ಪ್ರತಿಭೆ ಮರೆದ 300 ವಿದ್ಯಾರ್ಥಿಗಳು: ನೇತಾಜಿ ಬೋಸ್ ಜಯಂತಿ ನಿಮಿತ್ತ ಸಾಂಸ್ಕೃತಿಕ ಸ್ಪರ್ಧೆ

0
74

ವಾಡಿ: ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷಚಂದ್ರ ಬೋಸ್ ಅವರ ೧೨೩ನೇ ಜನ್ಮದಿನಾಚರಣೆ ನಿಮಿತ್ತ ಎಐಡಿಎಸ್‌ಒ ಹಾಗೂ ಎಐಡಿವೈಒ ಸಂಘಟನೆಗಳ ವತಿಯಿಂದ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆಯಲ್ಲಿ ಶನಿವಾರ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಸದಸ್ಯ ಯೇಶಪ್ಪಾ ಕೇದಾರ, ಪ್ರತಿಯೊಬ್ಬ ವಿದ್ಯಾರ್ಥಿ ಪ್ರತಿಭೆಯನ್ನು ಹೊಂದಿರುತ್ತಾನೆ. ಪಠ್ಯಪುಸ್ತಕದ ಅಭ್ಯಾಸದ ಜತೆಗೆ ಕಲೆ, ಸಾಹಿತ್ಯದ ಜ್ಞಾನ ಹೇಳಿಕೊಡುವುದು ಪದ್ಧತಿಯಾಗಬೇಕು. ಮಕ್ಕಳನ್ನು ಕ್ರೀಯಾಶೀಲರನ್ನಾಗಿಯೂ ಮತ್ತು ಸೃಜನಶೀಲರನ್ನಾಗಿಯೂ ಮಾಡಲು ಸ್ಪರ್ಧಾ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಚಿತ್ರಕಲೆ ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತದೆ. ಬಣ-ಕುಂಚದೊಂದಿಗೆ ಮಕ್ಕಳು ಆಡಬೇಕು. ರೇಖಾಚಿತ್ರ ಕಲೆಯಿಂದ ಪ್ರತಿಭೆ ಅರಳುತ್ತದೆ. ಹಾಡು ಹೇಳುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಥೆ, ಕವನ, ಲೇಖನಗಳನ್ನು ಬರೆಯುವ ಸಾಮಾರ್ಥ್ಯ ಮಕ್ಕಳು ಶಾಲಾ ಹಂತದಲ್ಲಿಯೇ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಶಾಲೆಗಳಲ್ಲಿ ಅಂಕ ಗಳಿಕೆಯ ದೃಷ್ಠಿಕೋನದಿಂದ ಅಭ್ಯಾಸ ಮಾಡಿಸುವುದು ವಾಸ್ತವ. ಇದರೊಂದಿಗೆ ಮಕ್ಕಳಲ್ಲಿ ಚಿತ್ರಕಲೆ, ಗಾಯನ, ಸಂಗೀತ, ಸಾಹಿತ್ಯ, ನೃತ್ಯ, ಕ್ರೀಡೆ ಹೀಗೆ ವಿವಿಧ ಸಾಂಸ್ಕೃತಿಕ ಕಲಾ ಮಾಧ್ಯಮಗಳ ತರಬೇತಿಯೂ ನೀಡುವುದು ಅವಶ್ಯಕವಾಗಿದೆ. ಇದರಿಂದ ಮಕ್ಕಳ ಜ್ಞಾನ ವಿಕಸನವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಯುತ್ತದೆ. ಕಲಾ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳು ಮಾಡಬೇಕಿದೆ ಎಂದರು.

ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾರ್ವಧಕ ಸಂಸ್ಥೆಯ ಅಧ್ಯಕ್ಷ ಕಲ್ಯಾಣರಾವ ಶೆಳ್ಳಗಿ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಲು ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಕಾರ್ಯ ಮೆಚ್ಚುವಂತಹದ್ದು. ಎಲ್ಲಾ ಶಾಲೆಗಳ ಮಕ್ಕಳನ್ನು ಒಂದೆಡೆ ಸೇರಿಸಿ ಅವರ ಪ್ರತಿಭೆ ಅನಾವರಣಗೊಳಿಸುವ ಸಾಂಸ್ಕೃತಿಕ ಸ್ಪರ್ಧೆಗಳಿಂದ ಅಭ್ಯಾಸದ ಪೈಪೋಟಿ ಹೆಚ್ಚುತ್ತದೆ. ಮಕ್ಕಳ ಸಮಾಜಮುಖಿ ಹವ್ಯಾಸಗಳಿಗೆ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಶಿಕ್ಷಣ ಪ್ರೇಮಿ ಅಣ್ಣಾರಾವ ಪಸಾರೆ, ಎಐಡಿಎಸ್‌ಒ ಅಧ್ಯಕ್ಷ ಗೌತಮ ಪರತೂರಕರ, ಮುಖಂಡರಾದ ಶರಣುಕುಮಾರ ದೋಶೆಟ್ಟಿ, ಮಲ್ಲಿಕಾರ್ಜುನ ಗಂಧಿ, ಗುಂಡಣ್ಣ ಎಂ.ಕೆ, ಗೋವಿಂದ ಹೆಳವಾರ, ಸಾಯಿನಾಥ ಚಿಟೇಲಕರ್, ಶರಣು ಹೇರೂರ ಸೇರಿದಂತೆ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿವುಕುಮಾರ ಆಂದೋಲಾ ನಿರೂಪಿಸಿ, ವಂದಿಸಿದರು. ಸಂಗೀತ ಶಿಕ್ಷಕರಾದ ಮಲ್ಲಿಕಾರ್ಜುನ ಭಜಂತ್ರಿ ಹಾಗೂ ಮೌನೇಶ ಸೋನಾರ ಗಾಯನ ಸ್ಪರ್ಧೆ ನಡೆಸಿಕೊಟ್ಟರು. ಚಿತ್ರಕಲೆ, ಗಾಯನ, ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆ ನಡೆದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here