ಶಹಾಬಾದ: ನಗರದ ನಿಜಾಮ ಬಜಾರ ಬಡಾವಣೆಯಲ್ಲಿರುವ ವಿಭೂತಿ ಪುರುಷ ಸದ್ಗುರು ಸದಾಶಿವ ಬೆಂಕಿತಾತ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ನಾರಾಯಣಸಿಂಗ್ ಠಾಕೂರ ಬೆಂಕಿತಾತನವರ ೬೪ನೇ ಜನ್ಮದಿನೋತ್ಸವವನ್ನು ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪರಮಪೂಜ್ಯ ನಾರಾಯಣಸಿಂಗ್ ಠಾಕೂರ ಬೆಂಕಿತಾತ, ಪ್ರತಿಯೊಂದು ಜೀವಿಗೆ ಹುಟ್ಟು ಮತ್ತು ಸಾವು ಮುಖ್ಯವಲ್ಲ. ಅವನು ಬದುಕಿದ ಮೌಲ್ಯಾಧಾರಿತ ಜೀವನವೇ ಮುಖ್ಯ. ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ, ನೆಲೆ ಪ್ರಾಪ್ತವಾಗುತ್ತದೆ.ಇಂದು ಗೊತ್ತು ಗುರಿಯಿಲ್ಲದೇ ಉತ್ತಮ ಸಂಸ್ಕಾರ ಇಲ್ಲದೇ ಇರುವುದರಿಂದ ಜೀವನ ದುರ್ಬಲಗೊಳ್ಳುತ್ತಿದೆ.ಜಾತಿಗಿಂತ ನೀತಿ,ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ,ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದು ಎಂದು ಸಂತರು,ಶರಣರು ಭೋಧಿಸಿದ್ದಾರೆ ಎಂದು ಹೇಳಿದರು.
ಸಂಜೆ ಸದಾಶಿವ ಬೆಂಕಿತಾತನವರ ಕತು ಗದ್ದುಗೆಗೆ, ಪಾದುಕೆಗಳಿಗೆ ರುದ್ರಾಭಿಷೇಕ್, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಮಹಾಪೂಜೆ ನಡೆಯಿತು. ಕಿರಿಯ ಪೂಜ್ಯರಾದ ಮಂಗಲಸಿಂಗ್ ಠಾಕೂರ ಬೆಂಕಿತಾತ ಅವರಿಂದ ಪೂಜ್ಯರ ಪಾದಪೂಜೆ ನಡೆಯಿತು. ಸಾವಿರಾರು ಜನ ಭಕ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಲಾಯಿತು. ಭಕ್ತರು ಪೂಜ್ಯರಿಗೆ ಸತ್ಕರಿಸಿ, ದರ್ಶನಾಶೀರ್ವಾದ ಪಡೆದರು. ಮುಖಂಡರಾದ ಲೋಹಿತ್ ಕಟ್ಟಿ, ತಾಪಂ.ಮಾಜಿ ಸದಸ್ಯ ನಿಂಗಣ್ಣ ಹುಳಗೋಳ, ನಗರ ಸಭೆ ಸದಸ್ಯ ಡಾ.ಅಹ್ಮದ ಪಟೇಲ್, ಸಾಹೇಬಗೌಡ ಬೋಗುಂಡಿ, ನಾಗರಾಜ ದಂಡಾವತಿ, ರೇವಣಸಿದ್ದ ಮಾಣಿಕ, ನಾಗರಾಜ ಕಮರವಾಡಿ, ರಾಕೇಶ ಮಾಣಿಕ, ಮಲ್ಲಿಕಾರ್ಜುನ ಹಾವನೂರ, ರಾಜು ಹೊಸ್ಮನಿ, ಮಲ್ಲಪ್ಪ ಕರಗಾರ, ಸಹದೇವ ಕ್ಯಾಸಪ್ಪನಳ್ಳಿ, ದೇವೆಂದ್ರ ಅಣಕಲ್,ಭೀಮು ಮದ್ರಿ, ಸತೀಷ, ಮಾರುತಿ ಜೋಶಿ, ಲಕ್ಷ್ಮಣ ಸಿಂಗ್ ಮರತೂರ, ಗೋಪಾಲಸಿಂಗ್ ಶಹಾಪೂರ, ಬಂಕಟ್‌ಸಿಂಗ್ ಶಹಾಪೂರ, ಶಂಬುಲಿಂಗ ನಾಯ್ಕಲ್ ಸೇರಿದಂತೆ ಸಾವಿರಾರು ಜನ ಭಕ್ತರು ಪಾಲ್ಗೊಂಡರು. ಮಹಾಪ್ರಸಾದ ವಿತರಣೆ, ಅಹೋರಾತ್ರಿ ಭಜನೆ ಕಾರ್ಯಕ್ರಮ ನಡೆಯಿತು.