ಕಲಬುರಗಿ: ಎಲ್ಲ ಸಮುದಾಯ ಜನರಿಗೆ ಮಾಧ್ಯಮ ಲಭ್ಯವಾಗುವದಿಲ್ಲ ಹೀಗಾಗಿ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು ಜನರ ಧ್ವನಿಯಾಗಿ ಅವರ ಶ್ರೇಯೋಭಿವೃದ್ಧಿ ದೃಷ್ಠಿಕೋನದಿಂದ ಅಂತರವಾಣಿ ಸಮುದಾಯ ಬಾನೂಲಿ ಕೇಂದ್ರವನ್ನು ಆರಂಭಿಸಿದ್ದಾರೆ ಎಂದು ಶರಣಬಸವ ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಅನೀಲಕುಮಾರ ಬಿಡವೆ ಎಂದು ಹೇಳಿದರು.
ನಗರದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಎರಡು ದಿನಗಳ ಕಾಲ ಜರುಗಿದ ವಿಶ್ವ ಸಾಹಿತ್ಯ ಸಮ್ಮೆಳನದ ಎರಡನೇ ದಿನವಾದ ಶನಿವಾರದಂದು ಅಂತರವಾಣಿ ಸಮುದಾಯ ಬಾನೂಲಿ ಕೇಂದ್ರ ದಶಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾನೂಲಿ ಕೇಂದ್ರ ಆರ್ಥಿಕ ಲಾಭದ ಪಡೆದಿಲ್ಲವೆಂದರೂ, ಸಾರ್ವಜನಿಕರಿಗೆ ಎಲ್ಲ ಕ್ಷೇತ್ರದಲ್ಲಿಯೂ ಸಹಕಾರಿ ಕಾರ್ಯನಿರ್ವಹಿಸುತ್ತದೆ. ಸುಲಭವಾಗಿ ಮಾಧ್ಯಮವನ್ನು ಪಡೆದುಕೊಳ್ಳಲು ಯಾರಿಗೆ ಸಾಧ್ಯವಾಗಿಲ್ಲೋ, ಅವರಿಗಾಗಿ ಈ ಬಾನೂಲಿ ಕೇಂದ್ರ ಆರಂಭಿಸಲಾಗಿದೆ. ನನಗೂ ಈ ಬಾನೂಲಿ ಕೇಂದ್ರಕ್ಕೂ ದಶಮಾನದಿಂದ ನಂಟಿದೆ ಎಂದರು.
ಮಂಗಳೂರಿನ ಸಾರಂಗ ಸಮುದಾಯ ರೇಡಿಯೊ ಸಂತ ಅಲೋಷಿಯಸ್‌ನ ನಿರ್ದೇಶಕರಾದ ಡಾ. ಮೇಲ್ವಿನ್ ಪಿಂಟೊ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಂತರವಾಣಿ ಸಮುದಾಯ ರೇಡಿಯೊ ಕೇಂದ್ರದ ನಿರ್ದೇಶಕರಾದ ಡಾ. ಶಿವರಾಜಶಾಸ್ತ್ರಿ ಹೇರೂರ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರದ ದಶಮಾನೋತ್ಸವದ ಸ್ಮರಣ ಸಂಚಿಕೆ ಹಾಗೂ ಅಂತರವಾಣಿ ಮಹತ್ವದ ಕಾರ್ಯಕ್ರಮಗಳ ಕುರಿತು ಸಿಡಿ ಬಿಡುಗಡೆಗೊಳಿಸಲಾಯಿತು.
ವಿವಿ ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಪ್ರೊ. ಶಾಂತಲಾ ನಿಷ್ಠಿ, ಡಾ. ನೀಲಾಂಬಿಕಾ ಶೇರಿಕಾರ, ಶರಣಬಸವಪ್ಪ ಹರವಾಳ, ಡಾ. ಗಣೇಶ ದತ್ತಾರೆ ಇತರರು ಉಪಸ್ಥಿತರಿದ್ದರು. ಪ್ರೊ. ಕೃಪಸಾಗರ ಗೊಬ್ಬುರ ಸ್ವಾಗತಿಸಿದರು. ಪ್ರೊ. ಅನೀತಾ ಗೊಬ್ಬುರ ನಿರೂಪಿಸಿದರು.
ಈ ಕಾರ್ಯಕ್ರಮಕ್ಕಿಂತ ಮೊದಲು ಇಂಗ್ಲೀಷ ಗೋಷ್ಠಿ ನಡೆಸಲಾಯಿತು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪಾಧ್ಯಾಪಕರಾದ ಡಾ. ಪ್ರಕಾಶ ಬಾಳೆಕಾಯಿ ಅವರು ’ಭಾರತದ ಇಂಗ್ಲೀಷ ನಾಟಕಗಳು ಹಾಗೂ ಸ್ತ್ರೀವಾದ’ ವಿಷಯ ಕುರಿತು ವಿಚಾರ ಮಂಡಿಸಿದರು. ದಾಂಡೇಲಿ ಬಿ.ಎನ್. ಪದವಿ ಮಹಾವಿದ್ಯಾಲಯದ ಪ್ರೊ. ಡಾ. ಆರ್.ಜಿ.ಹೆಗಡೆ ’ಇಂಗ್ಲೀಷ ಕಾದಂಬರಿಗಳಲ್ಲಿ ಸಂಸ್ಕೃತಿಯ ಪ್ರತಿಫಲನ’ ವಿಷಯ ಕುರಿತು ಮಾತನಾಡಿದರು. ಮುಖ್ಯ ಅತಿಥಿಯಾಗಿ ಶರಣಬಸವ ವಿಶ್ವ ವಿದ್ಯಾಲಯದ ಡೀನ್ ಡಾ. ಬಸವರಾಜ ಮಠಪತಿ ಹಾಗೂ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್.ಜಿ.ಡೊಳ್ಳೆಗೌಡರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.