ಕಲಬುರಗಿ: ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸಿ ಪತ್ರಿಕೆಯನ್ನು ಮುಂದುವರಿಸಿಕೊಂಡಿರುವ ಸತ್ಯಕಾಮ ದಿನಪತ್ರಿಕೆಯ ಸಂಪಾದಕ ಪಿ.ಎಂ.ಮಣ್ಣೂರ ಅವರು ಈ ಭಾಗದ ಸಾಕಷ್ಟು ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ ಎಂದು ರಂಗ ಸಮಾಜದ ಮಾಜಿ ಸದಸ್ಯೆ ಡಾ. ಸುಜಾತಾ ಜಂಗಮಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಕಲಾ ಮಂಡಳದಲ್ಲಿ ಸತ್ಯಕಾಮ 50 ಸಂಭ್ರಮ ವರ್ಷವಿಡೀ ನಿರಂತರ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭ ದಲ್ಲಿ ಸದಾಶಯ ನುಡಿಗಳನ್ನಾಡಿದ ಅವರು, ಸತ್ಯಕಾಮ ಹೆಸರಿನ ಮಣ್ಣೂರ ಅವರು ಈ ಮಣ್ಣಿನ ಪತ್ರಕರ್ತರಾಗಿ, ನಟರಾಗಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ, ಕಸಾಪ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಹಾನಗರ ಪಾಲಿಕೆ ಸದಸ್ಯರಾಗಿಯೂ ಸೇವೆ ಸಲ್ಲಿಸುವ ಮೂಲಕ ತಮ್ಮ ಪ್ರತಿಭಾ ಸಾಮರ್ಥ್ಯ ಮೆರೆದಿದ್ದಾರೆ ಎಂದು ಬಣ್ಣಿಸಿದರು.
ಸಂತೋಷಿ ರಾಣಿ ರಾಜಕುಮಾರ ಪಾಟೀಲ ತೆಲ್ಕೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಿಕೆಗಳಿಗೆ ಸಾಮಾಜಿಕ ಜವಾಬ್ದಾರಿಯಿದ್ದು, ಗುವ ಜನತೆಗೆ ದಾರಿ ತೋರಿಸುವ ದಿಕ್ಕಾಗುವ ಪಾತ್ರವನ್ನು ಮಾಧ್ಯಮ ಮಾಡಬೇಕು ಎಂದು ತಿಳಿಸಿದರು. ಯಡ್ರಾಮಿ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಕಲಾ ಮಂಡಳ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತ ಶಂಕರ ಕೋಡ್ಲಾ, ವೈದ್ಯ ಡಾ. ಎಸ್. ಎಸ್. ಗುಬ್ಬಿ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ ವೇದಿಕೆಯಲ್ಲಿದ್ದರು.