ಕಲಬುರಗಿ: ಹುಡುಗಿಯರು(ಬಾಲಕಿಯರು) ತಮ್ಮ ಶರೀರದಲ್ಲಾಗುವ ಬದಲಾವಣೆಯ ಬಗ್ಗೆ ಗಮನ ವಹಿಸಬೇಕು. ಅವರಲ್ಲಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಯನ್ನು ಅರಿವುವಷ್ಟು ಪ್ರಬುದ್ಧರಾಗಬೇಕು ಎಂದು ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ.ಶಕುಂತಲಾ ಬನಾಳೆ ಅಭಿಪ್ರಾಯ ಪಟ್ಟರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ವಿಶ್ವ ಮಹಿಳಾ ದಿನದ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಮಹಿಳಾ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯ ಆರೋಗ್ಯದಲ್ಲಾಗುವ ಋತುಚಕ್ರದ ಬದಲಾವಣೆ ಹಾಗೂ ಕಾರಣಗಳನ್ನು ತಿಳಿಸಿದರು. ಬಿಳಿಮುಟ್ಟುವಿನಿಂದಾಗುವ ತೊಂದರೆಗಳು ಹಾಗೂ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಹುಡುಗಿಯರು ಮುಂದೆ ಮದುವೆ ಆದ ಮೇಲೆ ಒಂದು ಮಗುವಿಗೆ ಜನ್ಮ ನೀಡುವರು. ಹೀಗಾಗಿ ಪೌಷ್ಠಿಕಾಂಶ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ನಿಮ್ಮ ಆಧುನಿಕ ಜೀವನ ಶೈಲಿಯಿಂದ ನಿಮ್ಮ ಆರೋಗ್ಯ ಹಾನಿ ಮಾಡಿಕೊಳ್ಳಬೇಡಿ ಎಂದು ಎಂಆರ್‌ಐ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಮಧುರಾ ಬನಾಳೆ ಸಲಹೆ ನೀಡಿದರು.
ದಿನಕ್ರಮೇಣ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗುತ್ತಿವೆ. ಸ್ತನ ಕ್ಯಾನ್ಸರಗೆ ವಯಸ್ಸಿನ ಮಿತಿಯಿಲ್ಲ. ಹೀಗಾಗಿ ಬಾಲಕಿಯರು ಆರೋಗ್ಯ ಬಗ್ಗೆ ಜಾಗೃತಿ ವಹಿಸಬೇಕು. ಕಬ್ಬಿಣಾಂಶ ಹಾಗೂ ಪೌಷ್ಠಿಕಾಂಶದ ಆಹಾರವನ್ನು ಹೆಚ್ಚಿನ ರೀತಿಯಲ್ಲಿ ಸೇವಿಸಿ ಎಂದರು. ಖ್ಯಾತ ವೈದ್ಯೆ ಡಾ. ಶರಣಮ್ಮ ಬಿರಾದಾರ ಮಾತನಾಡಿ, ಪ್ರತಿ ಮಹಿಳೆ ಜೀವನದಲ್ಲಿ ಐದು ಹಂತಗಳನ್ನು ತಲಪುತ್ತಾಳೆ. ಮೊದಲು ಶೈಶ್ಯಾವಸ್ಥೆ, ಬಾಲ್ಯಾವಸ್ಥೆ, ಯೌವನಾವಸ್ಥೆ, ವಯಸ್ಕ ಹಾಗೂ ವೃದ್ಯಾಪ್ಯಾ ಹಂತಗಳನ್ನು ದಾಟುತ್ತಾಳೆ. ಸದೃಢ ಭಾರತಕ್ಕೆ ಸದೃಢ ಯುವತಿಯರ ಅವಶ್ಯವಿದೆ ಎಂದರು.
ಪ್ರೊ. ನಿಖತ್ ನಿರೂಪಿಸಿದರು. ವಿದ್ಯಾರ್ಥಿನಿ ಪ್ರಿಯಾಂಕಾ ನಿಂಬಾಳೆ ಪ್ರಾರ್ಥನೆ ಗೀತೆ ಹಾಡಿದರು. ಪ್ರೊ. ಭಾಗ್ಯಲಕ್ಷ್ಮಿ ವಂದಿಸಿದರು. ವಿವಿ ಕುಲಸಚಿವ ಡಾ. ಅನೀಲಕುಮಾರ ಬಿಡವೆ, ವಿವಿ ಡೀನ್ ಡಾ. ಲಕ್ಮಿ ಮಾಕಾ, ಡಾ. ಶಶಿಕಲಾ, ಡಾ. ವಾಣಿಶ್ರೀ ಇತರರು ಇದ್ದರು.