ಸುರಪುರ: ಕರ್ನಾಟಕ ಸರಕಾರ ಪ್ರತಿವರ್ಷ ನೀಡುವ ಜಾನಪದ ಅಕಾಡೆಮಿ ಪ್ರಶಸ್ತಿಗೆ ೨೦೧೯ರ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದ್ದು,ಯಾದಗಿರಿ ಜಿಲ್ಲೆಯಿಂದ ಸುರಪುರ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ಗೀಗಿ ಪದಕಾರ ಶಿವಮೂರ್ತಿ ತನೀಕೆದಾರರನ್ನು ನೇಮಕಗೊಳಿಸಿದೆ.
ಶಿವಮೂರ್ತಿ ತನೀಕೆದಾರ ಸುಮಾರು ಮೂರು ದಶಕಗಳಿಂದ ಗೀಗಿ ಪದಗಳ ಹಾಡುಗಾರಿಕೆ ಮೂಲಕ ನಾಡಿಗೆ ಪರಿಚಿತರಾಗಿರುವ ಇವರ ತಂದೆ ಹನುಮಂತಪ್ಪ ತನೀಕೆದಾರ ಕೂಡ ಗೀಗಿ ಪದ ಮತ್ತು ಮೋಹರಂ ಹಾಗು ತತ್ವ ಪದಕಾರರಾಗಿದ್ದರು.ನಾಡಿನಲ್ಲಿ ಹನುಮಂತಪ್ಪ ಕವಿ ಎಂದೆ ಪ್ರಸಿಧ್ಧರಾಗಿದ್ದರು,ಅಂತವರ ಮಗನಾದ ಶಿವಮೂರ್ತಿ ಕೂಡ ಹಲವಾರು ತತ್ವ ಪದಗಳನ್ನು ಬರೆದು ಡಪ್ಪಿನ ವದ್ಯದೊಂದಿಗೆ ಹಾಡಿ ಸೈ ಎನಿಸಿಕೊಂಡಿದ್ದಾರೆ.ಮೂರು ದಶಕಗಳ ಇವರ ಜಾನಪದ ಸೇವೆಯನ್ನು ಸರಕಾರ ಇಂದು ಗುರುತಿಸಿ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಗೊಳಿಸಿದೆ.
ಶಿವಮೂರ್ತಿಯವರ ಗೀಗಿ ಪದಗಳನ್ನು ಕೇಳುತ್ತಾ ಬಂದಿದ್ದ ಸ್ಥಳಿಯ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಹಾಗು ಜಾನಪದ ಅಕಾಡೆಮಿ ಸದಸ್ಯರಾಗಿರುವ ಇದೇ ತಾಲೂಕಿನ ಜಾಲಿಬೆಂಚಿಯ ಅಮರಯ್ಯಸ್ವಾಮಿ ಇವರು ಕೂಡ ಶಿವಮೂರ್ತಿ ತನೀಕೆದಾರರ ಹೆಸರನ್ನು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದರಿಂದ ೨೦೧೯ರ ಪ್ರಶಸ್ತಿ ಲಭಿಸಿದಂತಾಗಿದೆ.ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನಾರಿಗಿರುವ ಶಿವಮೂರ್ತಿಗೆ ತಾಲೂಕಿನ ಅನೇಕ ಜನ ಜನಪದಕಾರರು ಮತ್ತು ಗೀಗಿ ಪದಾಸಕ್ತರು ಅಭಿನಂಧನೆ ಸಲ್ಲಿಸಿದ್ದಾರೆ.