ಮಾನವೀಯತೆ ಇಲ್ಲದ ಮನುಷ್ಯ ಸಮಾಜಕ್ಕೆ ಹೊರೆ

0
108

ಕಲಬುರಗಿ: ಮಾನವೀಯತೆ ಇಲ್ಲದ ಮನುಷ್ಯ ಸಮಾಜಕ್ಕೆ ಹೊರೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕೆಲಸ ಮಾಡುವವರು ಮಾತ್ರ ನಿಜವಾದ ಮನುಷ್ಯರು ಎಂದು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅಭಿಪ್ರಾಯಪಟ್ಟರು.

ವಚನೋತ್ಸವ sಸಮಿತಿ ಯುವ ಘಟಕ ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಜಂಟಿ ಆಶ್ರಯದಲ್ಲಿ ನಗರದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಹಿರಿಯ ಕಾಯಕಜೀವಿ ಶ್ರೀ ಚಂದ್ರಶೇಖರ ಹಂಚನಾಳ ಉಡಚಣ ಅವರ ವಜ್ರ ಮಹೋತ್ಸವ (೭೫ನೇ ವರ್ಷದ ಜನ್ಮದಿನ) ದ ನಿಮಿತ್ತ ‘ಸಾರ್ವಜನಿಕರಿಗೆ ಗುಲಾಬಿ ಹೂವಿನ ಗಿಡ’ಗಳನ್ನು ವಿತರಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಹಿರಿಯರನ್ನು ಮತ್ತು ತಂದೆ-ತಾಯಂದಿರನ್ನು ನೋಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಮಾನವೀಯ ಸಂಬಂಧಗಳು ಹಳಸಿ ಹೋಗುತ್ತಿವೆ. ಈ ನಿಟ್ಟಿನಲ್ಲಿ ಮನೆಯಲ್ಲಿ ಮಕ್ಕಳಿಗೆ ಗುರು ಹಿರಿಯರಿಗೆ ಗೌರವ ಕೊಡುವ ಮತ್ತು ಹೆತ್ತವರನ್ನು ಇಳಿ ವಯಸ್ಸಿನಲ್ಲಿ ನೋಡಿಕೊಳ್ಳುವ ಕುರಿತು ಅರಿವು ಮೂಡಿಸಬೇಕೆಂದ ಅವರು, ಈ ನಿಟ್ಟಿನಲ್ಲಿ ಶರಣ ಚಿಂತಕ ಸಿದ್ಧಾರಾಮ ಹಂಚನಾಳ ಅವರು ತಮ್ಮ ತಂದೆಯ ಜನ್ಮದಿನದ ಕಾರ್ಯಕ್ರಮವನ್ನು ಸಮಾಜಮುಖಿಯಾಗಿ ಆಚರಿಸುವ ಮೂಲಕ ಮಾನವೀಯತೆ ಮೆರೆಯುವ ಕಾರ್ಯ ಮಾಡಿದ್ದಾರೆ ಎಂದು ಮನದುಂಬಿ ಮಾತನಾಡಿದರು.

Contact Your\'s Advertisement; 9902492681

ಇಂದು ಸಂಸ್ಕೃತಿ ಮಾಯವಾಗಿರುವ ಪರಿಣಾಮ ಸಮಾಜದಲ್ಲಿ ಮಾನವೀಯತೆ ಇಲ್ಲವಾಗಿದೆ. ಮಾನವೀಯತೆ ಇಲ್ಲದ ಪದವಿ ಇದ್ದು ನಿಷ್ಪ್ರಯೋಜಕ. ಹಾಗಾಗಿ, ನಮ್ಮ ದಿನನಿತ್ಯದ ದುಡಿಮೆಯ ಒಂದಂಶವನ್ನು ಸಮಾಜ ಸೇವೆಗೆ ವಿನಿಯೋಗಿಸುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿದ್ದವರ ಕಷ್ಟಕ್ಕೆ ಮಿಡಿಯುವ ಹೃದಯವಂತಿಕೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು.  – ಸಿದ್ಧಾರಾಮ ಹಂಚನಾಳ, ಶರಣ ಚಿಂತಕ

ವಚನೋತ್ಸವ ಪ್ರತಿಷ್ಠಾನದ ಯುವ ಅಧ್ಯಕ್ಷ ಶಿವರಾಜ ಎಸ್.ಅಂಡಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ವಿದ್ಯಾಸಾಗರ ದೇಶಮುಖ, ರಾಜಕುಮಾರ ಉದನೂರ, ಪ್ರೊ.ಮಹಾದೇವ ಬಡಾ, ಸಿದ್ಧಾರಾಮ ಹಂಚನಾಳ, ವಿನೋದ ಕುಮಾರ ಜೇನವೇರಿ, ಶಿವಾನಂದ ಡೋಮನಾಳ. ರಾಜಕುಮಾರ ಹಂಚನಾಳ, ಸೋಮಶೇಖರ ಹಂಚನಾಳ ವೇದಿಕೆ ಮೇಲಿದ್ದರು.

ಹಿರಿಯರಾದ ಸಿದ್ದಣ್ಣ ಭುಶೆಟ್ಟಿ, ಶಿವಲಿಂಗಪ್ಪ ಮಸಳಿ, ಶಿವಾನಂದ ಮಾನಕರ್, ಸೋಮಶೇಖರ ಚಿನ್ಮಳ್ಳಿ, ಸಂಗಮನಾಥ ಬಿಲಗುಂದಿ, ಸಿದ್ದಣ್ಣ ಪಾಟೀಲ ಚೊಂಚಿ, ಬಸವರಾಜ ಜಮಾದಾರ, ಕಮಲಾಬಾಯಿ ಧೋತ್ರೆ, ಶಾರದಾಬಾಯಿ ಮೂಲಗೆ, ಸುಭಾಷ ಭುಶೆಟ್ಟಿ ಇವರನ್ನು ಸಸಿಯನ್ನು ನೀಡಿ ವಿಶೇಷವಾಗಿ ಸತ್ಕರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here