ಕಲಬುರಗಿ: ವೈದಿಕ ವ್ಯವಸ್ಥೆ ವಿರೋಧಿಸಿ ಹುಟ್ಟಿ ಬಂಧಿರುವುದೇ ಲಿಂಗಾಯತ ಧರ್ಮ ಎಂದು ಉದಗೀರ್ ಬಸವ ಪರಿಷತ್ ಪ್ರದೇಶ ಅಧ್ಯಕ್ಷ ಶಿವಾನಂದ ಹೈಬತಪುರ ತಿಳಿಸಿದರು.
ನಗರದ ಬಸವೇಶ್ವರ ವೃತ್ತದ ಬಳಿ ಇರುವ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಡೆದ ಬಸವ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮದ ಅಸ್ಮಿತೆ ಕುರಿತು ಮಾತನಾಡಿದರು.
ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರು ದೀನ, ದಲಿತ, ದಮನಿತರ ಪರವಾಗಿ ದುಡಿದರು. ಬಸವಣ್ಣನ ವಿಚಾರಗಳನ್ನು ನಾವೆಲ್ಲರೂ ಬದುಕಬೇಕು ಎಂದು ತಿಳಿಸಿದರು. ಮಾನಸಿಕ ಗುಲಾಮಗಿರಿಯಿಂದ ಬಿಡುಗಡೆಗೊಳಿಸಿದ ಬಸವಣ್ಣನವರು ಸಮಾಜದಲ್ಲಿನ ಕತ್ತಲೆಯನ್ನು ಹೊಡೆದೋಡಿಸಿದರು ಮಾತ್ರವಲ್ಲ ಮನದ ಮಲಿನತೆಯನ್ನು ತೊಳೆದರು ಎಂದು ಅಭಿಪ್ರಾಯಪಟ್ಟರು.
ಬಸವಣ್ಣನ ವಿರೋಧಿಗಳು ಪಂಚಾಚಾರ್ಯರು, ವೈದಿಕರಲ್ಲ. ನಮ್ಮಲ್ಲಿನ ಸ್ವಾಮೀಜಿಗಳು ಹಾಗೂ ಬಸವಪೀಠಗಳು. ಬಾವಣ್ಣನೇ ನಮಗೆ ಸುಪ್ರೀಂ. ಅವರಿಗಿಂತ ಸುಪ್ರೀಂ ಬೇರಾರೂ ಇಲ್ಲ. ಬಸವಣ್ಣನ ಜಯಂತಿಯಂದು ಕುಣಿದು ಕುಪ್ಪಳಿಸುವುದು ಸರಿಯಲ್ಲ. ಅವರ ಜಯಂತಿಯಂದು ಶೋಬಾಯಾತ್ರೆ ನಡೆಸದೆ, ವಿಚಾರಯಾತ್ರೆ ನಡೆಸಬೇಕು ಎಂದು ಕರೆ ನೀಡಿದರು.
ಬೀದರ್ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಸಾನ್ನಿಧ್ಯ ವಹಿಸಿದ್ದರು. ದುತ್ತರಗಾಂವ ವಿರಕ್ತ ಮಠದ ವಿಶ್ವನಾಥ ಕೋರಣೇಶ್ಬರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ತಿಪ್ಪಣ್ಣಪ್ಪ ಕಮಕನೂರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನ್ಯಾಯವಾದಿ ಸುಭಾಶ್ಚಂದ್ರ ಕೋಣಿನ್, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಅಪ್ಪಾರಾವ ಅತನೂರ, ಹೂಗಾರ ಸಮಾಜದ ಅಶೋಕ ಹೂಗಾರ, ಹೀರಾಬಾಯಿ ಶಿವರಾಯ ಬಳಗಾನೂರ, ಕೆ.ಎಸ್. ವಾಲಿ ಇತರರಿದ್ದರು. ಇದೇವೇಳೆಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಸಂತೋಷ ಹೂಗಾರ ನಿರೂಪಿಸಿದರು. ಅಶೋಕ ಘೂಳಿ ಸ್ವಾಗತಿಸಿದರು. ವೀರಣ್ಣ ಲೊಡ್ಡನ್ ಶರಣು ಸಮರ್ಪಣೆಗೈದರು.