ಆರೋಗ್ಯಪೂರ್ಣ ದೇಹ, ಮನಸ್ಸಿನಿಂದ ಮಾತ್ರ ಮಹತ್ಸಾಧನೆ

0
59
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು
ಕೂಡಲ ಸಂಗಮದೇವ.
-ಬಸವಣ್ಣನವರು

ಈ ದೇಶದಲ್ಲಿ ಅನೇಕ ಸಾಧನೆಗಳಿವೆ. ಆದರೆ ಸಾಧನೆಗಳು ಮನುಷ್ಯನನ್ನು ಶೋಷಣೆ ಮಾಡಬಾರದು ಎಂಬುದು ಬಸವಣ್ಣನವರ ಹೋರಾಟ. ಸಾಧನೆ ಎಂಬುದು ಹೊರಗಿಲ್ಲ. ಅದು ನಮ್ಮೊಳಗೆ ಅಡಗಿದೆ. ಅದನ್ನು ಹೊರ ತೆಗೆಯುವ ಕೆಲಸ ಧರ್ಮ, ವಚನ, ಪ್ರವಚನದಿಂದ ಮಾತ್ರ ಸಾಧ್ಯ. ಈ ದೇಶದಲ್ಲಿ ಬಹಳ ಯೋಗಗಳಿವೆ. ದೇಶದ ಮೊಟ್ಟ ಮೊದಲ ಯೋಗಿ, ಆದಿ ಯೋಗಿ ಶಿವ. ಆತ ದ್ರಾವಿಡ ಸಂಸ್ಕೃತಿಯ ಮೂಲ ಪುರುಷ. ಯೋಗ ಪರಂಪರೆಯ ಮೂಲ ಕತೃ. ಯೋಗ ಶಿವನಿಂದ ಶುರುವಾಯಿತು. ಆರಂಭವಾಯಿತು.

Contact Your\'s Advertisement; 9902492681

ಶಿವ ಅಂದರೆ ತಾತ್ವಿಕ, ಮಂಗಲ, ಶೂನ್ಯ, ನಮ್ಮೊಳಗಿನ ಬೆಳಕು ಎಂದರ್ಥ. ಈ ದೇಶದಲ್ಲಿ ಇರುವಷ್ಟು ಸಾಧನೆಗಳು ಬೇರೆಲ್ಲೂ ನೋಡಲಾಗುವುದಿಲ್ಲ. ೧೫೦ ಬಗೆಯ ಧ್ಯಾನಗಳಿವೆ. ಶಾರೀರಿಕ ಯೋಗ, ಮಾನಸಿಕ ಯೋಗ ಮತ್ತು ಆತ್ಮದ ಯೋಗ ಎಂಬ ಯೋಗದ ಮೂರು ಬಗೆಗಳಿವೆ. ಯೋಗ ಅಂದರೆ ಬೇರೇನೂ ಅಲ್ಲ. ಶಿವನನ್ನು ಕೂಡುವುದು ಎಂದರ್ಥ. ಪ್ರತಿಯೊಬ್ಬರಿಗೂ ಸಾಧನೆ ಮಾಡುವ ಶಕ್ತಿಯಿದೆ. ಧರ್ಮ, ಯೋಗ, ಸಾಧನೆ ಪ್ರಾರಂಭವಾಗಿರುವುದೇ ಇಡೀ ಮನುಕುಲಕ್ಕೆ. ಪ್ರತಿಯೊಬ್ಬರೂ ಸಾಧನೆ ಮಾಡಬಹುದು.

ಬುದ್ಧ, ಬಸವ, ಮಹಾವೀರರೂ ಸಂಸಾರದಲ್ಲಿದ್ದುಕೊಂಡೇ ಸಾಧನೆ ಮಾಡಿದವರು. ೭೭೦ ಅಮರಗಣಂಗಳಲ್ಲಿ ಪ್ರಭುದೇವರು, ಚೆನ್ನಬಸವಣ್ಣ, ಅಕ್ಕ, ಸಿದ್ಧರಾಮ, ಬೋಂತಾದೇವಿ ಇಂತಹ ಬೆರಳೆಣಿಕಿಯ ಶರಣರು ಮಾತ್ರ ಸಂಸಾರಿಗಳಾಗಿರಲಿಲ್ಲ. ಉಳಿದವರೆಲ್ಲರೂ ಸಂಸಾರಿಗಳೇ ಆಗಿದ್ದರು. ಆದರೂ ಅಕ್ಕ ಮಹಾದೇವಿ “ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು” ಎಂದು ಹೇಳುತ್ತಾರೆ. ಸಂಸಾರ ಎಂದರೆ ಕೇವಲ ದೈಹಿಕ ಸುಖವಲ್ಲ. ಎರಡು ದೇಹಗಳ ಕೂಟ ಅಲ್ಲ. ಸಂಸಾರ ಎಂಬದು ಕೇವಲ ಕುಟುಂಬವೂ ಅಲ್ಲ. ಸಂಸಾರದಲ್ಲಿ ಸಿಲುಕಿ ಸಾಧನೆ ಬಿಟ್ಟಿರುವುದರಿಂದ ನಮ್ಮ ಆರೋಗ್ಯ ಕೆಟ್ಟಿದೆ. “ಕಷ್ಟ ನಿನಗಾದಾಗ ನಷ್ಟ ಭಯ ದೋರಿದಾಗ, ದೃಷ್ಟಿಯನು ತಿರುಗಿಸಿ ನೋಡಲ್ಲಿ, ಸೃಷ್ಟಿಸಿರುವುದು ಅಮೃತದ ರುಚಿ” ಎನ್ನುವಂತೆ ನಾವು ನೋಡುವ ದೃಷ್ಟಿ ಬದಲಾದರೆ ಸಾಧನೆ ನಮ್ಮ ಕೈ ವಶವಾಗಬಲ್ಲುದು.

ಸಂಸಾರ ಎನ್ನವುದು ಸಬ್‌ಜೆಕ್ಟಿವ್ ರಿಯಾಲಿಟಿ, ಪರಮಾತ್ಮ ಎನ್ನುವುದು ಆಬ್ಜೆಕ್ಟಿವ್ ರಿಯಾಲಿಟಿ. ಕುಟುಂಬದ ತಂದೆ-ತಾಯಿ, ಗಂಡ-ಹೆಂಡತಿ, ಮಕ್ಕಳು ಇವರೆಲ್ಲರೂ ಒಂದಿಲ್ಲ ಒಂದು ದಿನ ಹೋಗುತ್ತಾರೆ. ಅವರು ಹೋದರೆಂದು ಜೀವನದಲ್ಲಿ ಜಿಗುಪ್ಸೆ ಮಾಡಿಕೊಳ್ಳಬಾರದು. ಏಕೆಂದರೆ ಸಂಸಾರವೇ ಕೊನೆ ಅಲ್ಲ. ಅಪ್ಪ-ಅಮ್ಮ, ಮಕ್ಕಳು ಮಡದಿ ಎಂಬ ಸಬ್ಜೆಕ್ಟ್ ಹೋಗುತ್ತದೆ. ಆಟದ ಮೈದಾನದಲ್ಲಿ ಆಟಗಾರ ಬರುತ್ತಾನೆ, ಹೋಗುತ್ತಾನೆ. ಆದರೆ ಆಟದ ಮೈದಾನ ಹಾಗೆಯೇ ಉಳಿಯುತ್ತದೆ. ಒಬ್ಬರು ಖಾಲಿ ಮಾಡಿದಾಗ ಇನ್ನೊಬ್ಬರು ಬಂದು ಆ ಜಾಗವನ್ನು ತುಂಬುತ್ತಾರೆ. “ಸಂಸಾರವೆಂಬುದು ಗಾಳಿಯ ಸೊಡರು, ಸಿರಿವಂತಿಕೆಯೆಂಬುದು ಸಂತೆಯ ಸಿರಿ, ಇದನೆಚ್ಚಿ ಕೆಡಬೇಡ, ಮರೆಯದೇ ಪೂಜಿಸು ನಮ್ಮ ಕೂಡಲ ಸಂಗನ.” ಎಂದು ಬಸವಣ್ಣನವರು ಹೇಳಿದ್ದಾರೆ.

ದೈಹಿಕ ಯೋಗ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಮಾಸಿಕ ಯೋಗ ಮನಸ್ಸನ್ನು ಗಟ್ಟಿಗೊಳಿಸುತ್ತದೆ. ಆತ್ಮದ ಯೋಗ ನಾನು ಯಾರು? ಎಲ್ಲಿಂದ ಬಂದೆ ಎಂಬುದನ್ನು ತಿಳಿಸುತ್ತದೆ. ಜ್ವರ ಬಂದಾಗ ವೈದ್ಯರ ಬಳಿ ಹೋಗುವಂತೆ ಬದುಕಿನ ಕಷ್ಟ-ನಷ್ಟಗಳಿಗೆ ಗುರುವಾದಾತ ದಾರಿ ತೋರಬಲ್ಲತ ಗುರು. ಮದುವೆ ಮಾಡಿಸಬಹುದಲ್ಲದೆ ಪುರುಷಾರ್ಥ ಕೊಡಲು ಸಾಧ್ಯವಿಲ್ಲ ಎನ್ನುವಂತೆ ಗುರುವಾದಾತ ಬೋಧನೆ ಮಾಡಬಹುದಲ್ಲದೆ ಸಾಧಿಸುವುದು ನಾವಲ್ಲವೇ? ಹಣ, ಆಸ್ತಿ, ಅಂತಸ್ತು ನಮ್ಮನ್ನು ಕಾಪಾಡುವುದಿಲ್ಲ. ದೇಹಧರ್ಮ, ಯೋಗಧರ್ಮ, ಶಿವಯೋಗಧರ್ಮ ಪಾಲನೆಯಿಂದ ಬದುಕಿನಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. ಇದಕ್ಕೆ ಗುರುವಿನ ಮಾರ್ಗದರ್ಶನ, ಕರುಣೆ ಅಗತ್ಯ. ಶರಣರ ನುಡಿ ಗಡಣದಿಂದ ಜೀವನ ಪಾವನ.

ರಾಜಯೋಗ, ಭಕ್ತಿಯೋಗ, ಕುಂಡಲೀನಿ ಯೋಗಗಳೆಲ್ಲವೂ “ಮನಸ್ಸು” ಕೇಂದ್ರೀಕೃತವಾಗಿದ್ದರೆ ಬಸವಣ್ಣನವರ ಯೋಗ “ಕಣ್ಣು” ಕೇಂದ್ರೀತವಾಗಿದೆ. “ಒಂದು ನಿಮಿಷದ ಉದಾಸೀನ ಕೆಡಸಿತು ಕೂಡಲ ಸಂಗಮದೇವ, ಬಲ್ಲೆನೆಂಬುದ ಬಲಗೈ ನುಂಗಿತ್ತು ಮಾಯೆ” ಎಂದು ಹೇಳಿದ ಶರಣರು ಜಗತ್ತಿಗೆ ದೃಷ್ಟಿಯೋಗ ಎಂಬ ಹೊಸ ಪರಿಕಲ್ಪನೆಯನ್ನು ಕೊಟ್ಟರು. ಯೋಗ ಸಾಧನೆಯ ಜೊತೆಗೆ ನೆಮ್ಮದಿಯ ನಾಳೆಗೆ ಬಸವಣ್ಣನವರ “ಇವನಾರವ ಎನ್ನದೆ, ಇವ ನಮ್ಮವ” ಎಂಬ ವಚನ ಸೂತ್ರ ಸೂಕ್ತ ಪರಿಹಾರವಾಗಿದೆ. ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಸಂಸ್ಕೃತಿ-ಸಂಸ್ಕಾರ ಮಾರಾಟ ಮಾಡಲು ಬರುವುದಿಲ್ಲ.

ವಚನದಲ್ಲಿ ತುಂಬಿರುವ ನಾಮಾಮೃತವನ್ನು ಬಗೆದು ತೋರಿದ ಶರಣರು ಸಂಸಾದಲ್ಲಿದ್ದೂ ಇರದಂತಿರುವುದನ್ನು ಕಲಿಸಿದರು. ಅದರಿಂದ ಹೊರಗೆ ತಂದು ಕರಸ್ಥಲದಲ್ಲಿ ಲಿಂಗವನ್ನು ಕರುಣಿಸಿದರು. ಸರಸವೇ ಜೀವನ, ವಿರಸವೇ ಮರಣ ಎನ್ನುವಂತೆ ತ್ಯಾಗವೇ ಜೀವನ ಆಗಬೇಕು. ಮಸ್ತಕವೇ ಪುಸ್ತಕ ಆದಾಗ ಮನುಷ್ಯ ಸುಧಾರಣೆ ಆಗುತ್ತಾನೆ.

ಬರಹಕ್ಕೆ : ಶಿವರಂಜನ್ ಸತ್ಯಂಪೇಟೆ
(ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ, ಜೇವರ್ಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here