ಧಾರವಾಡ: ಸಮಾಜದಲ್ಲಿಯ ಅನಿಷ್ಟಗಳ ನಿವಾರಣೆಗಾಗಿ ನಿರಂತರ ಶ್ರಮಿಸಿದ ಪ್ರಾತಃಸ್ಮರಣೀಯ ದಾರ್ಶನಿಕರ ಹೆಸರಿನಲ್ಲಿ ವಿನಾಕಾರಣ ಮೆರೆದಾಡುತ್ತಾ, ಹೊಟ್ಟೆ ಹೊರೆದುಕೊಂಡು ಬದುಕುತ್ತಿರುವ ಇಂದಿನ ಕಾಲದಲ್ಲಿ ಶೋಕಿಲಾಲರ ಸಂಖ್ಯೆ ಹೆಚ್ಚಾಗುತ್ತಿರುವುದು ಈ ದೇಶದ ಸಾಮಾಜಿಕ ದುರಂತವಾಗಿದೆ ಎಂದು ಯುವಕವಿ ಶರಣಪ್ಪ ಗೊಲ್ಲರ ಅಭಿಪ್ರಾಯಪಟ್ಟರು.
ಅವರು ಇಂದಿಲ್ಲಿ ಬಸವ ಜಯಂತಿ-2019ರ ಪ್ರಯುಕ್ತ ಗಣಕರಂಗ ಸಂಸ್ಥೆ ಆಯೋಜಿಸಿದ್ದ ೩ಬಿ ನೆನಪಿನ ಕವಿಗೋಷ್ಟಿ-೧೫, ’ಅಣ್ಣ-ಬಸವಣ್ಣ’ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಸಮಾಜ ಸುಧಾರಣೆಗಾಗಿ ತಮ್ಮ ಜೀವನವನ್ನು ಅರ್ಪಿಸಿಕೊಂಡ ದಾರ್ಶನಿಕ ಮಹನೀಯರನ್ನು ಒಂದೊಂದು ಜಾತಿಗೆ ಸಿಮೀತಿಗೊಳಿಸಿ ಅವರ ಹೆಸರಿನಲ್ಲಿ ಸಂಘ-ಸಂಸ್ಥೆ, ವೇದಿಕೆ-ಟ್ರಸ್ಟುಗಳನ್ನು ಹುಟ್ಟು ಹಾಕಿಕೊಂಡು ಸರಕಾರ-ಸಾರ್ವಜನಿಕರಿಂದ ವ್ಯವಸ್ಥಿತವಾಗಿ ಹಣವನ್ನು ದೋಚಲಾಗುತ್ತಿದೆ. ಇದಕ್ಕೆ ಉದಾಹರಣೆಯಾಗಿ ಸಮಾಜ ಸುಧಾರಕ ದಾರ್ಶನಿಕ ಬಸವಣ್ಣನವರ ಹೆಸರಿನಲ್ಲಿ ಎಲ್ಲೆಡೆಗೂ ನಡೆಸಲಾಗುತ್ತಿರುವ ಶೈಕ್ಷಣಿಕ, ಸಾಮಾಜಿಕ, ಹಣಕಾಸು ಸಂಸ್ಥೆಗಳು. ಮನುಷ್ಯನನ್ನು ಮನುಷ್ಯನನ್ನಾಗಿಸುವ ಶಕ್ತಿ ತುಂಬುವುದೇ ವಚನ ಸಾಹಿತ್ಯ. ಅದನ್ನು ಅರಿತುಕೊಳ್ಳುವ ಅವಶ್ಯಕತೆ ಹಿಂದೆಂದಿಗಿಂತ ಇಂದಿಗೆ ಹೆಚ್ಚಾಗಿದೆ ಎಂದು ಹೇಳಿದರು.
ಭಾರತವೆಂಬ ವಿಚಿತ್ರ ದೇಶದ ವಿಚಿತ್ರ ಆಚರಣೆಗಳು, ಅಮಾನವೀಯ ಸಾಮಾಜಿಕ ಜಾತಿ ವ್ಯವಸ್ಥೆ, ಅನಾರೋಗ್ಯಕರ ಸಾಹಿತ್ಯ ಸೃಷ್ಟಿ, ಭ್ರಮೆಯಲ್ಲಿ ಬದುಕುವಂತೆ ಮಾಡುತ್ತಿರುವ ದೇಶದ ಮುಂದಾಳುಗಳು, ವಾಸ್ತವ ಪ್ರಜ್ಞೆಯ ಕೊರತೆ, ಜಾತಿಯಾಧಾರಿತ ವಿಷಯಗಳು ಎಲ್ಲದಕ್ಕೂ ಮಾನದಂಡವಾಗಿರುವ ದುರ್ದಿನಗಳು, ಅಪಹಾಸ್ಯ ಮಾಡುವ ಹೊಣೆಗಾರಿಕೆಯಿಲ್ಲದ ನಾಯಕರು ಮುಂತಾದ ಸಮಸ್ಯೆಗಳಿಗೆ ಆಗಿನ ಕಾಲದಲ್ಲಿ ಹನ್ನೆರಡನೇಯ ಶತಮಾನದ ಶರಣರ ವಚನಗಳಲ್ಲಿ ಪರಿಹಾರ ಸೂಚಿಸಲಾಗಿದೆ. ಇಂದಿನ ಕಾಲದ ಎಲ್ಲಾ ಐಪಿಸಿಗಳಲ್ಲಿ ಹೇಳಿರುವುದನ್ನು ತಿಳಿದುಕೊಳ್ಳಲು ಕಳಬೇಡ-ಕೊಲಬೇಡ ಎಂಬ ಒಂದೇ ವಚನವೇ ಸಾಕು ಎಂದು ಕವಿಗೋಷ್ಟಿ ಉದ್ಘಾಟಿಸಿ ಮಾತನಾಡಿದ ನ್ಯಾಯವಾದಿ ಮತ್ತು ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಹೇಳಿದರು.
ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಡಾ.ಮಲ್ಲಿಕಾರ್ಜುನ ಗುಮ್ಮಗೋಳ ಅವರು ಮಾತನಾಡುತ್ತಾ, ದಾರ್ಶನಿಕರ ನೆನಪಿನ ಕವಿಗೋಷ್ಟಿಯಲ್ಲಿ ಭಾಗವಹಿಸುವ ಕವಿಮಿತ್ರರು ಕವನ ರಚಿಸುವ ಮೊದಲು ಆಯಾ ದಾರ್ಶನಿಕರ ಕುರಿತು ತಿಳಿದುಕೊಳ್ಳುವುದು ಅವಶ್ಯ. ಕಾವ್ಯ ಪ್ರಯೋಗದಲ್ಲಿ ರಸ-ರೀತಿ-ಧ್ವನಿಯನ್ನು ಬಳಸಿಕೊಳ್ಳಬೇಕು. ಕವಿತೆಗೆ ನಿಯತಿಬಂಧ ಇರಬೇಕು. ಶುದ್ಧಾಂಗ ಭಾವನೆಗಳು ನಿರಂತರವಾಗಿ ಮಿಳಿತಗೊಂಡಾಗ ಮಾತ್ರ ಸರ್ವಕಾಲೀಕ ಕಾವ್ಯ ಹೊರಹೊಮ್ಮುವುದು. ಉತ್ತಮ ಕೃತಿಯೊಂದು ಸದೃಢ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶನ ಮಾಡಬಲ್ಲುದು. ಇದಕ್ಕೆ ಉದಾಹರಣೆಯಾಗಿ ಹಲವಾರು ಕೃತಿಗಳನ್ನು ಗಮನಿಸಬಹುದು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಎಸ್.ಬಿ.ಗಾಮನಗಟ್ಟಿ, ಲಕ್ಷ್ಮಣ ಬಕ್ಕಾಯಿ, ಗಿರೀಶ ಕಾಂಬಳೆ ಉಪಸ್ಥಿತರಿದ್ದರು. ಕವಿಗೋಷ್ಟಿಗೆ ಎಲ್ಲರನ್ನೂ ರಂಗಕರ್ಮಿ ಹಿಪ್ಪರಗಿ ಸಿದ್ಧರಾಮ ಸ್ವಾಗತಿಸಿ, ಕವಿಗೋಷ್ಟಿಯನ್ನು ನಿರ್ವಹಿಸಿದರು. ನಂತರ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ, ಕವನ ವಾಚಿಸಿದ ಉದಯೋನ್ಮುಖ ಕವಿಗಳಾದ ಕಿರಣ ನಾಯಕನೂರ, ಮಂಜುನಾಥ ಮೆಣಸಿನಕಾಯಿ, ಮಂಜುನಾಥ ವಡ್ಡರ, ಪುಷ್ಪಾ ನವಲೂರ, ಸಂತೋಷ ಕುರುಬರ, ಸುಹೇಚ ಪರಮವಾಡಿ, ವಿಜಯಲಕ್ಷ್ಮಿ ದೊಡಮನಿ, ವಿಜಯಶ್ರೀ, ವಾಣಿಶ್ರೀ ನವಲೂರ, ಮಹಾಂತೇಶ ಹುಬ್ಬಳ್ಳಿ, ಸಂಪತ್ಕುಮಾರ ಕಿಚಡಿ, ಶಿವಶರಣ ಪರಪ್ಪಗೋಳ, ಮದುಮತಿ ಸಣಕಲ್ಲ, ಅರುಣ ಮೂಡಿ ಮುಂತಾದ ಕವಿ-ಕವಿಯಿತ್ರಿಯರಿಗೆ ಪುಸ್ತಕ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಧಾರವಾಡದ ಗಣಕರಂಗ ಕವಿಗೋಷ್ಟಿ ಸಮಿತಿ ಕಾರ್ಯಕ್ರಮವನ್ನು ಸಂಘಟಿಸಿತ್ತು.