ಕಲಬುರಗಿ: ಶ್ರೀ ವಿಶ್ವಗಂಗಾ ಶಿಕ್ಷಣ ಸಂಸ್ಥೆಯ ವತಿಯಿಂದ ಸೇಡಂ ಪಟ್ಟಣದ ಎ.ಪಿ.ಎಂ.ಸಿ. ಸಭಾ ಭವನದಲ್ಲಿ ಇಂದು ನಡೆದ ‘ಪಾಲಕರ ಚಿಂತನಾ ಸಮಾವೇಶ-2020 ‘ ಮಹಿಳಾಪರ ಸಂಘಟಕಿ ಸಂತೋಷಿರಾಣಿ ರಾಜಕುಮಾರ ಪಾಟೀಲ ತೆಲ್ಕೂರ ಉದ್ಘಾಟಿಸಿದರು.
ನಂತರ ಮಾತನಾಡಿದ ಸಂತೋಷಿರಾಣಿ ತೆಲ್ಕೂರ, ಒಂದು ಸಂಸ್ಥೆಯಾಗಲೀ, ಸಮಾಜವಾಗಲೀ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಶಿಕ್ಷಕರ ಜತೆಗೆ ಪಾಲಕರ ಪಾತ್ರವೂ ಬಹು ಮುಖ್ಯವಾಗಿರುತ್ತದೆ. ಇಂದಿನ ಸಮಾಜದಲ್ಲಿ ಅಪಮೌಲ್ಯಗಳೇ ರಾರಾಜಿಸುತ್ತಿರುವಾಗ ಮೌಲ್ಯಗಳು ಮಾಯವಾಗುತ್ತಿವೆ. ಹಾಗಾಗಿ, ಮೌಲ್ಯಗಳ ಪುನರ್ ಸ್ಥಾಪನೆಗೆ ಇಂಥ ಕಾರ್ಯಕ್ರಮಗಳ ಅವಶ್ಯವಿದೆ ಎಂದ ಅವರು, ಈ ನಿಟ್ಟಿನಲ್ಲಿ ಸಮಾಜಮುಖಿ ಮತ್ತು ಪ್ರಗತಿಪರ ಚಿಂತನೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದರು.
ಅನುಭಾವ ನೀಡಿದ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಪದವಿ ಕಾಲೇಜಿನ ಪ್ರಿನ್ಸಿಪಾಲ ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ, ವಿದ್ಯೆಯ ಜತೆಗೆ ವಿವೇಕವನ್ನೂ ಸಹ ಬೆಳೆಸಿಕೊಳ್ಳಬೇಕು. ಗುಣಮಟ್ಟದ ಮತ್ತು ಸಂಸ್ಕಾರಭರಿತ ಶಿಕ್ಷಣ ನೀಡುತ್ತಿರುವ ಶ್ರೀ ವಿಶ್ವಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯ ಮೆಚ್ಚುವಂಥಹದ್ದು ಎಂದು ಮಾರ್ಮಿಕವಾಗಿ ಮಾತನಾಡಿದರು.
ಅತಿಥಿಯಾಗಿ ಆಗಮಿಸಿ ಮಾತನಾಡಿದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಮಕ್ಕಳ ಬೆಳವಣಿಗೆ, ಮೌಲ್ಯಯುತ ಬದುಕು ಮತ್ತು ಜೀವನದ ಸಾಧನೆಯಲ್ಲ್ಸ ಪಾಲಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಿ ಅವರಿಗೆ ಜೀವನದಲ್ಲಿ ಉತ್ತಮ ಮಾರ್ಗದರ್ಶನ ನೀಡುವಲ್ಲಿ ಪಾಲಕರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಶಂಕರ ಬಿರಾದಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಸಿದ್ದು ಬಾನರ್ ಕೋಡ್ಲಾ, ಬಿಜೆಪಿ ಯುವ ನಾಯಕ ಶಿವಲಿಂಗರೆಡ್ಡಿ ಪಾಟೀಲ ಬೆನಕನಹಳ್ಳಿ, ಜ್ಞಾನಜ್ಯೋತಿ ಐಟಿಐ ಪ್ರಿನ್ಸಿಪಾಲ್ ದುಂಡಪ್ಪ ಹಿಪ್ಪರಗಿ, ಮುಖ್ಯೋಪಾಧ್ಯಯರಾದ ಶರಣಪ್ಪ ಅಲ್ದಿ ಮಾತನಾಡಿದರು.