ಕಲಬುರಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮ ನಿಮ್ಮೆಲ್ಲರ ಸೌಭಾಗ್ಯ. ನಾವೆಲ್ಲರೂ ಒಂದಾಗಿ ಯಾವುದೇ ಬೇಧ ಭಾವವಿಲ್ಲದೇ ಕನ್ನಡಮ್ಮನ ಜಾತ್ರೆಯಲ್ಲಿ ಭಾಗವಹಿಸಿ ಕಲ್ಯಾಣ ನಾಡಿನ ಕೀರ್ತಿ ಹೆಚ್ಚಿಸೋಣ ಎಂದು ಶ್ರೀನಿವಾಸ ಸರಡಗಿಯ ಚಿನ್ನದ ಕಂತಿ ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ಪಿಠಾಧಿಪತಿಗಳಾದ ಶ್ರೀ ಷ.ಬ್ರ. ಡಾ. ರೇವಣಸಿದ್ಧ ಶಿವಾಚಾರ್ಯರು ನುಡಿದರು.
ಇಂದು ಶ್ರೀನಿವಾಸ ಸರಡಗಿಯಲ್ಲಿ ಸ್ನೇಹ ಸಂಗಮ ವಿವಿದೊದ್ದೇಶ ಸೇವಾ ಸಂಘದಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಸರಣಿ ಪ್ರಚಾರಾಂದೋಲನದಲ್ಲಿ ಭಾಗವಹಿಸಿ ಮಾತನಾಡುತ್ತಾ ಈ ಸಮ್ಮೇಳನದಲ್ಲಿ ಸರ್ವರೂ ನಮ್ಮವರು ಎಂಬ ಭಾವನೆಯಿಂದ ತನು-ಮನ-ಧನದಿಂದ ಸೇವೆ ಸಲ್ಲಿಸಿದರೆ ಎಲ್ಲಾ ಸಮ್ಮೇಳನಗಳಿಗೂ ಆದರ್ಶವಾಗುತ್ತದೆ ಎಂದು ನುಡಿದರು.
ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ಸಮ್ಮೇಳನದ ಪ್ರಚಾರ ಕೇವಲ ನಗರಕ್ಕೆ ಸಿಮಿತವಾಗದೇ ಹಳ್ಳಿ-ಹಳ್ಳಿಗೂ ತಲುಪಬೇಕೆಂಬುದು ಸಂಘದ ಆಶಯವಾಗಿದೆ. ಸಮ್ಮೇಳನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಹಲವಾರು ವಿಚಾರಗೋಷ್ಠಿಗಳನ್ನು ಆಲಿಸಿ ಕನ್ನಡವನ್ನು ಇನ್ನಷ್ಟು ಸಮೃದ್ದಗೊಳಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ವೀರೇಶ್ವರ ಶ್ರೀಮಠದ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯರು ಭಾಗವಹಿಸಿದ್ದರು. ಗ್ರಾಮದ ಯುವ ಮುಖಂಡರಾದ ರಾಜಕುಮಾರ ಪವಾರ, ವೀರಣ್ಣಗೌಡ ನಾಗಶೆಟ್ಟಿ, ನಾರಾಯಣ ಪವಾರ ಗ್ರಾ.ಪಂ. ಸದಸ್ಯರಾದ ಸಂಗಯ್ಯ ಹಿರೇಮಠ, ದೇವಿಂದ್ರಪ್ಪ ಮಿಸಿ, ರವಿಕುಮಾರ ಶಹಾಪೂರಕರ್, ಸಂತೋಷ ಆಡೆ, ಆನಂದ ಆಡೆ, ಲಿಂಗಣ್ಣಗೌಡ ಮಾಲಿಪಾಟೀಲ, ಶರಣಗೌಡ ಬಿರಾದಾರ, ಅರುಣಕುಮಾರ ಗೋನಾಯಕ, ಕಲ್ಯಾಣಿ ನಾಟೀಕಾರ, ಉಮೇಶ ಗಿರೆಪ್ಪಗೋಳ, ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಎಸ್.ಎಸ್. ಪಾಟೀಲ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಬಿ.ಜಿ. ವಣಕ್ಯಾಳ, ಶಿವಯ್ಯ ಸ್ವಾಮಿ ಹಿರೇಮಠ ಶಾಲಾ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಸಂಘದ ಪದಾಧಿಕಾರಿಗಳು, ಸರಡಗಿ ಗ್ರಾಮಸ್ಥರು ಪ್ರಚಾರಾಂದೋಲನದಲ್ಲಿ ಭಾಗವಹಿಸಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಕನ್ನಡ ಧ್ವಜಗಳನ್ನು ಹಿಡಿದು ನುಡಿಜಾತ್ರೆಗೆ ಬನ್ನಿ ಎಂದು ಸಾರ್ವಜನಿಕರನ್ನು ಆಹ್ವಾನಿಸುವ ಮೂಲಕ ರ‍್ಯಾಲಿಯನ್ನು ಯಶಸ್ವಿಗೊಳಿಸಿದರು.