ವಾಡಿ: ಪ್ರಚೋದನೆಕಾರಿ ಭಾಷಣ ಮಾಡುವ ಮೂಲಕ ಪ್ರಗತಿಪರರನ್ನು ಕೊಲ್ಲುವ ಬೆದರಿಕೆ ಹಾಕಿರುವ ಶ್ರೀರಾಮ ಸೇನೆಯ ಕಾರ್ಯಾಧ್ಯಕ್ಷ ಆಂದೋಲಾ ಮಠದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಅದರ ಸಂಸ್ಥಾಪ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ತಕ್ಷಣವೇ ಬಂಧಿಸಬೇಕು. ಮತ್ತು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಶ್ರೀರಾಮ ಸೇನೆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಮಾನವ ಬಂಧುತ್ವ ವೇದಿಕೆಯ ಚಿತ್ತಾಪುರ ತಾಲೂಕು ಅಧ್ಯಕ್ಷ ಶ್ರವಣಕುಮಾರ ಎಂ.ಮೌಸಲಗಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮೌಸಲಗಿ, ರಾಯಚೂರಿನ ಶಕ್ತಿನಗರದಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ಅವರು ಯಾರು ಮೋದಿ ಹಾಗೂ ಅಮಿತ್ ಶಾ ವಿರುದ್ಧ ಮಾತನಾಡುತ್ತಾರೋ ಅವರಿಗೆ ಗೌರಿ ಲಂಕೇಶ ಗತಿ ಬರಲಿದೆ ಎನ್ನುವ ಮೂಲಕ ಪ್ರಗತಿಪರ ದನಿಗಳ ವಿರುದ್ಧ ಮತ್ತೊಮ್ಮೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಪರೋಕ್ಷಾಗಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ಅಲ್ಲದೆ ವಿಜಯಪುರದ ಸಿಂಧಗಿಯಲ್ಲಿ ನಡೆದ ಹಿಂದೂ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಬಿಎಸ್‌ಪಿ ನಾಯಕಿ ಅಕ್ಕ ಮಾಯಾವತಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ ಗಾಂಧಿ ಅವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಹೇಳಿಕೆ ನೀಡಿದ್ದಾರೆ. ಶ್ರೀರಾಮ ಸೇನೆಯ ಈ ಇಬ್ಬರೂ ನಾಯಕರು ಬಹಿರಂಗವಾಗಿ ಕೊಲೆ ಬೆದರಿಕೆಯೊಡ್ಡಿದ್ದು, ಪೊಲೀಸರು ಕೂಡಲೇ ಇವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಜೈಲಿಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಇದೇ ಆಂದೋಲಾ ಶ್ರೀಗಳು, ಸಾಹಿತಿ ಕೆ.ಎಸ್.ಭಗವಾನ್ ಅವರ ವಿರುದ್ಧ ಹಲ್ಲು ಮಸೆಯುವ ಮೂಲಕ ಮೈಸೂರಿನಲ್ಲೊಬ್ಬ ಸೈತಾನನಿದ್ದಾನೆ. ಅವನಿಗೂ ಗೋರಿ ಕಟ್ಟಬೇಕು ಎಂದು ಪ್ರಚೋಧನಕಾರಿ ಭಾಷಣ ಮಾಡಿದ್ದರು. ಸಿಂಧಗಿಯಲ್ಲಿ ಪಾಕ್ ಧ್ವಜಾರೋಹಣ, ಗೌರಿ ಲಂಕೇಶ ಹತ್ಯೆ, ವಿಜಯಪುರದಲ್ಲಿ ಬಸವೇಶ್ವರ ಪ್ರತಿಮೆಗೆ ಅವಮಾನ, ಶಹಾಬಾದನಲ್ಲಿ ರಾಮನ ಭಾವಚಿತ್ರಕ್ಕೆ ಸೆಗಣಿ ಬಳಿದ ದುಷ್ಕೃತ್ಯಗಳ ಹಿಂದೆ ಇದೇ ಶ್ರೀರಾಮ ಸೇನೆ ನಿಂತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸಮಾಜದಲ್ಲಿ ಶಾಂತಿ, ಸುವವ್ಯವಸ್ಥೆ ಹಾಗೂ ಕೋಮು ಸೌಹಾರ್ಧತೆ ಕಾಪಾಡಬೇಕಾದ ಇವರು ಸಂವಿಧಾನ ವಿರೋಧಿ ಹೇಳಿಕೆ ನೀಡುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ.
ಇಂಥಹ ಸಂಘಟನೆಗಳ ಹೇಳಿಕೆಯಿಂದ ಕೋಮು ಸಂಘರ್ಷ ಹೆಚ್ಚಾಗುತ್ತಿವೆ. ಪ್ರಜಾಂತ್ರದ ಭಾರತದಲ್ಲಿ ಪ್ರಗತಿಪರ ಚಿಂತಕರಿಂದ ಬರೆಯುವ ಮತ್ತು ಮಾತನಾಡುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಅನ್ಯಾಯವನ್ನು ಪ್ರಶ್ನಿಸುವವರನ್ನು ಕೊಲ್ಲುವ ಬೆದರಿಕೆ ಹಾಕಲಾಗುತ್ತಿದೆ. ಇದು ವೈಚಾರಿಕ ಚಿಂತಕರಲ್ಲಿ ಭಯ ಮೂಡಿಸುತ್ತಿದೆ. ಮೊದಲು ನಿನ್ನ ದಾಖಲೆ ಕೊಡು ಎಂದು ಕವಿತೆ ವಾಚನ ಮಾಡಿದ ಕವಿಯನ್ನು ಇಲ್ಲಿ ಬಂಧಿಸಲಾಗುತ್ತದೆ. ಜನಪರ ಹೋರಾಟದ ದನಿಗಳನ್ನು ಹತ್ತಿಕ್ಕಲು ಕಾನೂನು ದುರುಪಯೋಗ ಮಾಡಿಕೊಳ್ಳಲಗುತ್ತಿದೆ. ಆದರೆ ಬಹಿರಂಗವಾಗಿ ಕೊಲೆ ಬೆದರಿಕೆಯೊಡ್ಡುತ್ತಿರುವ ಸಮಘ ಪರಿವಾರದ ಶಕ್ತಿಗಳನ್ನು ಬಂಧಿಸಲಾಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿರುವ ಶ್ರವಣಕುಮಾರ ಮೌಸಲಗಿ, ಕೂಡಲೇ ಶ್ರೀರಾಮ ಸೇನೆಯನ್ನು ನಿಷೇಧ ಮಾಡಬೇಕು ಹಾಗೂ ಇದರ ನಾಯಕರಾದ ಆಂದೋಲಾ ಶ್ರೀ, ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದರೆ ಬಿಜೆಪಿ ಸರಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.