ಶಹಾಬಾದ: ಕೊರೊನಾ ವೈರಸ್ ಮಹಾಮಾರಿ ಸೋಂಕಿನ ಭೀತಿ ಹಿನ್ನೆಲೆಲಯಲ್ಲಿ ನಗರದಲ್ಲಿ ಸಭೆ ಸಮಾರಂಭಗಳು ನಡೆಸದಂತೆ, ಹೊಟೇಲ್, ವೈನಶಾಪ್, ಬಾರ್‍ಗಳು ತೆರೆಯದಂತೆ ತಾಲೂಕಾಢಳಿತ ಆದೇಶ ಹೊರಡಿಸಿದ ನಿಮಿತ್ತ ಸೋಮವಾರ ಜನಸಂಚಾರ ವಿರಳವಾಗಿತ್ತು.
ಸರ್ಕಾರದ ಆದೇಶದ ಮೇರೆಗೆ ಕೊರಾನಾ ವೈರಸ್ ಹರಡದಂತೆ ಮುಂಜಾಗ್ರತ ಕೈಗೊಂಡ ಪರಿಣಾಮವಾಗಿ ಜನರು ಮನೆಯಿಂದ ಹೊರಬರಲು ಹಿಂದೆಮುಂದೆ ನೋಡುತ್ತಿದ್ದು, ನಗರಕ್ಕೆ ಜನರು ಬರುವುದು ಹಾಗೂ ಬೇರೆ ಊರಿಗೆ ಹೋಗುವ ಜನರ ಸಂಖ್ಯೆ ಕಡಿಮೆಯಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ಜನದಟ್ಟಣೆಯಿಲ್ಲದೇ ಬಿಕೋ ಎನ್ನುತ್ತಿತ್ತು. ಯಾವಾಗಲೂ ರೇಲ್ವೆ ನಿಲ್ದಾಣದ ಸಮೀಪ ನೂರಾರು ಜನರ ಜನದಟ್ಟಣೆ ಕಾಣುತ್ತಿತ್ತು.ಆದರೆ ಕೊರೊನಾ ಎಫೆಕ್ಟ್‍ಗೆ ರೇಲ್ವೆ ನಿಲ್ದಾಣ ಸುತ್ತಮುತ್ತಲಿನಲ್ಲಿ ಯಾವುದೇ ಅಂಗಡಿಗಳು ತೆರೆದಿರಲಿಲ್ಲ.ಲ್ಲದೇ ಲಾಡ್ಜ್, ಬಾರ್, ರೆಸ್ಟೋರೆಂಟ ಮುಚ್ಚಿದ್ದರಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ ಎಂದು ವ್ಯಾಪಾರಸ್ಥರು ಅಸಮಾಧಾನ ಹೊರಹಾಕಿದರು.
ಕೊರೊನಾ ಹರಡದಂತೆ 7ನೇ ತರಗತಿಯಿಂದ 9 ತರಗತಿವರೆಗಿನ ಮಕ್ಕಳ ಪರೀಕ್ಷೆ ಮುಂದೂಡಲಾಗಿದೆ.ಆದರೆ ತಾಲೂಕಿನಲ್ಲಿ ಕೆಲವೊಂದು ಶಾಲೆಗಳು ಸರ್ಕಾರದ ಆದೇಶದ ವಿರುದ್ಧ ಪರೀಕ್ಷೆ ತೆಗೆದುಕೊಳ್ಳಲು ಮುಂದಾಗಿದ್ದರು ಎನ್ನಲಾಗಿದೆ. ಸ್ಥಳೀಯ ಸಿಆರ್‍ಸಿ ಅವರು ತಿಳಿಹೇಳಿ ಹೇಳಿದ್ದಾರೆ. ಇಂತಹ ಘಟನೆಗಳು ಕಂಡು ಬಂದರೆ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. – ಶಂಕ್ರಮ್ಮ ಢವಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ತಾಪೂರ.
ಕೊರೊನಾ ವೈರಸ್ ಸೊಂಕು ಹರಡದಂತೆ ಮದುವೆ, ಸಮಾರಂಭ ಹಾಗೂ ಮಾರ್ಚ 23ರಿಂದ ನಡೆಯುವ ದೇವತೆಗನೂರಿನ ಶಿವಯೋಗೇಶ್ವರ ಜಾತ್ರೆಯನ್ನು ಕೂಡ ಮುಂದೂಡಲಾಗಿದೆ. ಯಾವುದೇ ಜನರು ಸೇರುವ ಕಾರ್ಯಕ್ರಮಗಳನ್ನು ನಡೆಸದಂತೆ ಸರ್ಕಾರ ಆದೇಶ ಹೊರಡಿಸಿದ್ದರಿಂದ ಕಲ್ಯಾಣ ಮಂಟಪಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.
ಸಾರ್ವಜನಿಕರು ಹೊರದೇಶದಿಂದ ಬಂದ ಹಾಗೂ ಬುರುವವರ ಮಾಹಿತಿ ತಪ್ಪದೇ ಮಾಹಿತಿ ನೀಡಿ.ಅಲ್ಲದೇ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವಿನಿಂದ ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿ ಮನೆಯಿಂದ ಹೊರಬರದೇ ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿಕೊಳ್ಳಬೇಕು.ಆದಷ್ಟು ಮಾಸ್ಕ್ ಧರಿಸಿ ಕೊರೊನಾ ವೈರಸ್ ಹರಡದಂತೆ ಸಹಕರಿಸಬೇಕು. – ಸುರೇಶ ವರ್ಮಾ ತಹಸೀಲ್ದಾರ ಶಹಾಬಾದ.
ನಗರದ ಮುಖ್ಯ ಬಜಾರನಲ್ಲಿ ಬಂಡಿಯ ಮೇಲೆ ಹಣ್ಣು ಮಾರಾಟಗಾರರನ್ನು ಬಿಟ್ಟರೇ ಬಹುತೇಖ ಎಲ್ಲಾ ಅಂಗಡಿಗಳು ಮುಚ್ಚಲಾಗಿತ್ತು. ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಸಾರ್ವಜನಿಕರು ಆಗ್ರಹಿಸಿದಕ್ಕೆ ಅವುಗಳನ್ನು ಮುಚ್ಚಲು ಕಟ್ಟನಿಟ್ಟಾಗಿ ಆದೇಶಿಸಲಾಗಿತ್ತು. ಅಲ್ಲದೇ ರಾಜ್ಯ ಸರ್ಕಾರ 7ರಿಂದ 9 ನೇ ತರಗತಿವರೆಗೆ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದ್ದರೂ ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಬಂದು ಮತ್ತೆ ಮನೆ ಕಡೆಗೆ ತೆರಳುವಂತಾಗಿದೆ.
ಬಸ್ ನಿಲ್ದಾಣದಲ್ಲಿ ಯಾವಾಗಲೂ ಜನಜಂಗುಳಿಯಿಂದ ಕೂಡಿರುವ ಸ್ಥಳ ಕೊರೊನಾ ಭೀತಿಗೆ ಸಂಪೂರ್ಣ ಜನರಿಲ್ಲದೇ ಸ್ಮಶಾನ ಸ್ಥಿತಿ ಆವರಿಸಿದಂತಾಗಿತ್ತು.ಬಸ್‍ಗಳಲ್ಲಿ ಪ್ರಯಾನೀಕರ ಸಂಖ್ಯೆ ತೀರ ವಿರಳವಾಗಿತ್ತು. ಪ್ರತಿ ಬಸ್‍ನಲ್ಲಿ ಕೇವಲ ಒಂದೆರಡು ಜನ ಮಾತ್ರ ಪ್ರಯಾಣಿಕರು ಕಂಡುಬರುತ್ತಿತ್ತು.
ಇದರಿಂದ ಸಾರಿಗೆ ಇಲಾಖೆಗೆ ನಷ್ಟ ಅನುಭವಿಸುವಂತಾಗಿದೆ. ಇತ್ತ ತರಕಾರಿ ಮಾರುಕಟ್ಟೆ ಕಡೆಗೂ ಜನರು ಮುಖಮಾಡದೇ ಮನೆಯಲ್ಲಿಯೇ ಉಳಿದು ಗೃಹ ಬಂಧನಕ್ಕೆ ಜಾರಿಕೊಂಡ ಸನ್ನಿವೇಶ ಮಾತ್ರ ಸರ್ವೆ ಸಾಮಾನ್ಯವಾಗಿತ್ತು.