ಸುರಪುರ: ಸರಕಾರ ಉನ್ನತ ಅಧಿಕಾರಿಗಳ ಆದೇಶವನ್ನು ಕಡೆಗಣಿಸಿರುವ ಭೀಮರಾಯನ ಗುಡಿ ಕಾಡಾ ಅಧಿಕಾರಿ ವಿ.ಕೆ.ಪೋತದಾರರನ್ನು ಅಮಾನತ್ತು ಮಾಡಲೆಬೇಕೆಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕೋಬ ದೊರೆ ಸರಕಾರಕ್ಕೆ ಒತ್ತಾಯಿಸಿದರು.
ನಗರದ ಡಾ: ಬಾಬಾ ಸಾಹೇಬ ಅಂಬೇಡ್ಕರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಹಸನಾಪುರ ಕಾಡಾ ಕಚೇರಿಯ ಮೂಲಕ ನಡೆಸಲಾದ ಅನೇಕ ಕಾಮಗಾರಿಗಳು ಬೋಗಸಾಗಿದ್ದು ಪ್ರಮ ಕೈಗೊಳ್ಳಲು ಸೇರಿದಂತ ಅನೇಕ ವಿಷಯಗಳ ಕುರಿತು ಮಾಹಿತಿ ನೀಡಲು ಕೋರಿದ್ದರು ಯಾವುದೆ ಮಾಹಿತಿ ನೀಡುತ್ತಿಲ್ಲ.ಅಲ್ಲದೆ ಇದೇ ವಿಷಯದ ಬಗ್ಗೆ ಕಾಡಾ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಮನವಿ ಮಾಡಿದ್ದರಿಂದ,ಕಾಡಾ ಇಲಾಖೆಯ ನಿರ್ದೇಶಕರು ನಮಗೆ ಮಾಹಿತಿ ನೀಡುವಂತೆ 30-03-2019ರಂದು ಆದೇಶ ಮಾಡಿದ್ದಾರೆ.ಆದರೆ ಇಲ್ಲಿಯ ಅಧಿಕಾರಿ ವಿ.ಕೆ.ಪೋತದಾರ ಮೇಲಾಧಿಕಾರಿಗಳ ಆದೇಶಕ್ಕು ಕಿಮ್ಮತ್ತು ನೀಡದೆ ನಿರ್ಲಕ್ಷ್ಯ ತೋರಿದ್ದಾರೆ.ಆದ್ದರಿಂದ ಸರಕಾರ ಈ ಅಧಿಕಾರಿ ಪೋತದಾರರನ್ನು ಕೂಡಲೆ ಅಮಾನತ್ತು ಮಾಡಬೇಕು.ಇಲ್ಲವಾದಲ್ಲಿ ಈ ತಿಂಗಳ 12ನೇ ತಾರೀಖಿನಂದು ಭೀಮರಾಯನಗುಡಿ ಕಾಡಾ ಕಚೇರಿ ಮುಂದೆ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಚೆಕ್ ಡ್ಯಾಂ ನಿರ್ಮಾಣದಲ್ಲಿ ನಡೆದ ಅವ್ಯವಹಾರ ತನಿಖೆ ಮಾಡಿಸುವಂತೆ,ಎಫ್.ಐ.ಸಿ ಕೆಲಸಗಳಲ್ಲಿನ ಅವ್ಯವಹಾರ ತನಿಖೆ ಮಾಡಿಸುವಂತೆ.ಟೆಂಡರ್ ಮಾಡಿ ಅನೇಕ ದಿನಗಳಾದರು ಕಾಮಗಾರಿ ಆರಂಭಿಸದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ.ಇನ್ನು ಅನೇಕ ಬೇಡಿಕೆಗಳುಳ್ಳ ಮನವಿಯನ್ನು ತಹಸೀಲ್ ಸಿರಸ್ತೆದಾರ ಪ್ರವೀಣ ಕುಮಾರ ಮೂಲಕ ಕಾಡಾ ನಿರ್ದೇಶಕರಿಗೆ ಸಲ್ಲಿಸಿದರು.ಅಂಬೇಡ್ಕರ ವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರಿಂದ ಕೆಲ ಕಾಲ ಬಸ್ ಸಂಚಾರಕ್ಕೆ ತೊಂದರೆಯುಂಟಾಗಿತ್ತು.
ಪ್ರತಿಭಟನೆಯಲ್ಲಿ ಮಾನಯ್ಯ ದೊರೆ,ಕೇಶಣ್ಣ ದೊರೆ,ಗೋಪಾಲ ಬಾಗಲಕೋಟೆ,ಬಸವರಾಜ ಕವಡಿಮಟ್ಟಿ,ಕೃಷ್ಣಾ ದಿವಾಕರ,ದೇವಪ್ಪ ದೇವರಮನಿ,ರಾಮಕೃಷ್ಣಾ ಬಿಳ್ಹಾರ,ಗುರುಪ್ರಸಾದ ನಾಯಕ ಸೇರಿದಂತೆ ಅನೇಕರಿದ್ದರು.