ಹರಟೆ ಮಲ್ಲರ ಮಾತಿನ ಜಟಾಪಟಿಗೆ ಪ್ರೇಕ್ಷಕರ ನಗೆಯ ಹೊನಲು

0
522
  • ಶಿವರಂಜನ್ ಸತ್ಯಂಪೇಟೆ

ಕಲಬುರಗಿ: ಪ್ರೀತಿಗೆ ಕಣ್ಣಿಲ್ಲ. ಪ್ರೀತಿ ಕುರುಡು. ಆದರೂ ದೊಡ್ಡವರು ನೋಡಿ ಓಕೆ ಅಂದ ಮ್ಯಾರೇಜ್‌ಗಳೇ ಉತ್ತಮ ಎಂಬುದು ಸದಾ ಚರ್ಚೆಯಲ್ಲಿರುವ ವಿಷಯವೇ! ಅದನ್ನೇ ಸ್ವಲ್ಪ ಸುಧಾರಿಸಿ “ಲವ್ ಮ್ಯಾರೇಜ್ ಮೇಲೋ ಅಥವಾ ಅರೆಂಜ್ ಮ್ಯಾರೇಜ್ ಮೇಲೋ” ಎಂಬ ವಿಷಯದ ಹರಟೆಗೆ ನಗರದ ಸಂಗಮೇಶ್ವರ ಮಹಿಳಾ ಮಂಡಳದ ಆವರಣ ವೇದಿಕೆಯಾಗಿತ್ತು.

ಇಲ್ಲಿನ ಸಹೃದಯಿ ಸ್ನೇಹ ಬಳಗದ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಈ ಕಾರ್ಯಕ್ರಮದ ಸೂತ್ರ ಹಿಡಿದು ಎಂದಿನಂತೆ ಪ್ರೊ. ಹೇಮಂತ ಕೊಲ್ಲಾಪುರೆ ಕುಳಿತಿದ್ದರು. ವಾದ ಮಂಡನೆಗೆ ಕುಳಿತವರು ಆರು ಜನ ಹರಟೆ ಮಲ್ಲರು. ಸಹೃದಯಿ ಸ್ನೇಹ ಬಳಗದ ಸದಸ್ಯ ರಾಜುಕುಮಾರ ಉದನೂರು, ಮಧುಮತಿ ಪಾಟೀಲ, ಗಣೇಶ ಪಾಟೀಲ ಲವ್ ಮ್ಯಾರೇಜ್ ಪರವಾಗಿ ಬ್ಯಾಟಿಂಗ್ ಮಾಡಿದರೆ, ಸಹೃದಯಿ ಸ್ನೇಹ ಬಳಗದ ಸದಸ್ಯ ಗುಂಡಣ್ಣ ಡಿಗ್ಗಿ, ಶೋಭಾ ರಂಜೋಳಕರ್, ಹಣಮಂತ ಖಜೂರಿ ಶಿಸ್ತಿನ ಫೀಲ್ಡಿಂಗ್ ಮಾಡಿ ಪ್ರೇಕ್ಷಕರಿಂದ ಹೌದೆನಿಸಿಕೊಂಡರು.

Contact Your\'s Advertisement; 9902492681

ವಾದ ಮಂಡನೆಗೆ ಕುಳಿತವರು ಆರು ಜನ ಹರಟೆ ಮಲ್ಲರು ನೆರೆದ ಪ್ರೇಕ್ಷಕರಲ್ಲಿ ಹಾಸ್ಯದ ಹೊನಲು ತುಂಬಿದರು. ವಾದ-ಪ್ರತಿವಾದ ಆಸ್ವಾದಿಸಲು ತೆರೆದುಕೊಂಡಿದ್ದವು ನೂರಾರು ಕಿವಿಗಳು. ಕಲಾವಿದರು ತಮ್ಮ ತಮ್ಮ ವಾದ ಮಂಡಿಸಿದಾಗಲೆಲ್ಲ ಚಪ್ಪಾಳೆ, ಕೇಕೆ, ಸಿಳ್ಳೆಯ ಸಪ್ಪಳ. ನ್ಯಾಯಾಧೀಶನ ಸ್ಥಾನ ಅಲಂಕರಿಸಿದ್ದ ಹೇಮಂತ್ ಕೊಲ್ಲಾಪುರೆ ಅವರ ಮಾತಿನ ಒಗ್ಗರಣೆ ಎಲ್ಲರನ್ನೂ ಒಂದೆರಡು ತಾಸು ಮರೆಸಿತ್ತು. ಸಂಜೆ ಏಳು ಗಂಟೆಗೆ ಅಲ್ಲಿಗೆ ಬಂದು ಕುಳಿತಿದ್ದ ಜನರು ಕಾರ್ಯಕ್ರಮ ಮುಗಿವರೆಗೆ ಅಲ್ಲಾಡಲಿಲ್ಲ.

ಲವ್ ಮ್ಯಾರೇಜ್ ಪರವಾಗಿ ಮಾತನಾಡುವವರು ಕೋಟು, ಶೂಟು, ಬೂಟು, ಟಿ-ಶರ್ಟ್, ಚೂಡಿದಾರ ಧರಿಸಿ ಬಂದಿದ್ದರೆ, ಅರೆಂಜ್ ಮ್ಯಾರೇಜ್ ಪರವಾಗಿರುವವರು ಇಳಕಲ್ ಸೀರೆ, ನೆಹರೂ ಶರ್ಟ್, ಪೈಜಾಮು ಧರಿಸಿ ಬಂದಿದ್ದರು. ನ್ಯಾಯಾಧೀಶರ ಪಾತ್ರ ವಹಿಸಿದ್ದ ಪ್ರೊ. ಹೇಮಂತ್ ಕೊಲ್ಲಾಪುರೆ ವಿಭಿನ್ನ ಧಿರಿಸು ಧರಿಸಿದ್ದರು. “ಆಧುನೀಕರಣದ ಪ್ರಭಾವದಿಂದಾಗಿ ಹಳೆಯ ಸಾಂಪ್ರದಾಯಿಕ ಮದುವೆಗಿಂತ ಪ್ರೇಮ ವಿವಾಹಗಳೇ ಹೆಚ್ಚಾಗುತ್ತಿದ್ದು, ಇದಕ್ಕೆ ನೀವೇನಂತೀರಿ?” ಎಂದು ಎರಡೂ ತಂಡದವರನ್ನು ಕೇಳುವ ಮೂಲಕ ಮಾತಿನ ಮಲ್ಲರ ಹರಟೆ ಮೈದಾನವನ್ನು ಸಜ್ಜುಗೊಳಿಸಿದರು.

ಆಗ ಶುರುವಾದ ವಾದ-ಪ್ರತಿವಾದ ರಂಗೇರುತ್ತಲೇ ಹೋಗುತ್ತಿತ್ತು. ಆಗ ಮಾತಿನ ಮಲ್ಲರ ಹರಟೆಗೆ ಕಡಿವಾಣ ಹಾಕಿ ಸರಿ ದಾರಿಗೆ ತರುವುದು ಹೀಗೆ ನಡೆದೇ ಇತ್ತು. ಪ್ರೀತಿಯಿಲ್ಲದೆ ಏನೂ ಸಾಧ್ಯವಿಲ್ಲ. ಲವ್ ಮ್ಯಾರೇಜ್‌ನಲ್ಲಿ ಇಬ್ಬರೂ ಫ್ರೀ ಬರ್ಡ್. ಇಬ್ಬರಿಗೂ ಸಮಾನ ಸ್ವಾತಂತ್ರ್ಯ. ಸಮಾನತೆ ಇರುತ್ತದೆ. ಹೀಗಾಗಿ ನಮ್ಮದೇ ಮೇಲು. ಇಬ್ಬರೂ ಪರಸ್ಪರ ಅರಿತು ಬಾಳಬಹುದು ಎಂದು ಒಂದು ತಂಡದವರು ವಾದ ಮಾಡಿದರೆ, ಪ್ರೀತಿ ಇಲ್ಲದ ಮೇಲೆ ಮೋಡ ಕಟ್ಟೀತು ಹೇಗೆ? ಮಳೆ ಬಂದೀತು ಹೇಗೆ? ಹೂ ಅರಳಿತು ಹೇಗೆ? ಆದರೆ ಹುಚ್ಚು ಪ್ರೀತಿ ಬೇಡ. ಹಿರಿಯರು ನೋಡಿ ನಿಶ್ಚಯಿಸಿದ ಮದುವೆಯಲ್ಲಿ ಸಂಸ್ಕಾರ. ಸಂಸ್ಕೃತಿ ಅಡಗಿರುತ್ತದೆ ಎಂದು ಮತ್ತೊಂದು ತಂಡ ವಾದ ಮಾಡಿತು. ಇವರಿಬ್ಬರ ವಾದ ಆಲಿಸಿದ ನ್ಯಾಯಾಧೀಶರ ಪಾತ್ರ ವಹಿಸಿದ್ದ ಹೇಮಂತ್ ಅವರು, ಲವ್ ಮ್ಯಾರೇಜ್ ಆದ್ರ ಇರಲಿ, ಅರೆಂಜ್ ಮ್ಯಾರೇಜ್ ಆದ್ರ ಇರಲಿ. ಆದ್ರ ನಮ್ಮ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬಾರದಿರಲಿ. ಘನತೆಯಿಂದ ಕೂಡಿದ ಬದುಕು ನಮ್ಮದಾಗಬೇಕು ಎಂದು ಕಾರ್ಯಕ್ರಮಕ್ಕೆ ಷರಾ ಎಳೆದರು.

ಈ ಹರಟೆ ಕಾರ್ಯಕ್ರಮವನ್ನು ಕೆ.ಎಸ್.ಆರ್.ಪಿ. ೬ನೇ ಪಡೆಯ ಕಮಾಂಡೆಂಟ್ ಬಸವರಾಜ ಜಿಳ್ಳೆ ಉದ್ಘಾಟಿಸಿ, ಜಂಜಡದ ಈ ಬದುಕಿಗೆ ನಗೆಯ ಹೊನಲು ಅಗತ್ಯ. ನಗುವಿನಿಂದ ಆರೋಗ್ಯ ವೃದ್ಧಿ. ಪರಸ್ಪರ ಪ್ರೀತಿ, ಶಾಂತಿ, ಸೌಹಾರ್ದದ ಬದುಕಿಗೆ ಹರಟೆ ಮುನ್ನುಡಿಯಾಗಲಿ ಎಂದು ಅಭಿಪ್ರಾಯಪಟ್ಟರು. ಸಾನ್ನಿಧ್ಯ ವಹಿಸಿದ್ದ ಶ್ರೀನಿವಾಸ ಸರಡಗಿ ಸಂಸ್ಥಾನ ಮಠದ ಡಾ. ರೇವಣಸಿದ್ಧ ಶಿವಾಚಾರ್ಯರು ಬಳಗದ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿದ್ದ ಜೆಸ್ಕಾಂ ಪ್ರಧಾನ ವ್ಯವಸ್ಥಾಪಕಿ ಪ್ರಮಿಳಾ ಎಂ.ಕೆ. ಮಾತನಾಡಿ, ಒತ್ತಡದ ಬದುಕಿಗೆ ನಗೆ ದಿವ್ಯ ಔಷಧಿ. ಒಂದು ಮುಗುಳ್ನಗೆಯ ಮೂಲಕ ಇಡೀ ಜಗತ್ತನ್ನೇ ಗೆಲ್ಲಬಹುದು. ನಗುವಿನಿಂದಲೇ ಜಗವು ಎಂದು ತಿಳಿಸಿದರು. ಸಹೃದಯಿ ಸ್ನೇಹ ಬಳಗದ ಸದಸ್ಯರಾದ ಅಣವೀರಯ್ಯ ಪ್ಯಾಟಿಮನಿ, ಸವಿತಾ ನಾಸಿ ಮುಖ್ಯ ಅತಿಥಿಗಳಾಗಿದ್ದರು.

ಪ್ರಾಸ್ತಾವಿಕ ಮಾತನಾಡಿದ ಬಳಗದ ಸದಸ್ಯ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ದೊಡ್ಡ ದೊಡ್ಡ ಬಂಗಲೆ ಕಟ್ಟುವುದಕಿಂತ ಮನಸ್ಸು ಕಟ್ಟುವುದು ಬಹಳ ಅಗತ್ಯವಿದೆ. ನಾಳಿನ ನೆಮ್ಮದಿಗೆ ನಗೆಯೇ ಮದ್ದಾಗಿದ್ದು, ಕಲುಷಿತ ವಾತಾವರಣವನ್ನು ತಿಳಿಗೊಳಿಸುವ ಶಕ್ತಿ ಹಾಸ್ಯಕ್ಕಿದೆ ಎಂದರು. ಬಳಗದ ಸದಸ್ಯರಾದ ನಾಗಲಿಂಗಯ್ಯ ಮಠಪತಿ ಅಚ್ಚು ಕಟ್ಟಾಗಿ ನಿರೂಪಿಸಿದರು. ಹಣಮಂತರಾಯ ಎಸ್. ಅಟ್ಟೂರ ಸ್ವಾಗತಿಸಿದರು. ಸುರೇಶ ಬಡಿಗೇರ ಕಲಾವಿದರ ಪರಿಚಯವನ್ನು ವಿಭಿನ್ನ ಶೈಲಿಯಲ್ಲಿ ಮಾಡಿಕೊಟ್ಟರು. ರವಿಕುಮಾರ ಶಹಾಪುರಕರ್ ವಂದಿಸಿದರು. ಬಳಗದ ಸದಸ್ಯರಾದ ಶಿವರಂಜನ್ ಸತ್ಯಂಪೇಟೆ, ಶರಣರಾಜ ಚಪ್ಪರಬಂದಿ, ಶಿವಾನಂದ ಮಠಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here