ಶಹಾಬಾದ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಲಿಕಾ ಮನೋಭಾವವನ್ನಿಟ್ಟುಕೊಂಡು ಹೆಚ್ಚು ಹೆಚ್ಚು ವಿಷಯಗಳನ್ನು ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಮಾತ್ರ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ ಎಂದು ಸಮೂಹ ಸಂಪನ್ಮೂಲ ಅಧಿಕಾರಿ ಶಿವಪುತ್ರ ಕರಣಿಕ್ ಹೇಳಿದರು.
ಅವರು ಸೋಮವಾರ ಮಹಾದೇವಮ್ಮ ಆಸ್ಪಲ್ಲಿ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮದಿಂದ ಕಲಿತು ಹೆತ್ತವರಿಗೆ ಹೆಸರನ್ನು ತರಬೇಕು. ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ನಾಡು, ನುಡಿ, ಸಂಸ್ಕೃತಿ, ಆಚಾರ, ವಿಚಾರವನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು. ಉರ್ದು ಸಿಆರ್‌ಸಿ ಅಯೂಬಖಾನ ಮಾತನಾಡಿ, ವಿದ್ಯೆ ಎನ್ನುವುದು ಯಾರು ಕದಿಯಲಾಗದ ಸಂಪತ್ತು. ಅದನ್ನು ಎಷ್ಟು ಗಳಿಸಿದರೂ ತೆರೆಗೆ ಕಟ್ಟಬೇಕಿಲ್ಲ. ಎಷ್ಟೇ ಖರ್ಚು ಮಾಡಿದರೂ ಖಾಲಿಯಾಗುವುದಿಲ್ಲ. ಬದುಕಿನ ಕೊನೆ ಉಸಿರಿರುವವರೆಗೂ ವಿದ್ಯೆಯನ್ನು ಸಂಪಾದಿಸುತ್ತಲೇ ಇರಬೇಕು.ಕಲಿತ ವಿದ್ಯೆಯನ್ನು ಸಮಾಜದ ಹಿತಕ್ಕೆ ಬಳಸಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಮನೋನಿಗ್ರಹ ಅಗತ್ಯ. ಶ್ರದ್ಧೆ ಮತ್ತು ಏಕಾಗ್ರತೆಯಿಂದ ಜ್ಞಾನಾರ್ಜನೆ ಮಾಡಬೇಕು ಎಂದರು.
ಸಾಹಿತಿ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸುವ ಶಕ್ತಿ ಕೇವಲ ಶಿಕ್ಷಕರಲ್ಲಿದೆ. ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ನೀಡಿ, ಜಾಗೃತಿಯಿಂದ ಅಭ್ಯಾಸ ಮಾಡುವುದರ ಜೊತೆಗೆ ಸರಿಯಾದ ನಿರ್ಧಾರ, ಗುರಿಯೊಂದಿಗೆ ಮುನ್ನಡೆಯಬೇಕೆಂದು ಕಿವಿಮಾತು ಹೇಳಿದರು.
ಮುಖ್ಯಗುರುಮಾತೆ ಶೋಭಾ ಅರಳಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ನಿರಂತರ ಪರಿಶ್ರಮದಿಂದ ಗುರಿಯಡೆಗೆ ಸಾಗಿದಾಗ ಮಾತ್ರ ಉತ್ತಮ ನಾಗರಿಕರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.
ಶಾಲೆಯ ಅಧ್ಯಕ್ಷ ಸೋಮಶೇಖರ ಮರಗೋಳ ಅಧ್ಯಕ್ಷತೆ ವಹಿಸಿದ್ದರು. ನಗರಸಭೆಯ ಸದಸ್ಯೆ ಸಾಬೇರಾ ಬೇಗಂ, ಸುಧೀರ ಕುಲಕರ್ಣಿ, ಶಿಕ್ಷಕಿ ಬಾಯಮ್ಮ ಇತರರು ಇದ್ದರು.
ಶಿಕ್ಷಕ ಜೋಗದನಕರ್ ಪ್ರಾಸ್ತಾವಿಕ ನುಡಿದರು, ಶಿಕ್ಷಕಿ ಶೃತಿ ಕೊಲ್ಲೂರ್ ನಿರೂಪಿಸಿದರು, ಶಿಲ್ಪಾ ಕೊಲ್ಲೂರ ಸ್ವಾಗತಿಸಿದರು, ಚಂದುಲಾಲ ವಂದಿಸಿದರು.