೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಲಾಂಛನ ಬಿಡುಗಡೆ

0
131

ಕಲಬುರಗಿ: ಕನ್ನಡಕ್ಕೆ ಮೊಟ್ಟ ಮೊದಲ ಕೃತಿ “ಕವಿರಾಜಮಾರ್ಗ” ನೀಡಿದ ಸೂಫಿ-ಸಂತರ ನಾಡು ಕಲಬುರಗಿಯಲ್ಲಿ ೩೨ ವರ್ಷದ ನಂತರ ೨೦೨೦ರ ಫೆಬ್ರವರಿ ೫, ೬ ಮತ್ತು ೭ ರಂದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ರವಿವಾರ ಇಲ್ಲಿನ ಜಿಲ್ಲಾಡಳಿತ ಕಚೇರಿಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ಎಂ.ವೈ.ಪಾಟೀಲ, ವಿಧಾನ ಪರಿಷತ್ತಿನ ಶಾಸಕ ತಿಪ್ಪಣಪ್ಪ ಕಮಕನೂರ, ಕಲಬುರಗಿ ಪೊಲೀಸ್ ಅಯುಕ್ತ ಎಂ.ಎನ್.ನಾಗರಾಜ, ಜಿಲ್ಲಾಧಿಕಾರಿ ಶರತ್ ಬಿ., ಡಿಸಿಪಿ ಕಿಶೋರ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ ಸೇರಿದಂತೆ ಇನ್ನಿತರರು ಇದ್ದರು.

Contact Your\'s Advertisement; 9902492681

ಸಮ್ಮೇಳನದ ಲಾಂಛನ ಬಗ್ಗೆ: ಕನ್ನಡ ಸಾಹಿತ್ಯ ಚರಿತ್ರೆಯ ಇತಿಹಾಸದಲ್ಲಿ ಮೊದಲು ದರ್ಶನ ನೀಡುವ ಜಿಲ್ಲೆ ಎಂದರೆ ಕಲಬುರಗಿ ಜಿಲ್ಲೆ. ಸಮ್ಮೇಳನದ ಲಾಂಛನದಲ್ಲಿ ಈ ಜಿಲ್ಲೆಯ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಶ್ರೀ ವಿಜಯನು ಬರೆದ ‘ಕವಿರಾಜ ಮಾರ್ಗ’ ಎಂಬ ಆದರ್ಶ ಗ್ರಂಥ ಮತ್ತು ಕವಿಯು ಕಾವ್ಯ ರಚನೆಯಲ್ಲಿ ತೊಡಗಿರುವುದನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ. ಕಲಬುರ್ಗಿ ಜಿಲ್ಲೆಯ ಸನ್ನತಿ, ನಾಗಾವಿ, ಮರತೂರು ಮುಂತಾದ ಕಡೆ ಹಲವಾರು ಮಹತ್ವದ ಪ್ರಾಚೀನ ಶಾಸನಗಳು ಇರುವದರಿಂದ ಸಾಂಕೇತಿಕವಾಗಿ ಶಾಸನವೊಂದನ್ನು ಈ ಲಾಂಛನದಲ್ಲಿ ಬಳಸಿಕೊಳ್ಳಲಾಗಿದೆ. ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಸೌಹಾರ್ದ-ಸಹಿಷ್ಣುತೆಗೆ ಹೆಸರುವಾಸಿಯಾದ ಮತ್ತು ಕಲಾತ್ಮಕ ಸ್ಮಾರಕಗಳಾದ ಹಜರತ್ ಖಾಜಾ ಬಂದೇ ನವಾಜ ದರ್ಗಾ, ಶ್ರೀ ಶರಣಬಸವೇಶ್ವರ ಐತಿಹಾಸಿಕ ಭವ್ಯ ದೇವಾಲಯ, ಕಲಬುರಗಿಯ ಕೋಟೆ, ಚರ್ಚ್ ಹಾಗೂ ಬೌದ್ಧ ವಿಹಾರವನ್ನು ಲಾಂಛನದಲ್ಲಿ ಬಳಸಿಕೊಳ್ಳಲಾಗಿದೆ.

ಕನ್ನಡ ನಾಡಿನಲ್ಲಿ ಅಶೋಕನ ಪೂರ್ವದ ಕಾಲದಲ್ಲಿಯ ಬೌದ್ಧ ಧರ್ಮ ಇತ್ತು ಎಂಬುದಕ್ಕೆ ಸಾಕ್ಷ್ಯಾಧಾರಗಳು ಸನ್ನತಿಯಲ್ಲಿ ದೊರತಿವೆ. ಹಾಗಾಗಿ ಸನ್ನತಿಯ ಶಿಲ್ಪಗಳನ್ನು ಈ ಲಾಂಛನದಲ್ಲಿ ಬಳಸಿಕೊಳ್ಳಲಾಗಿದೆ. ಜನಪದ ಹಾಡುಗಾರರ ಮತ್ತು ತತ್ವಪದಕಾರರ ಸಂಕೇತವಾಗಿ ಏಕತಾರಿ ಮತ್ತು ದಮ್ಮಡಿಯನ್ನು ಬಳಸಿಕೊಳ್ಳಲಾಗಿದೆ. ಪ್ರಾಚೀನ ಕವಿಗಳ ಮತ್ತು ವಚನಕಾರರ ಸಾಹಿತ್ಯ ರಚನೆಯ ಸಂಕೇತವಾಗಿ ತಾಳೆಗರಿ ಕಟ್ಟನ್ನು ಬಳಸಿಕೊಳ್ಳಲಾಗಿದೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕಲಬುರಗಿಯಲ್ಲಿ ಅತಿ ಹೆಚ್ಚು ತೊಗರಿ ಬೆಳೆಯಲಾಗುತ್ತದೆ. ಕಲಬುರಗಿ ಜಿಲ್ಲೆಯನ್ನು ‘ತೊಗರಿ ಬೆಳೆಯ ಕಣಜ’ ಎಂದು ಕರೆಯಲಾಗುತ್ತದೆ. ಹಾಗಾಗಿ ತೊಗರಿ ಬೆಳೆಯನ್ನು ಈ ಲಾಂಛನದಲ್ಲಿ ಬಳಸಿಕೊಳ್ಳಲಾಗಿದೆ. ಕೊನೆಯದಾಗಿ ಈ ಲಾಂಛನದ ಮೇಲ್ಭಾಗದಲ್ಲಿ ಕನ್ನಡಾಂಬೆಯ ಭಾವಚಿತ್ರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಚಿಹ್ನೆ, ಧ್ವಜವನ್ನು ಬಳಸಿಕೊಳ್ಳಲಾಗಿದೆ ಮತ್ತು ಸಂಭ್ರಮದ ಸೂಚಕವಾಗಿ ಕಲಾತ್ಮಕವಾದ ಜನಪದ ಛತ್ರಿಯನ್ನು ಬಳಸಿಕೊಳ್ಳಲಾಗಿದೆ.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಚಿತ್ರಕಲಾ ಸ್ಪರ್ಧೆಗಾಗಿ ಕಲಾಕೃತಿಗಳ ಆಹ್ವಾನ

ಕಲಬುರಗಿಯಲ್ಲಿ ೨೦೨೦ರ ಫೆಬ್ರುವರಿ ೫, ೬ ಹಾಗೂ ೭ರಂದು ನಡೆಯಲಿರುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ ದೃಶ್ಯಕಲಾವಿದರಿಗಾಗಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಕಲಾವಿದರಿಂದ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ ಎಂದು ಸಾಹಿತ್ಯ ಸಮ್ಮೇಳನದ ಚಿತ್ರಕಲಾ ಪ್ರದರ್ಶನ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಎಂ. ರಾಚಪ್ಪ ಅವರು ತಿಳಿಸಿದ್ದಾರೆ.

ಕಲಾಕೃತಿಗಳು ಡ್ರಾಯಿಂಗ, ಪೇಂಟಿಂಗ ಹಾಗೂ ಗ್ರಾಫಿಕ್ ಪ್ರಕಾರಗಳಲ್ಲಿ ರಚನೆಯಾಗಿರಬೇಕು. ಕಲಾಕೃತಿಗಳು ಜಲವರ್ಣ, ತೈಲವರ್ಣ, ಡ್ರಾಯಿಂಗ ಅಥವಾ ಮಿಶ್ರಮಾಧ್ಯಮಗಳಲ್ಲಿ ಒಂದಾಗಿರಬೇಕು. ಕಲಾಕೃತಿ ಅಳತೆಯು ೩ಘಿ೩ ಅಡಿ ಮೀರಿರಬಾರದು. ೧ಘಿ೧ ಅಡಿಗಿಂತ ಕಡಿಮೆ ಇರಬಾರದು. ಕಲಾಕೃತಿಗಳನ್ನು ಸ್ಪರ್ಧೆಗೆ ತಲುಪಿಸುವ ಜವಾಬ್ದಾರಿ ಕಲಾವಿದರಾಗಿದೆ. ಕಲಾಕೃತಿಯು ಸುಂದರ ಫ್ರೇಮ್‌ನೊಂದಿಗೆ ಸಲ್ಲಿಸಬೇಕು. ಕಲಾಕೃತಿಯ ಜೊತೆಗೆ ಕಲಾವಿದರ ಸ್ವವಿವರವುಳ್ಳ ಪರಿಚಯ ಪತ್ರ ಹಾಗೂ ಎರಡು ಭಾವಚಿತ್ರಗಳನ್ನು ಸಹ ನೀಡಬೇಕು.

ಈ ಕಲಾಕೃತಿಗಳನ್ನು ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುತ್ತದೆ. ಒಟ್ಟು ೧೦ ಪ್ರಶಸ್ತಿಗಳಿದ್ದು, ನೆನಪಿನ ಕಾಣಿಕೆ ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ. ಪ್ರದರ್ಶನದಲ್ಲಿ ಆಯ್ಕೆಯಾದ ಎಲ್ಲಾ ಕಲಾವಿದರಿಗೆ ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಲಾಗುತ್ತದೆ. ಕಲಾವಿದರು ಕಲಾಕೃತಿಗಳನ್ನು ಪ್ರದರ್ಶನ ಮುಗಿದ ನಂತರ ೨೦೨೦ರ ಫೆಬ್ರವರಿ ೧೫ ರೊಳಗಾಗಿ ಮರಳಿ ಪಡೆಯಬೇಕು. ಕಾರಣಾಂತರದಿಂದ ಕಲಾಕೃತಿಗಳು ಹಾಳಾದರೆ ಇದಕ್ಕೆ ಸಮಿತಿಯು ಜವಾಬ್ದಾರರಾಗುವುದಿಲ್ಲ.

ಕರ್ನಾಟಕ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ತಮ್ಮ ಒಂದು ಕಲಾಕೃತಿಯನ್ನು ೨೦೨೦ರ ಜನವರಿ ೨೦ ರೊಳಗಾಗಿ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಸ್ಟೇಶನ್ ರಸ್ತೆ ಕಲಬುರಗಿ ಕಚೇರಿಯಲ್ಲಿ ಖುದ್ದಾಗಿ ಬಂದು ಒಪ್ಪಿಸಬೇಕು. ಕಲಾವಿದರು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೪೭೨-೨೭೮೬೭೨ ಹಾಗೂ ಹಣಮಂತ ಮಂತಟ್ಟಿ ಇವರ ಮೊಬೈಲ್ ಸಂಖ್ಯೆ ೯೪೪೯೧೨೦೮೬೭ ಹಾಗೂ ಲೋಕಯ್ಯ ಮಠಪತಿ ಇವರ ಮೊಬೈಲ್ ಸಂಖ್ಯೆ ೯೯೦೨೮೩೮೩೭೯ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here