ಕಲಬುರಗಿ: ಕೊರೋನಾ ಸೋಂಕಿನಿಂದ ವ್ಯಕ್ತಿಯೋರ್ವ ಮೃತರಾದರಿಂದ ಕಲಬುರಗಿಯಲ್ಲಿ ಕೊರೋನಾ ಭೀತಿ ಹೆಚ್ಚಿದ್ದು, ಮುಂಜಾಗ್ರತ ಕ್ರಮವಾಗಿ ಕಲಬುರಗಿ ಜಿಲ್ಲೆಯ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಮತ್ತು ಲೋಕೋಪಯೋಗಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಬೆಂಗಳೂರಿನಿಂದ ಜಿಲ್ಲೆಯ ಶಾಸಕರ ಜೊತೆಗೂಡಿ ಕಲಬುರಗಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಜಿಲ್ಲೆಯ ಕೊರೋನಾ ಪರಿಸ್ಥಿತಿ ಅವಲೋಕಿಸಿ ಮಾತನಾಡಿದರು.
ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾದ ಶ್ರೀ ದತ್ತನ ಕ್ಷೇತ್ರ ದೇವಲ ಗಾಣಗಾಪುರಕ್ಕೆ ಮಹಾರಾಷ್ಟ್ರ ರಾಜ್ಯದಿಂದ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಮಹಾರಾಷ್ಟ್ರದಲ್ಲಿ ಈಗಾಗಲೆ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗಿ ಕಂಡುಬಂದಿದ್ದರಿಂದ, ಅಲ್ಲಿಂದ ಬರುವ ಭಕ್ತರ ಮೇಲೆ ನಿಗಾ ವಹಿಸುವ ಅವಶ್ಯಕತೆಯಿದೆ. ಅದೇ ರೀತಿಯಲ್ಲಿ ಕಲಬುರಗಿ ನಗರದ ಖಾಜಾ ಬಂದೇ ನವಾಜ್ ದರ್ಗಾಕ್ಕೆ ಆಂಧ್ರಪ್ರದೇಶ, ತೆಲಂಗಾಣಾದಿಂದ ಜನರು ಬರುತ್ತಾರೆ. ಇಲ್ಲಿ ಜನಸಂದಣಿಯಾಗದಂತೆ ನೋಡಿಕೊಳ್ಳಿ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.
ಇದೇ ಮಾರ್ಚ್ ೨೨ ರಿಂದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಶ್ರೀಶೈಲ್ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಯುಗಾದಿ ಮಹೋತ್ಸವ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತಾದಿಗಳಿಗೆ ಅರಿವು ಮೂಡಿಸುವ ಮೂಲಕ ಹೆಚ್ಚಿನ ಜನ ಅಲ್ಲಿಗೆ ಹೋಗದಂತೆ ಮನವರಿಕೆ ಮಾಡಿ. ಶಾಲೆ-ಕಾಲೇಜುಗಳಿಗೆ ಈಗಾಗಲೆ ರಜೆ ನೀಡಿರುವುದರಿಂದ ವಸತಿ ನಿಲಯದಲ್ಲಿರುವ ಮಕ್ಕಳಿಗೆ ಮನೆಗೆ ಕಳುಹಿಸಿಕೊಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಕೊರೋನಾ ಸೊಂಕಿನಿಂದ ಮೃತರಾದ ಕಲಬುರಗಿ ವ್ಯಕ್ತಿಯ ಮನೆ ಸುತ್ತಮುತ್ತ ತೀವ್ರ ನಿಗಾ ವಹಿಸಬೇಕು ಮತ್ತು ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಔ?ಧಿ ಮತ್ತು ಅನುದಾನದ ಕೊರತೆಯಿದಲ್ಲಿ ಸರ್ಕಾರದ ಗಮನಕ್ಕೆ ತನ್ನಿ. ಕೂಡಲೆ ಕ್ರಮ ಕೈಗೊಳ್ಳಲಾಗುವುದು. ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತವು ಪ್ರಕೃತಿ ವಿಕೋಪ ಪರಿಹಾರ ನಿಧಿ ಬಳಸಿಕೊಳ್ಳಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
೨೪ ಗಂಟೆ ಕಾರ್ಯನಿರ್ವಹಿಸಬೇಕು: ಮೆಡಿಕಲ್ ಎಮರ್ಜೆಂಸಿಯ ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ೨೪ ಗಂಟೆ ಅಲರ್ಟ್ ಆಗಿ ಕೆಲಸ ನಿರ್ವಹಿಸಬೇಕು. ೮ ಗಂಟೆಕ್ಕೊಮ್ಮೆ ಪಾಳಿಯಲ್ಲಿ ಕಾರ್ಯನಿರ್ವಹಿಸಲು ವೈದ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಡಿ.ಸಿ.ಗೆ ನಿರ್ದೇಶನ ನೀಡಿದರು.
ಅಗತ್ಯ ವಸ್ತುಗಳಿಗೆ ತೊಂದರೆಯಾಗದಿರಲಿ: ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಬಂದ್ ವಾತಾವರಣ ಇರುವುದರಿಂದ ದೈನಂದಿನ ಅಗತ್ಯ ವಸ್ತುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಆಹಾರ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಬೇಕು ಮತ್ತು ಎಲ್ಲೆಡೆ ಸ್ವಚ್ಛ ಕುಡಿಯುವ ನೀರು ಪೂರೈಕೆಯಾಗಬೇಕು ಎಂದರು.
ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ ಕಲಬುರಗಿ ಮೃತ ವ್ಯಕ್ತಿಯ ಮನೆ ಸುತ್ತಮುತ್ತ ೫ ಕಿ.ಮಿ. ವ್ಯಾಪ್ತಿಯನ್ನು ಕಂಟೇನ್‌ಮೆಂಟ್ ಮತ್ತು ಬಫರ್ ಝೋನ್ ಎಂದು ಗುರುತಿಸಿ ಅಲ್ಲಿನ ನಿವಾಸಿಗಳಿಗೆ ಸ್ಕ್ರೀನಿಂಗ್ ಮತ್ತು ಅರಿವು ಮೂಡಿಸುವ ಕಾರ್ಯ ಮುಂದುವರೆದಿದೆ. ಇದಕ್ಕಾಗಿ ೩೦೦೦ ಮನೆಗಳನ್ನು ಗುರುತಿಸಲಾಗಿದೆ. ಇದಲ್ಲದೆ ಜನಸಂದಣಿ ಕಡಿಮೆಗೊಳಿಸಲು ಮಾಲ್, ಸಿನಿಮಾ ಚಿತ್ರಮಂದಿರ, ಬಾರ್ ಮತ್ತು ರೆಸ್ಟೋರೆಂಟ್ ಬಂದ್ ಮಾಡಿದಲ್ಲದೆ ಸಮಾವೇಶ-ಸಮಾರಂಭಗಳಿಗೂ ಕಡಿವಾಣ ಹಾಕಿದೆ. ಜಿಲ್ಲೆಯ ಗಡಿ ಭಾಗದಲ್ಲಿ ೧೭ ಚೆಕ್ ಪೋಸ್ಟ್ ಸ್ಥಾಪಿಸಿ ಹೊರಗಿನಿಂದ ಬರುವವರನ್ನು ತಪಾಸಣೆ ಮಾಡಲಾಗುತ್ತಿದೆ ಎಂದರು.
ಕಲಬುರಗಿ ನಗರ ಪೊಳಿಸ್ ಆಯುಕ್ತ ಎಂ.ಎನ್.ನಾಗರಾಜ ಮಾತನಾಡಿ ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಸರ್ಕಾರದ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇ.ಎಸ್.ಐ.ಸಿ.ನಲ್ಲಿ ಸ್ಥಾಪಿಸಿರುವ ಹೋಂ ಕ್ವಾರಂಟೈನ್ ವಾರ್ಡ್‌ಗೆ ೧೦೦ ಜನ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಿದೆ. ೩೦ನೇ ವಾರ್ಡ್ ಸುತ್ತಮುತ್ತ ೫ ಚೆಕ್ ಪೋಸ್ಟ್ ಸ್ಥಾಪಿಸಿ ಒಳ ಮತ್ತು ಹೊರ ಹೋಗುವವರ ಮೇಲೆ ನಿಗಾ ಇರಿಸಿದೆ ಎಂದರು.
ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿಗಳೊಂದಿಗೆ ಜಿಲ್ಲೆಯ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ ಇದ್ದರು. ಇತ್ತ ಕಲಬುರಗಿಯಲ್ಲಿ ಕಲಬುರಗಿ ಎಸ್.ಪಿ. ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ರಾಜಾ ಪಿ., ಅಪರ ಜಿಲ್ಲಾಧಿಕಾರಿ ರಾಚಪ್ಪ, ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಶರಣಪ್ಪ, ಇ.ಎಸ್.ಐ.ಸಿ. ಡೀನ್ ಡಾ.ಎ.ಎಲ್.ನಾಗರಾಜ ಇದ್ದರು.