ಗದಗ: ಕನ್ನಡದ ಮೊದಲ ಕವಿ, ಆದಿಕವಿ ಪಂಪ ಜನಿಸಿದ ನಾಡಿನ ಜನತೆ ಕೇವಲ ಶ್ರೀಮಂತಿಕೆಗೆ ಅಷ್ಟೇ ಹೆಸರು ವಾಸಿಯಾಗಿರುವುದಲ್ಲದೇ, ಹೃದಯವಂತಿಕೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ದೊಡ್ಡ ಪ್ರಮಾಣದ ಪ್ರಶಸ್ತಿಯನ್ನು ನನಗೆ ನೀಡುತ್ತಿರುವುದು ಜೀವನದುದ್ದಕ್ಕೂ ಮರೆಯಲಾಗದ ಕ್ಷಣ ಎಂದು ಸಾಹಿತ್ಯ-ಸಂಸ್ಕೃತಿ-ಸಂಶೋಧಕ ಹಾಗೂ ಪ್ರಶಸ್ತಿ ಪುರಸ್ಕೃತ ಡಾ.ವೀರಣ್ಣ ರಾಜೂರ ಹೇಳಿದರು.
ಅವರು ಸ್ಥಳೀಯ ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿ ಸಮಿತಿ ಹಮ್ಮಿಕೊಂಡ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ಶ್ರೀಗಳ ಹೆಸರಿನಲ್ಲಿ ಮೊಟ್ಟ ಮೊದಲ ಬಾರಿಗೆ ನನಗೆ ತಾವು ಪ್ರೀತಿಯಿಂದ ನೀಡುತ್ತಿರುವ ಪ್ರಶಸ್ತಿಯನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸುತ್ತೇನೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದಷ್ಟೇ ದೊಡ್ಡ ಪ್ರಮಾಣದಲ್ಲಿ ಪಂಪನ ವಿಚಾರ ಸಂಕಿರಣ ನಡೆಸಿದ ಕೀರ್ತಿ ಪಟ್ಟಣಕ್ಕೆ ಸಲ್ಲುತ್ತದೆ. ನನಗೆ ದೊರೆತ ಈ ಪ್ರಶಸ್ತಿಯನ್ನು ನನ್ನ ಗುರುಗಳಾದ ಡಾ.ಆರ್.ಸಿ ಹಿರೇಮಠ ಹಾಗೂ ಡಾ.ಎಂ.ಎಂ ಕಲಬುರ್ಗಿ ಅವರಿಗೆ ಸಲ್ಲಿಸುತ್ತೇನೆ ಎಂದರು.
ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತ ರಂಜಾನ ದರ್ಗಾ ಪ್ರಶಸ್ತಿ ಪ್ರದಾನ ಮಾಡಿ, ಸಮಾಜದಲ್ಲಿ ಯಾವುದೇ ಕಾಯಕವನ್ನು ಮಾಡಬೇಕಾದರೆ ತನ್ನ ಸ್ವಂತ ಕಾಯಕ ಎಂದು ಭಾವಿಸಿಕೊಂಡು ಮಾಡಬೇಕು. ಡಾ. ವೀರಣ್ಣ ರಾಜೂರ ಅವರು ಎಲ್ಲ ರೀತಿಯ ಅನುಭವವನ್ನು ಅಳವಡಿಸಿಕೊಂಡು ಬೆಳೆದಿದ್ದಾರೆ. ಸಮಾಜದಲ್ಲಿ ಅವರು ಯಾವುದೇ ಮಹತ್ವಾಕಾಂಕ್ಷೆ ಹೊಂದದೆ ಸಾಧನೆ ಮಾಡಿ, ಯಾವ ಪ್ರಶಸ್ತಿ, ಹುದ್ದೆಗೂ ಆಸೆ ಪಟ್ಟವರಲ್ಲ. ಸಾಹಿತ್ಯ, ಸಂಸ್ಕೃತಿ ಹಾಗೂ ಸಂಶೋಧನೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಡಾ. ವೀರಣ್ಣ ರಾಜೂರಗೆ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿಯನ್ನು ನೀಡಿರುವುದು ಶ್ಲಾಘನೀಯವಾಗಿದೆ ಎಂದರು.
ಸಾನಿಧ್ಯ ವಹಿಸಿದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಮಾತನಾಡಿ, ಲಿಂ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಅವರು ಸಾಹಿತ್ಯ, ಸಂಶೋಧಕ ಹಾಗೂ ಕಲಾವಿದರಿಗೆ ಸದಾಕಾಲ ಪ್ರೋತ್ಸಾಹ ನೀಡುತ್ತಿದ್ದರು. ಅಂತಹ ಪರಮಪೂಜ್ಯರ ಹೆಸರಿನಲ್ಲಿ ಸಂಶೋಧಕ ಡಾ. ವೀರಣ್ಣ ರಾಜೂರಗೆ ಮೊದಲ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ತುಂಬಾ ಸಂತೋಷವಾಗಿದೆ. ಪೂಜ್ಯರು ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿ ಅವರ ಮಾರ್ಗದರ್ಶನದಲ್ಲಿ ನಡೆಯುವಂತೆ ಮಾಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕಾಯಕ ಜೀವಿಗಳಾದ ಶರಣ ಬಸಪ್ಪ ಪಲ್ಲೇದ, ನಿಂಗಣ್ಣ ಹುಗ್ಗಿ, ಎ.ಆಯ್. ನಡಕಟ್ಟಿನ, ಸಂಗಯ್ಯ ಹುಣಸಿಮರದ, ಮಕಬುಲ್‌ಸಾಬ ಬಿಸ್ತಿ, ಶಿವ್ಪಪ್ಪ ಹೊಸಮನಿ, ಕರಿಯಪ್ಪ ಕೌಜಗೇರಿ, ಪ್ರಲ್ಹಾದ ಬೆಳಗಲಿ ಹಾಗೂ ಚನ್ನಬಸಮ್ಮ ಹಗೇದಕಟ್ಟಿಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರೊ.ಎಸ್.ಎಸ್. ಹರ್ಲಾಪೂರ, ಮಲ್ಲಿಕಾರ್ಜುನ ಸುರಕೋಡ, ಹಾಲಪ್ಪ ತುರಕಾಣಿ, ಚಂದ್ರಶೇಖರ ವಸ್ತ್ರದ, ಸುಧಾ ಕೌಜಗೇರಿ, ಮುತ್ತಣ್ಣ ನವಲಗುಂದ, ಮುತ್ತಣ್ಣ ಹಾಳದೋಟರ, ಅನ್ವರ ಹುಬ್ಬಳ್ಳಿ ಹಾಗೂ ಸಾಹಿತಿಗಳು, ಮೊದಲಾದವರು ಉಪಸ್ಥಿತರಿದ್ದರು.