ಕಲಬುರಗಿ: ತೊಟ್ಟಲು ತೂಗುವ ಕೈ ದೇಶವನ್ನೆ ಆಳಬಲ್ಲಳು ಎನ್ನುವಂತೆ ಮಹಿಳೆ ಮನಸ್ಸು ಮಾಡಿದರೆ ಏನೆಲ್ಲ ಸಾಧನೆ ಮಾಡಬಲ್ಲಳು ಎಂಬುದಕ್ಕೆ ಇಂದಿನ ಅನೇಕ ಸಾಧನೆಯ ಮಹಿಳೆಯರೆ ಸಾಕ್ಷಿಯಾಗಿದ್ದಾರೆ ಎಂದು ಬೀದರನ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಖ್ಯಾತ ವೈದ್ಯರಾದ ಡಾ.ಉಮಾದೇವಿ ಬಿ.ದೇಶಮುಖ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ಮಹಿಳಾ ಅಧ್ಯಯನ ಕೇಂದ್ರದ ಅಡಿಯಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಯನ್ನು ಉದ್ಘಾಟಿಸಿ ಮಾತನಾಡಿದರು, ೨೧ನೇ ಶತಮಾನದಲ್ಲಿ ಮಹಿಳೆಯ ಪಾತ್ರ ಬದಲಾಗಿದೆ. ವೃತ್ತಿ ಸಂಸಾರ ಎರಡನ್ನೂ ಸಮನಾಗಿ ನಿಭಾಯಿಸಬಲ್ಲೆ ಎಂದು ಮಾದರಿಯಾಗಿ ನಿಂತಿದ್ದಾಳೆ. ಇಂದಿನ ಬಹುತೇಕ ಪ್ರಮುಖ ಹುದ್ದೆಗಳಲ್ಲಿ , ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ರಾರಾಜಿಸುತ್ತಿದ್ದಾಳೆ. ತನ್ನಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ವಿಶ್ವಮಟ್ಟದ ಗೌರವಕ್ಕೆ ಪಾತ್ರವಾಗುತ್ತಿದ್ದಾಳೆ. ಉದ್ಯೋಗ ಕ್ಷೇತ್ರದಲ್ಲಿ ಹೆಣ್ಣು ಗಂಡಿಗೆ ಸರಿಸಮಾನ ಎಂದು ತೋರಿಸಿಕೊಂಡಿದ್ದರೂ , ಹಲವೆಡೆಗಳಲ್ಲಿ ಇನ್ನೂ ನಡೆಯುತ್ತಿರುವ ಲಿಂಗ ತಾರತಮ್ಯ, ಹೆಣ್ಣು ಭ್ರೂಣಹತ್ಯೆ, ಅತ್ಯಾಚಾರ ಇವುಗಳನ್ನು ತಡೆಯಬೇಕು . ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ಮೌಲ್ಯಗಳು ನಮ್ಮ ಸಮಾಜದ ಕಣ್ಣುಗಳಾಗಬೇಕು. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪುರುಷರ ನೈತಿಕ ಬೆಂಬಲ ದೊರಬೇಕು. ’ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ತತ್ರ ದೇವತಾಃ’ ಎಂಬ ಮಾತು ಕೇವಲ ಮಾತಾಗಿಯೇ ಇರಬಾರದು. ಅದನ್ನು ಆಚರಣೆಗೆ ತರಬೇಕು . ಆಗ ಮಾತ್ರ ಈ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಒಂದು ಒಳ್ಳೆಯ ಸ್ಥಾನ ಸಿಗಲು ಸಾಧ್ಯ. ಹೀಗಾದಲ್ಲಿ ಮಾತ್ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶ ಅರ್ಥಪೂರ್ಣ ಎಂದರು. ಹೆಣ್ಣು ಎಷ್ಟೆ ಗಟ್ಟಿಗಳಾಗಿದ್ದರೂ ನೋವಿಗೆ ಕರಗುತ್ತಾಳೆ. ಕಷ್ಟಕ್ಕೆ ಮರುಗುತ್ತಾಳೆ ತನ್ನೊಳಗಿನ ಮೃದು ಮನಸ್ಸಿಗೆ ಸೋಲುತ್ತಾಳೆ. ತಾಯಿಯಾಗಿ ಪೋಷಿಸುತ್ತಾಳೆ.
ಯಶಸ್ಸು ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂದು ಹೇಳುತ್ತಾರೆ ಹಾಗೆಯೇ ಯಶಸ್ಸು ಮಹಿಳೆಯ ಹಿಂದೆ ಪುರುಷರು ಇರುತ್ತಾರೆ ಎನ್ನುವುದಕ್ಕೆ ತಾವೇ ಸಾಕ್ಷಿ ಎಂದು ಹೇಳಿದರು. ಪುರುಷರು ಸಹ ಮಹಿಳೆಯ ಅಭಿವೃದ್ಧಿಗೆ ಕಾರಣರಾಗುತ್ತಾರೆ ಎಂದು ಹೇಳಿದರು. ವಿದ್ಯಾರ್ಥಿನಿಯರು ನಿರ್ದಿಷ್ಟವಾದ ಗುರಿ ಹೊಂದಿರಬೇಕು ಮತ್ತು ಉತ್ತಮವಾಗಿ ಬೆಳೆದು ಮತ್ತೊಬ್ಬರಿಗೆ ಮಾದರಿಯಾಗಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಮಹಿಳಾ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಮಹಿಳೆಯರು ತಮ್ಮ ಹಕ್ಕು ಕರ್ತವ್ಯಗಳನ್ನು ಪಡೆದುಕೊಳ್ಳುವ ದಿನವಾಗಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಬೇಕು. ತಂದೆ ತಾಯಿಂದಿರು ಸಹ ಹೆಣ್ಣು ಹೆಣ್ಣು ಅಂತಹ ಕೀಳಾಗಿ ಕಾಣಬಾರದು ಅವಳೆ ಮುಂದೊಂದು ದಿನ ನಿಮಗೆ ಕೀರ್ತಿ ತರುವಂತಹವಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಕರ್ನಾಟಕ ಸರಕಾರ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಪಡೆದ ಡಾ.ಉಮಾದೇವಿ ಬಸವರಾಜ ದೇಶಮುಖ ಅವರನ್ನು ಸನ್ಮಾನಿಸಲಾಯಿತು. ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಶಾಂತಲಾ ನಿಷ್ಠಿ, ಐಕ್ಯೂಎಸಿಯ ಸಂಯೋಜಕಿ ಡಾ.ಇಂದಿರಾ ಶೇಟಕಾರ, ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಸೀಮಾ ಪಾಟೀಲ ವೇದಿಕೆಯಲ್ಲಿದ್ದರು.
ಡಾ.ಸೀಮಾ ಪಾಟೀಲ ಪರಿಚಯ ಮತ್ತು ಸ್ವಾಗತಿಸಿದರು, ಡಾ.ಪುಟ್ಟಮಣಿ ದೇವಿದಾಸ ನಿರೂಪಿಸಿದರು. ಶ್ರೀಮತಿ ಜಾನಕಿ ಹೊಸುರ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ಸಿದ್ದಮ್ಮ ಗುಡೇದ, ಶ್ರೀಮತಿ ಸಾವಿತ್ರಿ ಜಂಬಲದಿನ್ನಿ, ಡಾ.ಎನ್.ಎಸ್.ಹೂಗಾರ, ರೇವಯ್ಯ ವಸ್ತ್ರದಮಠ, ಕೃಪಾಸಾಗರ ಗೊಬ್ಬುರ, ಡಾ.ಸಂಗೀತಾ ಪಾಟೀಲ, ಶ್ರೀಮತಿ ಅನಿತಾ ಕೃಪಾಸಾಗರ ಗೊಬ್ಬುರ, ಶ್ರೀಮತಿ ಅನುಸೂಯ ಬಡಿಗೇರ, ಪ್ರಭಾವತಿ ಎಚ್ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.