ವಾಡಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ಹಿಂದೆ ಧರ್ಮದ ಆದಾರದಡಿ ದೇಶ ಇಬ್ಬಾಗ ಮಾಡುವ ದುರ್ಬುದ್ಧಿ ಅಡಗಿದೆ. ಈ ಕಾಯ್ದೆಯನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ರಾಜಕೀಯ ದುರ್ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಿವೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಪಕ್ಷದ ರಾಜ್ಯ ಸಮಿತಿ ಸದಸ್ಯ ಡಾ.ಚಂದ್ರಗಿರೀಶ ಆರೋಪಿಸಿದರು.
ನೇತಾಜಿ ಸುಭಾಷಚಂದ್ರ ಬೋಸ್ ಅವರ ೧೨೩ನೇ ಜನ್ಮ ದಿನಾಚರಣೆ ನಿಮಿತ್ತ ಎಐಡಿಎಸ್‌ಒ ಹಾಗೂ ಎಐಡಿವೈಒ ಸಂಘಟನೆಗಳು ವಾಡಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ಅಸಂಖ್ಯಾತ ಬಡ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಅಪೌಷ್ಟಿಕತೆಯಿಂದ ಮಕ್ಕಳು ಮರಣ ಹೊಂದುತ್ತಿದ್ದಾರೆ. ಯುವಜನರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಶಿಕ್ಷಣ ವ್ಯಾಪಾರೀಕರಣಗೊಂಡಿದೆ. ಬೆಲೆ ಏರಿಕೆ ಗಗನಕ್ಕೆ ತಲುಪಿದೆ. ಇವುಗಳ ಕುರಿತು ಗಂಭೀರ ಚರ್ಚೆ ಮಾಡಬೇಕಾದ ಸಂದರ್ಭದಲ್ಲಿ, ಜನರ ಗಮನ ಬೇರೆಡೆ ಸೆಳೆಯಲು ಪೌರತ್ವ ನೀತಿಗೆ ತಿದ್ದುಪಡಿ ತರುವ ಮೂಲಕ ದೇಶದ ಜನರನ್ನು ಬೀದಿಗೆ ತಂದು ನಿಲ್ಲಿಸಲಾಗಿದೆ ಎಂದು ದೂರಿದರು.
ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಕಾಯ್ದೆಗಳು ಜನರಲ್ಲಿ ಆಂತರಿಕ ಭಯೋತ್ಪಾದನೆ ಹುಟ್ಟುಹಾಕಿವೆ. ಜನ ಚಳುವಳಿಗಳು ಭುಗಿಲೆದ್ದರೂ ಪ್ರಧಾನಿ ಮೋದಿ ಮತ್ತು ಗೃಹಮಂತ್ರಿ ಅಮಿತ್‌ಶಾ ಕಾಯ್ದೆ ಜಾರಿಗೆ ಬದ್ಧ ಎಂದು ಹಟಕ್ಕೆ ಬಿದ್ದಿದ್ದಾರೆ. ಇಂತಹ ನರರಾಕ್ಷಸ ನೀತಿ ಜಾರಿಗೆ ತರುವ ಪಕ್ಷದಿಂದ ನಾವು ದೇಶಭಕ್ತಿಯ ಪಾಠ ಕೇಳಬೇಕಾಗಿದೆ. ಕೇಂದ್ರ ಸರಕಾರದ ನೀತಿಗಳು ಆನೆ ಹಲ್ಲುಗಳಿದ್ದಂತೆ. ತೋರಿಸಲು ಒಂದದಾರೆ, ಹರಿದು ತಿನ್ನಲು ಒಳಗೆ ಮತ್ತೊಂದು ಹಲ್ಲಿರುತ್ತದೆ. ಹಿಂದೂ ರಾಷ್ಟ್ರ ಪರಿಕಲ್ಪನೆ ಪ್ರಭುತ್ವಕ್ಕಿದ್ದು, ಅಂದು ಸ್ವಾತಂತ್ರ್ಯ ಹೋರಾಟದ ಬೆನ್ನಿಗೆ ಚೂರಿ ಹಾಕಿ ನೇತಾಜಿಗೆ ದ್ರೋಹ ಬಗೆದ ಸಾರ್ವಕರ್ ಕುಲಜನರು ಇಂದು ಅಧಿಕಾರದಲ್ಲಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ ಡಾ.ಚಂದ್ರಗಿರೀಶ, ಧರ್ಮದ ಆದಾರದಡಿ ಪೌರತ್ವ ನೀಡಬಾರದು ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಮುಸ್ಲೀಮರನ್ನು ಗುರಿಯಾಗಿಸಿಕೊಂಡು ಸಿಎಎ ನೀತಿ ಜಾರಿಗೆ ತರುವ ಮೂಲಕ ದೇಶ ಒಡೆಯಲು ಮುಂದಾದ ಬಿಜೆಪಿಯವರು ಹೇಗೆ ದೇಶಭಕ್ತರಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಗತಿಪರ ಚಿಂತಕ ಕಾಶೀನಾಥ ಹಿಂದಿನಕೇರಿ ಮಾತನಾಡಿ, ಸಾಮ್ರಾಜ್ಯಶಾಹಿಗಳ ಹಿಡಿತದಲ್ಲಿದ್ದ ದೇಶವನ್ನು ಬಿಡಿಸಲು ನೇತಾಜಿ ಹೋರಾಟ ಕಟ್ಟಿದರು. ಭಾರತ ಇಂದು ಜಾಗತಿಕ ಹಸಿವಿನ ಸೂಚಂಕದಲ್ಲಿ ೯೭ನೇ ಸ್ಥಾನದಲ್ಲಿದೆ.ಸರಕಾರಿ ಸ್ವಾಮ್ಯದ ಕಾರ್ಖಾನೆಗಳು ಖಾಸಗೀಕರಣಗೊಳ್ಳುತ್ತಿವೆ. ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಶೋಷಣೆ ರಹಿತ ಸಮಾಜದ ಕನಸು ಕಂಡು ದೇಶಕ್ಕಾಗಿ ಹುತಾತ್ಮರಾದ ಭಗತ್‌ಸಿಂಗ್, ಚಂದ್ರಶೇಖರ ಆಜಾದ್, ನೇತಾಜಿ ಅವರಂತಹ ಕ್ರಾಂತಿಕಾರಿಗಳನ್ನು ಭಾರತ ಸರಕಾರಗಳು ಗೌರವದಿಂದ ಕಾಣುತ್ತಿಲ್ಲ. ವಿದ್ಯಾರ್ಥಿ ಯುವಜನರು ಅನ್ಯಾಯದ ವಿರುದ್ಧ ಮಾತನಾಡದಿದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದರು.
ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷೆ ಸ್ನೇಹಾ ಕಟ್ಟಿಮನಿ ಮಾತನಾಡಿದರು. ಎಐಡಿಎಸ್‌ಒ ಅಧ್ಯಕ್ಷ ಗೌತಮ ಪರತೂರಕರ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶ್ರೀಶರಣ ಹೊಸಮನಿ, ಯೇಶಪ್ಪ ಜಿ.ಕೆ, ಶರಣು ಹೇರೂರ, ಶಿವುಕುಮಾರ ಆಂದೋಲಾ, ವೆಂಕಟೇಶ ದೇವದುರ್ಗಾ ಪಾಲ್ಗೊಂಡಿದ್ದರು. ಎಐಡಿವೈಒ ಕಾರ್ಯದರ್ಶಿ ಮಲ್ಲಿನಾಥ ಹುಂಡೇಕಲ್ ನಿರೂಪಿಸಿ, ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರ ವಿತರಿಸಲಾಯಿತು. ಹೋರಾಟದ ಸೂಕ್ತಿ ಪ್ರದರ್ಶನ ಹಾಗೂ ಕ್ರಾಂತಿಕಾರಿ ಸಾಹಿತ್ಯ ಮಾರಾಟ ನಡೆಯಿತು.