ದೇವಲೋಕ ಮರ್ತ್ಯಲೋಕ ನಾಗಲೋಕದವರೆಲ್ಲರಿಗೂ ಗುರುವಾದ ಬಸವಣ್ಣನವರು

1
197

ಕಲಬುರಗಿ: ಬಸವ ಪ್ರಣೀತ ಶರಣಧರ್ಮ ಅತ್ಯಂತ ವಾಸ್ತವಿಕವಾದ ಧರ್ಮ. ಶರಣರು ಲೋಕ ವಿಮುಖರಲ್ಲ. ಲೋಕವನ್ನು ಬಿಟ್ಟು ಸಾಧನೆ ಮಾಡದೆ, ಲೋಕದೊಳಗಿದ್ದು ತಮ್ಮ ಸಾಧನೆ ಮತ್ತು ಸಿದ್ಧಿಯ ಮೂಲಕ ಮುಕ್ತಿಯನ್ನು ಪಡೆದುಕೊಂಡಿರುವುದು ಶರಣಧರ್ಮದ ಅತ್ಯಂತ ಶ್ರೇಷ್ಠವಾದ ಮೌಲ್ಯ.

ಬಸವ ಸಮಿತಿಯ ಅನುಭವ ಮಂಟಪದಲ್ಲಿ ಮಾ. 01ರಂದು ಸಂಜೆ ೬. ಗಂಟೆಗೆ ಲಿಂ. ಶ್ರೀ ಸಿದ್ರಾಮಪ್ಪ ಅಂಗಡಿ, ಇಲಕಲ್ಲ ಸ್ಮರಣಾರ್ಥ ದತ್ತಿಕಾರ್ಯಕ್ರಮದಲ್ಲಿ ’ಶರಣರುಕಂಡ ಬಸವಣ್ಣ’ ಎಂಬ ವಿಷಯದ ಮೇಲೆ ಅನುಭಾವ ನೀಡುತ್ತಾ ಮಾತನಾಡಿದ ಪ್ರಾಧ್ಯಾಪಕರಾದ ಡಾ. ಚಿತ್ಕಳಾ ಮಠಪತಿಯವರು ಬೇರೆ ಬೇರೆ ಧರ್ಮಗಳಲ್ಲಿ ದೇವರನ್ನು ಹೊರಜಗತ್ತಿನಲ್ಲಿ ಹುಡುಕಿದರೆ ಶರಣಧರ್ಮದಲ್ಲಿ ದೇವರನ್ನು ಪ್ರತಿಯೊಬ್ಬರ ಅಂತರಂಗದೊಳಗೆ ಗುರುತಿಸಲಾಗುತ್ತದೆ. ನಮ್ಮೊಳಗೆ ಅಡಕವಾಗಿರುವ ಚಿಚ್ಛಕ್ತಿಯನ್ನು ಗುರುತಿಸಿಕೊಂಡರೆ ಆ ದಿವ್ಯಚೇತನದ ದರ್ಶನವಾಗುತ್ತದೆ ಎಂದು ಜಗತ್ತಿಗೆ ಅರುಹಿದವರು ಶರಣರು. ಪ್ರತಿಯೊಂದು ಅಂಗವೂ ಲಿಂಗವಾಗುವ ಸರಳ ಮಾರ್ಗವನ್ನು ಇಷ್ಟಲಿಂಗ ಪೂಜೆಯ ಮೂಲಕ ಸಾಧಿಸಬಹುದು. ಈ ಬಗೆಯ ಸರಳ ಮಾರ್ಗವನ್ನು ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣರೆಲ್ಲರು ಜಾತಿ ವರ್ಗಗಳ ಬೇಧವೆನ್ನದೆ ಅಪೂರ್ವ ಸಾಧನೆಯನ್ನು ಮಾಡಿ ಲೋಕಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ವಿವರಿಸಿದರು.

Contact Your\'s Advertisement; 9902492681

ಬಸವಣ್ಣನವರನ್ನು ಶರಣರು ಚಿತ್ರಿಸಿದ ರೀತಿ ಅನುಪಮವಾದುದು. ಬಸವಣ್ಣನವರು ಒಂದು ಹೊಸ ಮನ್ವಂತರವನ್ನು ಇತಿಹಾಸವನ್ನು ಸೃಷ್ಟಿಸಿದ ವಿಭೂತಿಪುರುಷ. ಶರಣೆರಲ್ಲರೂ ಬಸವಣ್ಣನವರ ನೇತೃತ್ವದಲ್ಲಿ ವಿಶಿಷ್ಟವಾದ ಚಳುವಳಿಯನ್ನು ಹಮ್ಮಿಕೋಂಡು ಮನುಕುಲಕ್ಕೆ ಮಾದರಿಯಾದರು. ಶಿವಭಕ್ತಿಯನ್ನು ಹೆಚ್ಚಿಸಲೆಂದು ಮರ್ತ್ಯಕ್ಕೆ ಅವತರಿಸಿದಾತ ಬಸವಣ್ಣ ಎನ್ನುತ್ತಾರೆ ಮಡಿಳವಾಳ ಮಾಚಿದೆವರು. ತಮ್ಮನ್ನು ಬಸವಣ್ಣನನ್ನಾಗಿ ಹುಟ್ಟಿಸಬೇಕಿತ್ತು ಎಂದು ಅಲ್ಲಮಪ್ರಭುಗಳು ಬಯಸುತ್ತಾರೆ. ದೇವಲೋಕದವರಿಗೂ ಮರ್ತ್ಯಲೋಕದವರಿಗೂ ನಾಗಲೋಕದವರಿಗೂ ಬಸವಣ್ಣನೇ ದೆವರು ಎಂದು ಅಕ್ಕಮಹಾದೇವಿ ಅದ್ಗಾರ ತೆಗೆಯುತ್ತಾರೆ. ಇಂತಹ ಅಗಾಧ ವ್ಯಕ್ತಿತ್ವ ಬಸವಣ್ಣನವರದಾಗಿತ್ತು ಎಂದು ಡಾ. ಚಿತ್ಕಳಾ ಅವರು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ವೀರಣ್ಣ ದಂಡೆ ಅವರು ’ಮಂಗಳವೇಡೆ’ ಕುರಿತು ಪ್ರಾತ್ಯಕ್ಷಿಕೆ ಉಪನ್ಯಾಸ ನೀಡಿದರು. ಮಂಗಳವೇಡೆ ಕಲ್ಯಾಣಕ್ಕಿಂತಲೂ ಹಾಳಾಗಿ ಹೋಗಿದೆ. ಅಲ್ಲಿ ಬಸವಣ್ಣನವರದು ಎನ್ನುವ ಗುರುತು ಏನೂ ಉಳಿದಿಲ್ಲ. ಅಲ್ಲಿರುವ ಒಂದು ಸಣ್ಣ ಕೋಟೆ ಮೂಲತಃ ಮಣ್ಣಿನ ಕೋಟೆಯಾಗಿದ್ದು, ಅದು ಕಲಚುರಿಗಳ ಆಡಳಿತ ಕೇಂದ್ರವಾಗಿರಬಹುದು. ಬಸವಣ್ಣನವರು ಕರಣಿಕರಾಗಿ ಕೆಲಸ ಮಾಡಿದ ಸ್ಥಳವಾಗಿ ಅದೊಂದು ಮಾತ್ರ ಕಾಣುತ್ತದೆ ಕೋಟೆಯ ಸುತ್ತಲೂ ಶಿವಮಂದಿರಗಳು ಇರುವುದು ಈ ಊಹೆಗೆ ಬಲವಾಗಿ ನಿಲ್ಲುತ್ತವೆ. ಉಳಿದಂತೆ ಸಂಪೂರ್ಣವಾಗಿ ಹಾಳಾಗಿ ಹೋದ ಅರಮನೆಯ ಪಳೆಯುಳಿಕೆಗಳು ಇದ್ದು, ಅರಮನೆಯ ಅಂಗಳದಲ್ಲಿಯೇ ಮಂಗಳವೇಡೆ ಹೆಸರು ಬರಲು ಕಾರಣವಾದ ಮಂಗಳಾದೇವಿ ದೇವಾಲಯವಿದೆ. ಇದನ್ನು ಬಿಟ್ಟರೆ ಅಲ್ಲಿಯ ಒಂದು ಗಲ್ಲಿಯಲ್ಲಿ ಏಕಾಂತ ರಾಮಯ್ಯನವರ ಶಿರಸ್ ಪವಾಡದ ಘಟನೆ ಚಿತ್ರಿಸುವ ಶಿಲ್ಪಗಳ ಸಾಲುಗಳುಳ್ಳ ಒಂದು ಶಿಲಾಫಲಕ ಮಾತ್ರ ಶರಣರ ಗುರುತಾಗಿ ಉಳಿದುಕೊಂಡಿದೆ ಎಂದು ಡಾ. ವೀರಣ್ಣ ದಂಡೆ ಅವರು ವಿವರಿಸಿದರು.

ಮಂಗಳವೇಡೆಯಲ್ಲಿ ಮತ್ತು ಅಲ್ಲಿಂದ ಸಮೀಪದ ಮಾಸನೂರು ಮತ್ತು ಸಿದ್ಧನಕೆರೆಯಲ್ಲಿ ರೇವಣಸಿದ್ಧರಿಗೆ ಸಂಬಂಧಿಸಿದ ಕುರುಹುಗಳು ದೊರೆಯುತ್ತವೆ. ಮಾಸನೂರಿನಲ್ಲಿ ರೇವಣಸಿದ್ದೇಶ್ವರ ಮಂದಿರ, ಭೀಮಾನದಿಯ ಮಡುವಿನಲ್ಲಿ ಅವರು ಇಟ್ಟರೆಂದು ಹರಿಹರ ಹೇಳುವ ಖಡ್ಗದ ಸ್ಮಾರಕವೊಂದಿದೆ. ಸಿದ್ಧನ ಕೆರೆಯಲ್ಲಿ ರೇವಣಸಿದ್ಧರು ಅಗೆಸಿದ ವಿಸ್ತಾರವಾದ ಕೆರೆ ಒಂದಿದ್ದು, ಅದಕ್ಕೆ ಹೋಲುವ ಕೆರೆಯೊಂದು ಮಂಗಳವೇಡೆಯಲ್ಲಿದ್ದು, ಅದನ್ನು ರೇವಣಸಿದ್ಧರು ಕಟ್ಟಿಸಿದ್ದಾರೆಂದರು ತಾವು ವಿವರಿಸುವ ಪ್ರತಿಯೊಂದು ಘಟನೆಗೂ ಸಾಕ್ಷಿಯಾಗಿ ಸಂಬಂದಿಸಿದ ಚಿತ್ರಗಳನ್ನು ತೋರಿಸುತ್ತ ನೀಡಿದ ಉಪನ್ಯಾಸ ಪರಿಣಾಮಕಾರಿ ಎನಿಸಿತು ರೇವಣಸಿದ್ಧರ ಇಬ್ಬರು ಮಕ್ಕಳಾದ ಚೆನ್ನರೇವಣದೇವಿ ಮತ್ತು ರುದ್ರಮುನಿ ಇವರು ಜನಿಸಿದ್ದು ಮಂಗಳವೇಡೆಯಲ್ಲಿ. ಹೀಗಾಗಿ ರೇವಣಸಿದ್ಧರು ಮಂಗಳವೇಡೆಯ ಭಾಗದವರೇ ಆಗಿರುವಂತೆ ತೋರುತ್ತದೆ ಎಂದು ಡಾ. ದಂಡೆ ಅವರು ಅಭಿಪ್ರಾಯಪಟ್ಟರು.

ವೇದಿಕೆಯ ಮೇಲೆ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ದತ್ತಿ ದಾಸೋಹಿಗಳಾದ ಡಾ.ಜಯಶ್ರೀ ದಂಡೆ ಅವರು ಉಪಸ್ಥಿತರಿದ್ದರು. ಶ್ರೀಮತಿ ವಿಜಯಲಕ್ಷ್ಮಿ ಕೆಂಗನಾಳ ಅವರು ನಡೆಸಿಕೊಟ್ಟ ವಚನಸಂಗೀತ ಎಲ್ಲರ ಗಮನ ಸೆಳೆಯಿತು. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಚ್.ಕೆ. ಉದ್ದಂಡಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here