ಕಲಬುರಗಿ: ನಗರದ ‘ಗುಲ್ಷನ್ ಬಾಗ್’ ಧರಣಿ ಸ್ಥಳದಲ್ಲಿ ಚಂದ್ರಶೇಖರ್ ಮಂಡೆಕೋಲು ಅವರು ರಚಿಸಿದ ನಾಝಿ ವಿರುದ್ಧ ಹೋರಾಟ ಮಾಡಿದ ನೂರ್ ಇನಾಯತ್ ಖಾನ್ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಿತು.
ಪುಸ್ತಕ ಬಿಡುಗಡೆ ನಂತರ ಮಾತನಾಡಿದ ಸಾಹಿತಿ, ಹೋರಾಟಗಾರ್ತಿ ಕೆ ನೀಲಾ, ‘ನೂರ್ ಇನಾಯತ್ ಖಾನ್ಳ ಮುತ್ತಜ್ಜ ಮೌಲಾಬಕ್ಷ್ (1833-1896) ಮದುವೆಯಾಗಿದ್ದು ಮೈಸೂರಿನ ಟಿಪ್ಪು ಸುಲ್ತಾನನ ಮಗನ ಮಗಳೊಂದಿಗೆ, 1914 ಜನವರಿ 1 ರಂದು ರಷ್ಯಾದಲ್ಲಿ ಜನಿಸಿದ್ದು, ನೂರ್-ಉನ್-ನೀಸಾ, ಅರ್ಥ ‘ಸ್ತ್ರೀ ಕುಲದ ಬೆಳಕು’ ಎಂದು ತಿಳಿಸಿದರು.
ಸೂಫಿ ಮನೆತನದ ಈ ಕುಡಿಯು ಟಿಪ್ಪು ಸುಲ್ತಾನ ದೇಶದ ಸ್ವಾತಂತ್ರ್ಯಕ್ಕಾಗಿ ಮಕ್ಕಳನ್ನೇ ಒತ್ತೆಯಿಟ್ಟು ಕೊನೆಯುಸಿರಿನವರೆಗೂ ಹೋರಾಡಿರುವುದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಳು. ಮೌಲಾಭಕ್ಷ್, ಇನಾಯತ್ ಖಾನ್ ಮತ್ತು ನೂರ್ ಅವರ ಬದುಕು ಸಾಂಪ್ರದಾಯಿಕ ಧಾರ್ಮಿಕ ಸಮಾಜದ ಗಡಿ ದಾಟಿದ ಮಾನವತೆಯ ಅಮೋಘ ಸಂಗಮವಾಗಿದೆ. ನೂರ್ ಮೂಲವು ಭಾರತದ್ದು. ಅದರಲ್ಲೂ ಕರ್ನಾಟಕದ್ದು, ಹೆಮ್ಮೆಯ ವಿಷಯ ಎಂದರು.
ಜೀವ ಪಣಕ್ಕಿಟ್ಟು ಹೋರಾಡಿದ್ದು ಜರ್ಮನ್ನ ಫ್ಯಾಸಿಜಂನ ವಿರುದ್ಧ, ಬ್ರಿಟನ್ನ ಗೂಢಾಚಾರಳಾಗಿ ಕ್ರೂರ ನಾಜಿಗಳ ನಡುವೆ ಕೆಲಸ ಮಾಡುತ್ತಾರೆ, ಅಂದಿಗೆ ಜರ್ಮನ್ನ ಹಿಟ್ಲರ್ ಶಾಹಿಯು ಯಾತನಾ ಶಿಬಿರದಲ್ಲಿ ಲಕ್ಷಗಟ್ಟಲೆ ಜನರ ಮಾರಣ ಹೋಮ ನಡೆಯುತ್ತಿತ್ತು. ಮಾನವ ಜನಾಂಗವೇ ತಲ್ಲಣಗೊಳ್ಳುವಂತಹ ನಾಜೀ ಕಪಿಮುಷ್ಠಿಯಲ್ಲಿ ಜಗತ್ತು ನರಳುತ್ತಿತ್ತು. ಅಂತಹ ಹೊತ್ತಿನಲ್ಲಿ ನೂರ್ಳನ್ನು ಸೆರೆ ಹಿಡಿಯುತ್ತಾರೆ. ಮತ್ತು ಡಕಾವೊದ ಯಾತನಾ ಶಿಬಿರದಲ್ಲಿ 1944 ಸೆಪ್ಟೆಂಬರ್ 11ರಂದು ಅತ್ಯಂತ ಕ್ರೂರವಾಗಿ ಅವರಿಗೆ ಹಿಂಸಿಸಿ ಅತ್ಯಾಚಾರಗೈದು ಕಡೆಗೆ ಹಣೆಗೆ ಗುಂಡಿಟ್ಟು ಸಾಯಿಸಲಾಗುತದೆ. ಆ ಹೊತ್ತಿನಲ್ಲಿ ನೂರ್ ಬಾಯಿಯಿಂದ ಹೊರಟ ಏಕೈಕ ಶಬ್ದವೆಂದರೆ ಅದು ‘ಲಿಬರ್ಟಿ’. ಎದೆ ಝಲ್ಲೆನ್ನುವಂತಹ ಕ್ರೂರ ಧಾಳಿಯ ನಂತರವೂ ನೂರ್ ‘ಲಿಬರ್ಟಿ’ಯನ್ನೇ ಧ್ಯಾನಿಸುತ್ತಾಳೆ ಎಂದು ಇತಿಹಾಸ ತಿಳಿಸಿದರು.
ಟಿಪ್ಪು ಸುಲ್ತಾನನ ಕುಡಿಯು ಜಗದ ಕಂಟಕವಾಗಿದ್ದ ನಾಜೀ ವಿರುದ್ಧ ಹೋರಾಡಿ ಸಾವಿನಲ್ಲೂ ಸ್ವಾತಂತ್ರ್ಯದ ಹಂಬಲವೇ ವ್ಯಕ್ತಿಸುವುದು ಈ ಹೊತ್ತಿಗೆ ಭಾರತಕ್ಕೆ ಆದರ್ಶಪ್ರಾಯವಾದ ಇತಿಹಾಸವಾಗಿದ್ದು, ನಾಜೀ ವಿರುದ್ಧ ಹೋರಾಡಿ ಗೆದ್ದು ಬಂದು ಭಾರತದ ವಿಮೋಚನೆಗಾಗಿ ಹೋರಾಡುವ ಕನಸು ಹೊಂದಿದ್ದಳು, ಸೂಫಿ ಸಂತರ ಸಂದೇಶ ಆಲಿಸಿದ, ವೀಣೆ ಹಿಡಿದು ಶಂಕರಾಭರಣ ನುಡಿಸಿದವಳೂ, ವೇದಾಂತ ಕುರಾನ್, ಹದೀಸ್, ಬೈಬಲ ಹೀಗೆ ವಿಶ್ವದ ದಾರ್ಶನಿಕ ಪರಂಪರೆಯನ್ನೆಲ್ಲಾ ಓದಿಕೊಂಡವಳು, ಪರಮಶಾಂತ ಬುದ್ಧನ ಜಾತಕ ಕತೆಗಳನ್ನು ಬರೆದವಳು, ಮಕ್ಕಳಿಗೆಲ್ಲಾ ಕತೆ ಹೇಳುತ್ತಿದ್ದವಳು ಭಾರತಕ್ಕೆ ಸ್ವಾತಂತ್ರ್ಯ ಸಿಗಲೆಂದು ಬಯಸಿದವಳು ನಾಜಿಗಳ ಕ್ರೌರ್ಯಕ್ಕೆ ಬಲಿಯಾಗಿ ಹೋಗುತ್ತಾಳೆ.
ಲಂಡನ್ನಲ್ಲಿ ನೂರ್ ಪ್ರತಿಮೆ ಇದೆ. ಅವರ ಹೆಸರಿಗೆ ಅಂಚೆ ಚೀಟಿ ಬಂದಿದ್ದು, ಅನೇಕ ಮರಣೋತ್ತರ ಪುರಸ್ಕಾರಗಳು ಸಂದಿವೆ. ಆದರೆ ಫ್ಯಾಸಿಜಂನ ನಾಜೀ ಕ್ರೌರ್ಯದ ವಿರುದ್ಧ ಸೆಣೆಸಿದ ಮತ್ತು ಅತ್ಯಂತ ಯಾತನಾದಾಯಕವಾದ ಹಿಂಸೆ ನೋವು ಅನುಭವಿಸಿ ಸಾಯುವಾಗಲೂ ಲಿಬರ್ಟಿ ಕನಸಿದ ಈ ನೆಲದ ಮಗಳು ನಮಗೆ ಅಪರಿಚಿತಳಾಗಿ ಉಳಿದಿದ್ದು, ಈ ಹೊತ್ತು ಎಲ್ಲರೆದೆಯಲ್ಲಿ ಈ ನೂರ್ ಇನಾಯತ್ ಖಾನ್ ಎಂಬ ಈ ಮಗಳ ಹೋರಾಟ ಕಿಚ್ಚು, ಸ್ವಾತಂತ್ರ್ಯದ ಹಂಬಲ, ಜಗದಗಲ ಕಣ್ಣೋಟದ ಮಾನವೀಯ ತುಡಿತ ಗುರಿ ನಮಗೆ ಬೇಕಿದೆ ಎಂದು ಕರೆ ನೀಡಿದರು.
ಪುಸ್ತಕ ಬರೆದು ನಮ್ಮದೇ ಮಣ್ಣ ಮಗಳನ್ನು ಪರಿಚಯಿಸಿದ ಚಂದ್ರಶೇಖರ ಮಂಡೆಕೋಲು ಅವರಿಗೆ ನಾವು ಋಣಿ ಯಾಗಿದೇವೆ ಎಂದು ಹೇಳಿದರು. ನಂತರ ‘ಅಖ್ತರ್ ಪರವಿನ್ ನಾಡಗೌಡ ಮಾತನಾಡಿ ಈ ಕೃತಿಯು ಎಲ್ಲ ಭಾಷೆಗಳಲ್ಲಿ ದೊರೆಯುವಂತಾಗಲಿ, ಫ್ಯಾಸಿಸ್ಟ್ ಸ್ವರೂಪದ ತಾನಾಶಾಹಿಯು ಎಲ್ಲೆಡೆ ಹಬ್ಬುತ್ತಿರುವಾಗ ನಮ್ಮದೇ ಮಗಳ ವೀರಗಾಥೆಯು ಮಾದರಿಯಾದದ್ದು, ಪುಸ್ತಕ ಬರೆದು ಪ್ರಕಟಿಸಿದವರಿಗೆ ಧನ್ಯವಾದ’ ಸಲ್ಲಿಸಿದರು.
ಸಭೆಯಲ್ಲಿ ಶಹನಾಜ್ ಅಖ್ತರ್ ಇವರು ಮಾತನಾಡಿದರು. ನುಜ್ಜತ್ ಬೇಗಂ, ಚಂದಮ್ಮ, ಲವಿತ್ರ, ಅಮೀನಾ ಬೇಗಂ, ಮೊಯಿನುದ್ದಿನ, ಮಖಬುಲ್ ಅಹ್ಮದ್ ಸರಡಗಿ, ಜಬ್ಬರ ಅಹಮದ್ ಗೋಳಾ ಮುಂತಾದವರು ಸಭೆಯಲ್ಲಿ ಹಾಜರಿದ್ದರು.