ಕಲಬುರಗಿ: ವಿಮಾನ ನಿಲ್ದಾಣವು ಮುಂಬರುವ ದಿನಗಳಲ್ಲಿ ಅಂತರಾಷ್ಟ್ರೀಯ ವಿಮಾನ ಉಡ್ಡಯನಕ್ಕೆ ಸಜ್ಜಾಗುತ್ತಿದೆ ಎಂದು ಮೂಲ ಸೌಕರ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ತಿಳಿಸಿದರು.
ಅವರು ಜ.೨೯ರ ಬುಧವಾರ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿದ ನಂತರ ಮಾತನಾಡಿದರು.
ಕಲಬುರಗಿಯಿಂದ ಮಧ್ಯ ಏಷ್ಯಾಗೆ ಸಾಕಷ್ಟು ಪ್ರಯಾಣಿಕರು ಜಿಲ್ಲೆಯಿಂದ ಸಂಚರಿಸುತ್ತಾರೆ, ಅವರು ಹೈದರಾಬಾದ್ ಅಥವಾ ಮುಂಬೈ ಮೂಲಕ ತೆರಳುತ್ತಿದ್ದು, ಅವರ ಅನುಕೂಲಕ್ಕಾಗಿ ನೇರವಾಗಿ ಕಲಬುರಗಿಯಿಂದಲೇ ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಪ್ರಯಾಣ ಆರಂಭಿಸಲಾಗುವುದು, ಅದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳಿದ್ದು, ಮುಂದಿನ ವರ್ಷದಲ್ಲಿ ಅಂತರಾಷ್ಟ್ರೀಯ ವಿಮಾನ ಹಾರಾಡಬಹುದು ಎಂಬ ಸೂಚನೆ ನೀಡಿದರು.
ಕಲಬುರಗಿ ವಿಮಾನ ನಿಲ್ದಾಣ ದೊಡ್ಡ ವಿಮಾನ ನಿಲ್ದಾಣವಾಗಿದೆ, ಅಂತರಾಷ್ಟ್ರೀಯ ವಿಮಾನ ಯಾನಕ್ಕೆ ಅನುಕೂಲವಾಗುವಂತೆ ಪಾಸ್ ಪೋರ್ಟ್ ತಪಾಸಣಾ ಕೇಂದ್ರ, ಕಸ್ಟಮ್ ಇಲಾಖೆ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಲಬುರಗಿ ವಿಮಾನ ನಿಲ್ದಾಣವು ಸಾರ್ವಜನಿಕರ ಕನಸಾಗಿದ್ದು, ಉಡಾನ್ ಯೋಜನೆಯಲ್ಲಿ ಅದು ಸಾಕಾರಗೊಂಡಿದೆ. ಇದು ಸಾರ್ವಜನಿಕರಿಗೆ ಹಾಗೂ ಉದ್ಯಮಿಗಳಿಗೆ ಅತ್ಯುಪಯುಕ್ತವಾಗಿದ್ದು, ಮುಂದಿನ ಮಾರ್ಚ್ ಮಾಹೆಯಿಂದ ದೆಹಲಿ ಹಾಗೂ ತಿರುಪತಿಗೆ ವಿಮಾನ ಯಾನವನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಈಗಾಗಲೇ ಬೀದರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಕೆಲಸ ನಡೆಯುತ್ತಿದೆ. ಕಲಬುರಗಿ ವಿಮಾನ ನಿಲ್ದಾಣದ ಸ್ಥಳದಲ್ಲಿ ಹಾಗೂ ಸುತ್ತ-ಮುತ್ತಲಿನ ಪ್ರದೇಶವನ್ನು ನೋಡಿಕೊಂಡು ಕೃಷಿಗೆ ಸಂಬಂಧಿಸಿದ ಸಂಸ್ಥೆಗಳನ್ನು, ಐ.ಟಿ ಸೇವೆಗಳನ್ನು ಹಾಗೂ ಇನ್ನಿತರ ಮಾರುಕಟ್ಟೆ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಈ ಕುರಿತು ಗುಲಬರ್ಗಾ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನಾ ಮಂಡಳಿಗೆ ಈ ಕುರಿತು ಮನವಿ ನೀಡಲಾಗಿದೆ ಎಂದರು.
ಕಲಬುರಗಿ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸಹಕಾರ ನೀಡುತ್ತಿದ್ದು, ಈಗಾಗಲೇ ಅನೇಕ ಖಾಸಗಿ ಸಂಸ್ಥೆಗಳು ಬಂಡವಾಳ ಹೂಡಲು ಮುಂದೆ ಬಂದಿದ್ದು, ನಾವು ಸೂಕ್ಷ್ಮವಾಗಿ ಪರಿಶೀಲಿಸಿ ಅವಕಾಶ ನೀಡಲಾಗುತ್ತದೆ. ವಿಮಾನ ನಿಲ್ದಾಣ ಸಂಪೂರ್ಣವಾಗಿ ಅಭಿವೃದ್ಧಿಯಾಗಲು ಕಾಲಾವಕಾಶ ಬೇಕು, ವಿದೇಶದೊಂದಿಗೆ ಪ್ರಯಾಣ ಆರಂಭಿಸುವುದರಿಂದ ಇಲ್ಲಿನ ನಾಗರಿಕರಿಗೆ ಹಾಗೂ ಉದ್ಯಮಿಗಳಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತದೆ. ಕಲಬುರಗಿ ವಿಮಾನ ನಿಲ್ದಾಣವನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿಯೇ ಮಾಡಲಾಗುತ್ತದೆ. ಶೇಕಡ ೮೦ರಷ್ಟು ಜನರ ಬೇಡಿಕೆ ಇದಾಗಿದೆ ಎಂದು ಹೇಳಿದರು.