ಕಲಬುರಗಿ: ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ನಡೆದಿರುವ ಘಟನೆಯಲ್ಲಿ ಶಾಲಾ ಬಾಲಕಿಯ ತಾಯಿ ಮತ್ತು ಮುಖ್ಯ ಶಿಕ್ಷಕಿಯನ್ನು ಬಂಧಿಸಿರುವುದನ್ನು ಎಐಡಿಎಸ್‌ಓ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಹಣಮಂತ ಎಸ್. ಹೆಚ್ ತಿಳಿಸಿದ್ದಾರೆ.
ಜನವರಿ 21 ರಂದು ಬೀದರ್‌ನ ಶಾಹೀನ್ ವಿದ್ಯಾ ಸಂಸ್ಥೆಯ ಶಾಲಾ ವಾರ್ಷಿಕೋತ್ಸವದ ನಾಟಕದಲ್ಲಿ ಎನ್.ಆರ್.ಸಿ ಮತ್ತು ಸಿ.ಎ.ಎ ಕುರಿತು ಆಕ್ಷೇಪಾರ್ಹಸಾಲೊಂದನ್ನು ೫ನೇ ತರಗತಿಯ ಶಾಲಾ ಬಾಲಕಿ ಹೇಳಿದ್ದಾಳೆ ಎಂದು ಅರೋಪಿಸಿ ನೀಡಲಾದ ದೂರಿನ ಅನ್ವಯ, ಆ ಶಾಲಾ ಬಾಲಕಿಯ ತಾಯಿ ಮತ್ತು ಶಾಲೆಯ ಮುಖ್ಯ ಶಿಕ್ಷಕಿಯನ್ನು ದೇಶ ದ್ರೋಹದ ಆರೋಪದಡಿ ಬಂಧಿಸಿಲಾಗಿರುವ ಸರ್ಕಾರದ ಕ್ರಮ ನಿಂದನಿಯ ಮತ್ತು ಖಂಡನೀಯವಾಗಿದ್ದು, ಬಾಲಕಿಯು ತಂದೆಯನ್ನು ಕಳೆದುಕೊಂಡು, ತನ್ನ ಅನಕ್ಷರಸ್ಥ ತಾಯಿಯೊಂದಿಗೆ ವಾಸವಿದ್ದು, ಪೊಲೀಸರು ತಾಯಿಯನ್ನು ಬಂಧಿಸಿದ ನಂತರ ಆಕೆ ಮಾನಸಿಕವಾಗಿ ಕುಗ್ಗಿದ್ದಾಳೆ, ತಾಯಿಯೂ ಸಹ ಅನಾರೋಗ್ಯಕ್ಕೆ ಈಡಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸರು ವಿಚಾರಣೆಗಾಗಿ 5 ಬಾರಿ ಶಾಲೆಗೆ ಭೇಟಿ ನೀಡಿ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶಾಲಾ ಸಮವಸ್ತ್ರದಲ್ಲಿಯೇ ವಿಚಾರಣೆ ನಡೆಸಿದ್ದು, ಇಲಾಖೆ ಮಕ್ಕಳ ವಿಚಾರಣೆ ನಿಲ್ಲಿಸಬೇಕೆಂದು ಸಮಿತಿಯ ಜಿಲ್ಲಾ ಕಾರ್ಯದರ್ಶಿ ಈರಣ್ಣಾ ಇಸಬಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕಿ, ಬಾಲಕಿಯ ತಾಯಿ ಕೂಡಲೇ ಬಿಡುಗಡೆಗೊಳಿಸಬೇಕೆಂದು ಸಂಘಟನೆಯ ಕಲಬುರಗಿ ಜಿಲ್ಲಾ ಸಮಿತಿಯು ಒತ್ತಾಯಿಸಿದೆ.