ವಾಡಿ: ಬಿಕೋ ಎನ್ನುತ್ತಿರುವ ಬೀದಿಗಳ ಬದಿಯಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ಬಲು ಜೋರಾಗಿ ನಡೆದಿದ್ದು, ಒಡಲ ಬಿಸಿಯ ತಾಪ ತಗ್ಗಿಸಿ ತಂಪು ನೀಡಬೇಕಾದ ಕಲ್ಲಂಗಡಿ ಕಾಯಿಗಳು ಬೆಲೆ ಬಿಸಿಯಿಂದ ಕೈ ಸುಡುತ್ತಿವೆ.
ಪಟ್ಟಣದ ವಿವಿಧೆಡೆ ಕಂಡು ಬರುತ್ತಿರುವ ಕಲ್ಲಂಗಡಿ ಮಾರಾಟದ ದರ ಕೈಗೆಟುಕದಂತಾಗಿ ಗ್ರಾಹಕರ ಜೇಬಿಗೆ ಕನ್ನ ಬೀಳುತ್ತಿದೆ. ಬೇಸಿಗೆಯ ಸುಡು ಬಿಸಿಲಿಗೆ ಗ್ರಾಹಕರ ಗಮನ ಸೆಳೆಯುತ್ತಿರುವ ಕಲ್ಲಂಗಡಿ ಕಾಯಿಗಳು, ಬೆಲೆ ಏರಿಕೆಯ ಮಧ್ಯೆಯೂ ಮಾರಾಟವಾಗುತ್ತಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಒಂದು ಕಲ್ಲಂಗಡಿ ಕಾಯಿ ನಾಲ್ಕು ಅಥವ ಐದು ಕೆಜಿ ತೂಕ ತೂಗುತ್ತಿವೆ. ವ್ಯಾಪಾರಿಗಳು ಒಂದು ಕಾಯಿಗೆ ೬೦ ರಿಂದ ೭೦ ರೂ. ಬೆಲೆ ನಿಗದಿಪಡಿಸಿ ಮಾರಾಟ ಮಾಡುತ್ತಿದ್ದಾರೆ.
ಕೊರೊನಾ ವೈರಸ್ ಕಟ್ಟೆಚ್ಚರದ ಮಧ್ಯೆ ದಿನಸಿ ಖರೀದಿಗೆ ಮಾರುಕಟ್ಟೆಗೆ ಬರುತ್ತಿರುವ ಜನರು, ಕಲ್ಲಂಗಡಿ ಕೈಗೆತ್ತಿಕೊಂಡು ಚೀಲಕ್ಕೆ ಇಳಿಸುತ್ತಿದ್ದಾರೆ. ಹಲವರು ದರ ಬಿಸಿಯಿಂದ ಖರೀದಿಯಿಂದ ದೂರ ಉಳಿಯುತ್ತಿದ್ದಾರೆ. ಖಡಕ್ ಬಿಸಿಲಿನ ಆರ್ಭಟ ಆರಂಭವಾಗಿದ್ದು, ಬಾಯಾರಿಕೆಯಿಂದ ಬಳಲುವ ಗಂಟಲುಗಳಿಗೆ ಕಲ್ಲಂಗಡಿ ತಂಪು ನೀಡುತ್ತಿದೆ.