಮಾಡು ಎಂದು ಹೇಳುವ ಮೂಲಕ ಈ ಮೇದಿನಿಯಲ್ಲಿ ಅಧ್ಯಾತ್ಮದ ಬೀಜ ಬಿತ್ತಿದ ಕೃಷಿ ಋಷಿ.

ನೀ ಕೊಟ್ಟ ಭೂಮಿಗೆ ಮುಂದೆ ಕರಲು,
ಹಿಂದೆ ಇಗ್ಗರಲು, ಅಲ್ಲಿಂದ ಮಧ್ಯೆ ಭೂಮಿ,
ಮೂರು ನೆಲದ ಭೂಮಿಯ ಆರೈದು
ಬೆಳೆದೆಹನೆಂದಡೆ ಇದು ವಶವೂ ಅಲ್ಲ
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ

ಬೆಳೆ ಬೆಳೆಯಲು ಭೂಮಿ ಮುಖ್ಯ. ಭಕ್ತಿ ಬೆಳೆಯಲು ಮನಸ್ಸು ಮುಖ್ಯ. ದೇವರು ಕೊಟ್ಟ ಕರಲು, ಇಗ್ಗರಲು, ಸಾಧಾರಣ ಭೂಮಿಯಲ್ಲಿ ಏನು ಬೆಳೆಯಲಿ? ಎಂದು ಪ್ರಶ್ನಿಸುತ್ತಲೇ ಒಕ್ಕಲಿಗನ ವಿವೇಚನೆ, ಶ್ರಮಭರಿತ ಕಾಯಕದಿಂದ ಕೃಷಿಯೋಗ್ಯ ಭೂಮಿಯನ್ನಾಗಿ ಮಾರ್ಪಡಿಸಬೇಕು ಎಂದು ಹೇಳುವ ಮೂಲಕ ನಮ್ಮೊಳಗಿನ ಅರಿವು ಜಾಗೃಗೊಳಿಸುವ ಕೆಲಸ ಮಾಡಿದರು. ಹೀಗೆ ಒಂದೆಡೆ ಬಹಿರಂಗದ ಬೇಸಾಯ ಮತ್ತೊಂದೆಡೆ ಅಂತರಂಗದ ಕೃಷಿ ಮೂಲಕ ಅಂಗವನ್ನು ಲಿಂಗವನ್ನಾಗಿಸುವ ದಿಸೆಯಲ್ಲಿ

ವೇದ ಶಾಸ್ತ್ರವನೋದವುದಕ್ಕೆ ಹಾರುವನಲ್ಲ
ಇರಿದು ಮರೆಯುವುದಕ್ಕೆ ಕ್ಷತ್ರೀಯನಲ್ಲ
ವ್ಯವಹರಿಸುವುದಕ್ಕೆ ವೈಶ್ಯನಲ್ಲ
ಉಳುವ ಒಕ್ಕಲು ಮಗನ ತಪ್ಪ ನೋಡದೆ
ಒಪ್ಪಿಗೊಳ್ಳಯ್ಯ ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ

ಎಲ್ಲರೂ ಕಾಯಕ ಮತ್ತು ದಾಸೋಹ ಎಂದರೆ ಇವರು ಮಾತ್ರ ದಾಸೋಹ ಮತ್ತು ಕಾಯಕ ಎಂದು ಬಾಳಿ ಬದುಕಿದವರು. ಒಕ್ಕಲಿಗ ಮುದ್ದಣ್ಣನವರ ಈ ಮಾತುಗಳು ರೈತರ ಒಡಲು ತಣ್ಣಗಿರುವಂತೆ ಮಾಡುವುದರಲ್ಲಿ ಸಂದೇಹವಿಲ್ಲ.

(ಸ್ಥಳ: ಬಸವ ಸಮಿತಿಯ ಅನುಭವ ಮಂಟಪ, ಜಯನಗರ, ಕಲಬುರಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here