- ಡಾ.ಅಶೋಕ ದೊಡಮನಿ ಹಂಗರಗಾ(ಕೆ)
ಕಲಬುರಗಿ: ಯಡ್ರಾಮಿ ತಾಲೂಕಿನ ದುಮ್ಮದ್ರಿ ಗ್ರಾಮದ ಹಳ್ಳದಿಂದ ದಿನಾಲು ಪೊಲೀಸರ ಸಮ್ಮುಖದಲ್ಲೇ ಮರಳು ಸಾಗಾಟ ನಡೆಯುತ್ತಿದೆ.
ತಮಗೆ ಗೊತ್ತಲ್ಲದೆ ಎಲ್ಲವೂ ನಡೆಯುತ್ತಿದೆ ಎನ್ನುವ ಮಾತುಗಳು ಪೊಲೀಸರದ್ದು. ಪೊಲೀಸರಿಗೆ ಎಲ್ಲವೂ ಗೊತ್ತಿದ್ದೆ ನಮ್ಮ ಹೊಲದಲ್ಲಿ ಬೆಳೆದ ಬೆಳೆಗಳ ಜೊತೆ ಆಟವಾಡುತ್ತಿದ್ದಾರೆ ಅನ್ನುವ ಆರೋಪ ರೈತರದ್ದು. ಇದೆಲ್ಲದಕ್ಕೆ ಉತ್ತರ ಕೊಡಬೇಕಾದ ಪೊಲೀಸರದ್ದು ಮಾತ್ರ ಮರಳು ಅಂದ್ರೆ ಏನು ಎನ್ನುವ ಮುಗ್ಧಭಾವದ್ದು. ಸ್ಥಳೀಯ ಪಿಎಸ್‌ಐ ಉತ್ತರ ನೀಡುತ್ತಿರುವುದು ನೋಡಿದರೆ ಪೊಲೀಸರು ಅಕ್ರಮ ಮರಳು ದಂಧೆಯಲ್ಲಿ ಶಾಮೀಲಾಗಿದ್ದಾರೆ ಎನ್ನುವ ಸಂಶಯ ಕಾಡದೆ ಇರದು. ವರದಿ ಮಾಡುವವರಿಗೆ ಹೆದರಿಸುವ ಸ್ಥಳೀಯ ಪಿಎಸ್‌ಐ ಫುಲ್ಲಯ್ಯ ರಾಠೋಡ ಅವರಿಗೆ ಇಂತಹ ಗಂಭೀರ ವಿಷಯ ಹೇಗೆ ಗಮನಕ್ಕೆ ಬರುವುದಿಲ್ಲ ಎಂಬುದು ದೇವರಿಗೆ ಗೊತ್ತು.
ದುಮ್ಮದ್ರಿ ಹಳ್ಳದಿಂದ ನಿತ್ಯ ನೂರಾರು ಟ್ರಿಪ್ ಮರಳು ಮಳ್ಳಿ ಮಾರ್ಗವಾಗಿ ಸಿಂದಗಿ ಸೇರಿದಂತೆ ಹಲವು ಕಡೆ ಸಾಗಿಸಲಾಗುತ್ತಿದೆ. ಒಂದು ಟ್ರಿಪ್ ಮರಳಿಗೆ ೪-೫ ಸಾವಿರ ರೂ. ವರೆಗೆ ಬೇಡಿಕೆ ಇದೆ. ರಾತ್ರಿ ಹಗಲುಗಳೆನ್ನದೆ ಸಾಗಿಸಲಾಗುತ್ತಿದೆ. ಪ್ರತಿ ಟ್ರ್ಯಾಕ್ಟರ್‌ಗೆ ತಿಂಗಳಿಗೆ ೨೦ರಿಂದ ೨೫ ಸಾವಿರ ಮಾಮೂಲಿ ತೆಗೆದುಕೊಳ್ಳಲಾಗುತ್ತದೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ರೈತರ ಹೊಲದಲ್ಲಿ ಬೆಳೆ ಇದ್ದರೂ ಸಹ ಟ್ರ್ಯಾಕ್ಟರ್‌ಗಳು ಹಾಗೆ ಹೋಗುತ್ತವೆ. ಸುರಪುರ ತಾಲೂಕಿನಿಂದ ಬರುವ ಕೆಂಪು ಮರಳಿಗೆ ಬಿಜಾಪುರ ಜಿಲ್ಲೆಯ ಸಿಂದಗಿ ಮತ್ತು ಯಡ್ರಾಮಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಭಾರಿ ಬೇಡಿಕೆ ಇದೆ. ದುಮ್ಮದ್ರಿ ಗ್ರಾಮವೊಂದರಲ್ಲೇ ೫೦ ಟ್ರ್ಯಾಕ್ಟರ್‌ಗಳಿವೆ ಅಂದರೆ ಅಚ್ಚರಿಯಾಗುತ್ತದೆ.
ಮರಳು ಅಕ್ರಮ ಸಾಗಾಟವಾಗುವ ಗ್ರಾಮಗಳಿಗೆ ಈಗಾಗಲೇ ಪೊಲೀಸರಿಗೆ ತಾಕೀತು ಮಾಡಲಾಗಿದೆ. ಒಂದೇ ಒಂದು ಟ್ರಿಪ್ ಮರಳು ಆಯಾ ಗ್ರಾಮದಿಂದ ಸಾಗಿಸಿದರೆ ಸ್ಥಳೀಯ ಬೀಟ್ ಪೊಲೀಸರನ್ನು ಅಮಾನತ್ತು ಮಾಡುತ್ತೇನೆ-ಫುಲ್ಲಯ್ಯ ರಾಠೋಡ, ಪಿಎಸ್‌ಐ ಯಡ್ರಾಮಿ.
ಮಾಮೂಲಿ ಕೊಡದ ಟ್ರ್ಯಾಕ್ಟರ್‌ಗಳನ್ನು ಪೊಲೀಸರು ತಡೆದು ನಿಲ್ಲಿಸುತ್ತಾರೆ. ಇಲ್ಲವೆ ಅಂತಹ ಟ್ರ್ಯಾಕ್ಟರ್‌ಗಳ ಮೇಲೆ ಕೇಸ್ ದಾಖಲಿಸುತ್ತಾರೆ ಅಂತಾರೆ ಟ್ರ್ಯಾಕ್ಟರ್ ಮಾಲೀಕರು. ಹಳ್ಳದ ದಡದಲ್ಲಿರುವ ಹೊಲಗಳನ್ನು ಕೆಲವು ಟ್ರ್ಯಾಕ್ಟರ್ ಮಾಲೀಕರು ಮರಳು ತೆಗೆದುಕೊಳ್ಳಲು ಒಂದು ವರ್ಷದವರೆಗೆ ಖರೀದಿ ಮಾಡುತ್ತಾರೆ. ದುಮ್ಮದ್ರಿ ಬೀಟ್ ಇರುವ ಪೊಲೀಸರು ಈ ಟ್ರ್ಯಾಕ್ಟರ್‌ಗಳಿಂದ ತಿಂಗಳ ಮಾಮೂಲಿ ವಸೂಲಿ ಮಾಡಿ ಪಿಎಸ್‌ಐಗೆ ಕೊಡುತ್ತಿರುವುದು ಮಾತ್ರ ಬಹಿರಂಗ ಸತ್ಯ. ಮರಳು ಲೂಟಿಕೋರರಿಗೆ ಸಿಂಹ ಸ್ವಪ್ನವಾಗಬೇಕಾಗಿದ್ದ ಪೊಲೀಸರೇ ಅಕ್ರಮಕ್ಕೆ ಅವಕಾಶ ಮಾಡಿಕೊಡುತ್ತಿರುವುದು ದುರಂತವಾಗಿದೆ. ಇಲ್ಲಿ ರಕ್ಷಕರೇ ಭಕ್ಷಕರಾಗುತ್ತಿರುವುದು ದುರಂತ ಸತ್ಯ. ಮರಳು ಅಕ್ರಮದ ಮಾಮೂಲಿ ಇರುವುದರಿಂದಲೇ ಯಡ್ರಾಮಿ ಠಾಣೆಗೆ ವರ್ಗವಾಗಿ ಬರಲು ಪೊಲೀಸರು ಹಾತೊರೆಯುತ್ತಾರೆ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಖೈನೂರ, ತೆಲಗಬಾಳ, ಕಡಕೋಳ ಮತ್ತು ಜಂಬೇರಾಳ ಹಳ್ಳದಿಂದ ತರುವ ಮರಳು ಪೊಲೀಸ್ ಠಾಣೆಯ ಎದುರಿನಿಂದಲೇ ಸಾಗಿಸಲಾಗುತ್ತಿದೆ. ತಮ್ಮ ಕಣ್ಮುಂದೆಯೇ ಮರಳಿನ ಟ್ರ್ಯಾಕ್ಟರ್ ಹೋಗುತ್ತಿದ್ದರೂ ಪೊಲಿಸರು ಮೂಕಪ್ರೇಕ್ಷರಾಗಿರುತ್ತಾರೆ. ಮೇಲಾಧಿಕಾರಿಗಳೇ ಮರಳು ಮಾಫಿಯಾಗೆ ರಕ್ಷಣೆ ಕೊಡುತ್ತಿರುವಾಗ ನಾವೇನು ಮಾಡುವುದು ಅಂತಾರೆ ಹೆಸರು ಹೇಳದ ಪೊಲೀಸರು. ಯಡ್ರಾಮಿ ಪಿಎಸ್‌ಐ ಅವರು ತಮ್ಮ ಠಾಣೆಯ ಎದುರಿಗೆ ನಿಂತು ಮರಳಿನ ಟ್ರ್ಯಾಕ್ಟರ್ ಹಾದು ಹೋಗುತ್ತಿರುವುದನ್ನು ನೋಡಿದರೂ ನೋಡದಂತೆ ಇರುತ್ತಾರೆ.
ಬಹುತೇಕ ಈ ಗ್ರಾಮಗಳಲ್ಲಿ ದಿನನಿತ್ಯ ಮುಂಜಾನೆ ೫ ಗಂಟೆಯಿಂದ ಅಕ್ರಮ ಮರಳು ಮಾರಾಟ ಆರಂಭವಾಗುತ್ತದೆ. ಇಲ್ಲಿಂದ ಅಕ್ಕಪಕ್ಕ ಇದ್ದ ಗ್ರಾಮಗಳಿಗೆ ಅಕ್ರಮವಾಗಿ ಮರಳು ಸಾಗಿಸಲಾಗುತ್ತದೆ. ಇದಕ್ಕೆ ಪೊಲೀಸರು ಯಾವುದೆ ಪ್ರಶ್ನೆ ಮಾಡದೆ ಇರುವುದಕ್ಕೆ ಗ್ರಾಮದಲ್ಲಿ ಅಕ್ರಮ ಮರಳು ಮಾರಾಟ ಹೆಚ್ಚಾಗಿದೆ.